ಕನ್ನಡ ಸುದ್ದಿ  /  Karnataka  /  Bangalore News Cm Siddaramaiah Directed Ksdl Officials Give Quality Kit To Hostel Students Bangalore News In Kannada Kub

Bangalore News: ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಕಳಪೆ ಶುಚಿ ಕಿಟ್‌: ಸಿಎಂ ಸಿದ್ದರಾಮಯ್ಯ ಗರಂ

CM Siddaramaiah Instructions ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಿಂದ ಗುಣಮಟ್ಟದ ಶುಚಿ ಕಿಟ್‌ ಅನ್ನು ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶುಚಿ ಕಿಟ್‌ ನಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಶುಚಿ ಕಿಟ್‌ ನಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು: ಶಾಲಾ ಮಕ್ಕಳಿಗೆ ವಿತರಣೆ ಮಾಡುವುದು ಇರಲಿ. ಖುದ್ದು ಮುಖ್ಯಮಂತ್ರಿ ಅವರಿಗೆ ಕಳಪೆ ದರ್ಜೆಯ ಶುಚಿ ಕಿಟ್‌ ಅನ್ನು ಅಧಿಕಾರಿಗಳು ನೀಡಿದ್ದಾರೆ. ಇದನ್ನು ಕಂಡ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ.

ಇದು ನಡೆದದ್ದು ಬೆಂಗಳೂರಿನಲ್ಲಿ ನಡೆದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ.

ಶುಚಿ ಸಂಭ್ರಮ ಕಿಟ್ ತರಿಸಿ ಅದರಲ್ಲಿದ್ದ ಟೂತ್ ಬ್ರಷ್, ಪೇಸ್ಟ್, ಸೋಪು ಮತ್ತು ಕೊಬ್ಬರಿ ಎಣ್ಣೆಯ ಗುಣ ಮಟ್ಟದ ಬಗ್ಗೆ ಗರಂ ಆದ ಮುಖ್ಯಮಂತ್ರಿಗಳು ಕಿಟ್ ನಲ್ಲಿನ ವಸ್ತುಗಳ ತೂಕದ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸಲು ಖಡಕ್ ಸೂಚನೆ ನೀಡಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳ 5,48,000 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್ , ಬ್ರಶ್, ಕೊಬ್ಬರಿ ಎಣ್ಣೆ, ಮೈ ಸೋಪು, ಬಟ್ಟೆ ಸೋಪು ಒಳಗೊಂಡ 93 ರೂ.ಗಳ ಕಿಟ್ ಗಂಡುಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ 135 ರೂ.ಗಳ ವೆಚ್ಚದಲ್ಲಿ ಶುಚಿ ಸಂಭ್ರಮ ಕಿಟ್ ನೀಡಲು ಟೆಂಡರ್ ಕರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಕಿಟ್ ಗಳ ವಿತರಣೆಗೆ ವರ್ಷಕ್ಕೆ 90 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಟೂತ್ ಪೇಸ್ಟ್ ಪ್ರಮಾಣವನ್ನು ಹೆಚ್ಚಿಸುವಂತೆ ಹಾಗೂ ಹಲ್ಲುಜ್ಜುವ ಬ್ರಶ್ ಗಳ ಗುಣಮಟ್ಟ ಸೇರಿದಂತೆ ಇತರೆ ಗುಣಮಟ್ಟದ ವಸ್ತುಗಳನ್ನು ಮಕ್ಕಳಿಗೆ ಒದಗಿಸಬೇಕು. 75 ಗ್ರಾಂಗಳ ಬದಲಿಗೆ 125 ಗ್ರಾಂ ಗಳ ಸೋಪು ಒದಗಿಸುವಂತೆ ಹಾಗೂ ಇದರಲ್ಲಿ ಕೇವಲ ಶೇ 5 ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕೆಂದು ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಗುಣಮಟ್ಟದ ಆಹಾರಧಾನ್ಯಗಳನ್ನು ವಿತರಿಸಿ

ಪ್ರಸ್ತುತ ತಲಾ 1650ರೂ. ಪ್ರೀ ಮೆಟ್ರಿಕ್, 1750 ರೂ.ಗಳನ್ನು ಪೋಸ್ಟ್ ಮೆಟ್ರಿಕ್ ಮಕ್ಕಳಿಗೆ ಆಹಾರಧಾನ್ಯಗಳಿಗಾಗಿ ನಿಗದಿಪಡಿಸಿದೆ. ರಾಗಿ, ಧಾನ್ಯ, ಎಣ್ಣೆಯನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತಾಲ್ಲೂಕುವಾರು ಪ್ಯಾಕೇಜ್ ಗಳ ಟೆಂಡರ್ ಕರೆದು ಪಡೆಯಲಾಗುತ್ತಿದೆ. ಈ ವ್ಯವಸ್ಥೆ ಯನ್ನು ಸರಿಪಡಿಸಿ ಗುಣಮಟ್ಟದ ಆಹಾರಪದಾರ್ಥಗಳನ್ನು ಒದಗಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಟೆಂಡರ್ ಕರೆಯುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಆಹಾರಧ್ಯಾನ ಪಡೆಯುವ ಕುರಿತ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಬೇಕು. ಮೈಸೂರು ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿನಿಲಯಕ್ಕೆ ಟೆಂಡರ್ ಅವಧಿ ಮುಕ್ತಾಯವಾಗಿದ್ಧು, ಆಹಾರಧಾನ್ಯಗಳ ಟೆಂಡರ್ ಕರೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಹೋಬಳಿಗೊಂದರಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆ ಇರಬೇಕು ಎಂದು ಆದೇಶಿಸಿದ್ದು, 178 ಹೋಬಳಿಗಳಲ್ಲಿ ಕ್ರೈಸ್ ಶಾಲೆಗಳಿಲ್ಲ. ಕೆಲವು ಹೋಬಳಿಗಳಲ್ಲಿ 3-4 ಶಾಲೆಗಳಿವೆ. ಕಸಬಾ ಹೋಬಳಿ ತೆಗೆದರೆ 134 ಶಾಲೆಗಳನ್ನು ತೆರೆಯಬೇಕಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿದ್ದರೆ , ಅದೇ ಕ್ಷೇತ್ರದ ಮತ್ತೊಂದು ಹೋಬಳಿಗೆ ಶಾಲೆಯನ್ನು ಸ್ಥಳಾಂತರ ಮಾಡುವಂತೆ ನಿರ್ದೇಶನ ನೀಡಿದರು.

ಗುಣಮಟ್ಟದ ಶಿಕ್ಷಣ ಕಡ್ಡಾಯ

ಮೊರಾರ್ಜಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತೆ ಸೂಚಿಸಿದ್ದು, ಶಿಕ್ಷಕರ ಗುಣಮಟ್ಟವೂ ಮುಖ್ಯ. ಶಿಕ್ಷಕರಿಗೆ ತರಬೇತಿ (ಓರಿಯೆಂಟೇಷನ್) ಕಾರ್ಯಕ್ರಮ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ತರಬೇಕು ಎಂದು ಸೂಚಿಸಿದರು. ಐಸೆಕ್ ಮತ್ತು ಐ ಐ ಎಸ್ ಸಿ ಸಂಸ್ಥೆಗಳ ಮೂಲಜ ಕ್ರೈಸ್ ಶಾಲೆಗಳ ಶಿಕ್ಷಕರ ಮೌಲ್ಯಮಾಪನ ಮಾಡಿಸುವಂತೆ ಸೂಚಿಸಿದರು.

ಶಾಲೆಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಶೇ 80 ರಷ್ಟು ಅರ್ಹತೆಯಾಧಾರದ ಮೇಲೆ ಹಾಗೂ ಶೇ 20 ರಷ್ಟು ಸ್ಥಳೀಯರಿಗೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ಪ್ರಥಮ ಆಧ್ಯತೆಯಾಗಿರಲಿ ಎಂದು ಸೂಚಿಸಿದರು.

ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್

ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಪಿ.ಜಿ, ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು ತೀರ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್, ಪರಿಶಿಷ್ಟ ವರ್ಗಗಳ ಸಚಿವ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಆಯುಕ್ತ ಡಾ: ರಾಕೇಶ್ ಕುಮಾರ್ ಕೆ , ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

===========

IPL_Entry_Point

ವಿಭಾಗ