Bangalore News: ಶೂನ್ಯ ಮಳೆಯೊಂದಿಗೆ ಏಪ್ರಿಲ್ ತಿಂಗಳು ಮುಗಿಸಿದ ಬೆಂಗಳೂರು; 1983ರ ಬಳಿಕ ಇದೇ ಮೊದಲು; ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಶೂನ್ಯ ಮಳೆಯೊಂದಿಗೆ ಏಪ್ರಿಲ್ ತಿಂಗಳು ಮುಗಿಸಿದ ಬೆಂಗಳೂರು; 1983ರ ಬಳಿಕ ಇದೇ ಮೊದಲು; ವರದಿ

Bangalore News: ಶೂನ್ಯ ಮಳೆಯೊಂದಿಗೆ ಏಪ್ರಿಲ್ ತಿಂಗಳು ಮುಗಿಸಿದ ಬೆಂಗಳೂರು; 1983ರ ಬಳಿಕ ಇದೇ ಮೊದಲು; ವರದಿ

ಏಪ್ರಿಲ್ 19 ಮತ್ತು 20 ರಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಸ್ವಲ್ಪ ಮಳೆಯಾಗಿದ್ದರೂ, ನಗರದ ವೀಕ್ಷಣಾಲಯದಲ್ಲಿ ದಾಖಲಿಸಲಾಗಿಲ್ಲ. 1983ರ ಬಳಿಕ ಇದೇ ಮೊದಲ ಬಾರಿಗೆ ಮಳೆ ಇಲ್ಲದೆ ಏಪ್ರಿಲ್ ತಿಂಗಳು ಮುಗಿದಿದೆ.

ಬೆಂಗಳೂರು ನಗರ 2024ರ ಏಪ್ರಿಲ್ ತಿಂಗಳಿನಲ್ಲಿ ಶೂನ್ಯ ಮಳೆಯೊಂದಿಗೆ ಮುಗಿಸಿದೆ. 1983ರ ಬಳಿಕ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆಯಾಗಿದೆ.
ಬೆಂಗಳೂರು ನಗರ 2024ರ ಏಪ್ರಿಲ್ ತಿಂಗಳಿನಲ್ಲಿ ಶೂನ್ಯ ಮಳೆಯೊಂದಿಗೆ ಮುಗಿಸಿದೆ. 1983ರ ಬಳಿಕ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆಯಾಗಿದೆ.

ಬೆಂಗಳೂರಿನಲ್ಲಿ 2024ರ ಏಪ್ರಿಲ್ ತಿಂಗಳು ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಶುಷ್ಕ ಏಪ್ರಿಲ್ ಎಂದು ಗುರುತಿಸಲ್ಪಟ್ಟಿದೆ. ಏಕೆಂದರೆ ನಗರದ ಭಾರತೀಯ ಹವಾಮಾನ ವೀಕ್ಷಣಾಲಯ (ಐಎಂಡಿ) ನಗರದಲ್ಲಿ ಯಾವುದೇ ಮಳೆಯನ್ನು ಕಂಡಿಲ್ಲ. ನಗರದಲ್ಲಿ ಹಿಂದಿನ ಏಪ್ರಿಲ್‌ ತಿಂಗಳಲ್ಲಿ ಶೂನ್ಯ ಮಳೆಯಾಗಿದೆ. ಎಂದು ಐಎಂಡಿ ಹಿರಿಯ ವಿಜ್ಞಾನಿ ಎ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕಳೆದ 41 ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ಮಳೆಯಾಗದಿರುವುದು ಇದೇ ಮೊದಲು. ಅಸಾಮಾನ್ಯ ಶಾಖಕ್ಕೆ ಕಾರಣವಾದ ಎಲ್ ನಿನೊ ಸ್ಥಿತಿಯು ತಟಸ್ಥ ಅಥವಾ ಶೂನ್ಯಕ್ಕೆ ರೂಪಾಂತರಗೊಳ್ಳುವ ಸಾಧ್ಯತೆಯಿದೆ. ನಾವು ಲಾ ನಿನಾ ಸ್ಥಿತಿಯನ್ನು ನಿರೀಕ್ಷೆ ಇದ್ದು, ಇದರ ಪರಿಣಾಮವಾಗಿ ಮಳೆಯಾಗುತ್ತದೆ ಎಂದು ವರದಿಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜಾಗತಿಕ ತಾಪಮಾನ ಏರಿಕೆ, ತ್ವರಿತ ನಗರೀಕರಣ, ಜನಸಂಖ್ಯೆಯ ಹೆಚ್ಚಳ ಹಾಗೂ ಎಲ್ ನಿನೊ ಐಟಿ ಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಕಾರಣಗಳಾಗಿವೆ ಎಂದು ಹಿರಿಯ ವಿಜ್ಞಾನಿ ಹೇಳಿದ್ದಾರೆ. ಏಪ್ರಿಲ್ 19 ಮತ್ತು 20 ರಂದು ನಗರದ ಕೆಲವು ಭಾಗಗಳಲ್ಲಿ ಸ್ವಲ್ಪ ಮಳೆಯಾಗಿದ್ದರೂ, ಇದನ್ನು ನಗರದ ವೀಕ್ಷಣಾಲಯದಲ್ಲಿ ದಾಖಲಿಸಲಾಗಿಲ್ಲ.

ಏಪ್ರಿಲ್ 28ರ ಭಾನುವಾರ ಬೆಂಗಳೂರಿನಲ್ಲಿ 38.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಕಳೆದ ಐದು ದಶಕಗಳಲ್ಲಿ ಎರಡನೇ ಅತಿ ಹೆಚ್ಚು ತಾಪಮಾನ ಎಂದು ಹೇಳಲಾಗಿದೆ. 2016ರ ಏಪ್ರಿಲ್ 25ರಂದು ಬೆಂಗಳೂರಿನಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ವರ್ಷ ಏಪ್ರಿಲ್ 28 ರಂದು 38.5 ಡಿಗ್ರಿ ಸೆಲ್ಸಿಯಸ್ ಮತ್ತು ಏಪ್ರಿಲ್ 27 ರಂದು 38 ಡಿಗ್ರಿ ಸೆಲ್ಸಿಯಸ್ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದೆ. ರಣ ಬಿಸಿಲಿನಿಂದ ನಗರದ ಜನರು ತತ್ತರಿಸಿ ಹೋಗಿದ್ದಾರೆ. ಮಳೆಗಾಗಿ ಎದುರು ನೋಡುವಂತಾಗಿದೆ.

ಬಿಸಿಗಾಳಿಯ ನಡುವೆ ಮೇ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ವಿಜಯಪುರ, ಹಾಸನ, ಚಿತ್ರದುರ್ಗ, ರಾಯಚೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಏಪ್ರಿಲ್ 30 ರಿಂದ ಮೇ 3 ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಈ ಹಿಂದೆ ಹೇಳಿತ್ತು. ಆದರೆ ಇದೀಗ ಮೇ 1 ರಿಂದ 5ರ ವರೆಗೆ ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಬಿಸಿ ಗಾಳಿ ಇರಲಿದೆ. ಆದರೆ ಮೇ 6 ರಂದು 15 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹಮಾವಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ಹೇಳಿದೆ.

ಮೇ 1ರ ಬುಧವಾರದಿಂದ ಮೇ 5ರ ಭಾನುವಾರದವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶಾಖದ ಅಲೆ ಇರಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಇದರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಹಾಗೂ ಸುತ್ತ ಮುತ್ತಲಿನ ಜಿಲ್ಲೆಗಳು ಸೇರಿವೆ. 2023ರಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾದ ಪರಿಣಾಮ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದ ಫೆಬ್ರವರಿಯಿಂದಲೇ ಕುರಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಲ ಮಂಡಳಿ ಜನರಿಗೆ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಸಲು ಹಲವು ಕ್ರಮಗಳನ್ನು ಕೈಗೊಂಡಿದೆ.

Whats_app_banner