Guarantee Committee: ಪಂಚ ಗ್ಯಾರಂಟಿ ಅನುಷ್ಠಾನಕ್ಕೆ ಸಮಿತಿ, ಮಾಜಿ ಸಚಿವ ರೇವಣ್ಣ ಅಧ್ಯಕ್ಷ, ಅರಸು ಮೊಮ್ಮಗ ಸೂರಜ್ ಉಪಾಧ್ಯಕ್ಷ
ಕರ್ನಾಟಕದಲ್ಲಿ ಜಾರಿಗೊಳಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ಧಾರೆ. ಈ ಸಮಿತಿಗೆ ಅಧ್ಯಕ್ಷರು ಹಾಗೂ ನಾಲ್ವರು ಉಪಾಧ್ಯಕ್ಷರಿದ್ದು, ರಾಜ್ಯ ಮಟ್ಟದಲ್ಲಿ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಗಮನ ಹರಿಸಲಿದ್ದಾರೆ. ಸರ್ಕಾರ ಹಾಗೂ ಜಾರಿಗೊಳಿಸುವ ಇಲಾಖೆಗಳ ನಡುವೆ ಸಮನ್ವಯವಾಗಿ ಕೆಲಸ ಮಾಡಲಿದ್ದಾರೆ. ಇಡೀ ದೇಶದಲ್ಲಿ ನಾನಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಮಾದರಿಯಲ್ಲಿಯೇ ಜಾರಿಗೊಳಿಸಲಾಗುತ್ತಿದೆ. ಆದರ ಅನುಷ್ಠಾನ ಸಮಿತಿ ರಚನೆಯಾಗಿರುವುದು ಇದೇ ಮೊದಲು.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರನ್ನು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಲಾಗಿದೆ. ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಹೊಂದಿರಲಿದ್ಧಾರೆ.
ಅವರೊಂದಿಗೆ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್. ಮೈಸೂರು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ , ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ ಹಾಗೂ ಕಾಂಗ್ರೆಸ್ ಮುಖಂಡ ಮೆಹರೂಜ್ ಖಾನ್ ಅವರನ್ನು ಅನುಷ್ಠಾನ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಡಿ.ದೇವರಾಜ ಅರಸು ಅವರ ಎರಡನೇ ಮಗಳ ಪುತ್ರ ಸೂರಜ್ ಚನ್ನಪಟ್ಟಣ ಮೂಲದವರು. ಅವರಿಗೆ ರಾಜಕೀಯವಾಗಿ ಗುರುತಿಸಿಕೊಳ್ಳಲು ಪೂರಕವಾಗಿ ಸಮಿತಿಯನ್ನು ಸ್ಥಾನ ನೀಡಲಾಗಿದೆ.
ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆ ಹಾಗೂ ಪ್ರಚಾರದ ವೇಳೆ ಗ್ಯಾರಂಟಿಗಳನ್ನು ಘೋಷಿಸಿತ್ತು. ಇದರಲ್ಲಿ ಮಹಿಳೆಯರಿಗೆ 2ಸಾವಿರ ರೂ. ನೀಡುವ ಗೃಹಲಕ್ಷ್ಮಿ, 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆ ಹಾಗೂ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೋಮಾ ಪದವೀಧರರಿಗೆ ಎರಡು ವರ್ಷ ನಿರುದ್ಯೋಗ ಭತ್ಯೆ ನೀಡುವ ಯುವಶಕ್ತಿಯನ್ನು ಘೋಷಿಸಲಾಗಿತ್ತು.
ಸರ್ಕಾರ ರಚನೆಯಾದ ಕೆಲವೇ ದಿನದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿತ್ತು. ಆನಂತರ ಅನ್ನಭಾಗ್ಯ ಯೋಜನೆ, ಬಳಿಕ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದ್ದರು. ಈ ವರ್ಷದ ಆರಂಭದಲ್ಲಿ ಯುವನಿಧಿ ಕೂಡ ಜಾರಿಯಾಗಿ ಏಳು ತಿಂಗಳೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಜಾರಿಗೊಳಿಸಿದ್ದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಲಾಗಿದೆ. ಹರಿಯಾಣದಲ್ಲೂ ಉಚಿತ ಬಸ್ ಪ್ರಯಾಣವನ್ನು ಈ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಇದಲ್ಲದೇ ಐದು ಗ್ಯಾರಂಟಿಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳಿಗೆ 2024-25 ರಲ್ಲಿ 52,000 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಈ ಹಣವನ್ನು ಕೋಟ್ಯಂತರ ಜನರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 50,000 ದಿಂದ 55,000 ರೂಪಾಯಿ ಹಂಚಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿದ್ದರು.
ಈಗ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಆಯಾ ಇಲಾಖೆಯ ಜತಗೆ ಪ್ರತ್ಯೇಕ ಅನುಷ್ಠಾನ ಸಮಿತಿಯೂ ಕಾರ್ಯನಿರ್ವಹಿಸಲಿದ್ದು, ಈ ಯೋಜನೆಗಳಿಗೆ ಮತ್ತಷ್ಟು ಒತ್ತು ಸಿಗಲಿದೆ. ಅನುಷ್ಠಾನ ಸಮಿತಿಯು ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ಪ್ರತಿ ಜಿಲ್ಲೆಯಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.