ನೀತಿಸಂಹಿತೆ ಇದ್ದರೂ ತುರ್ತು ಕೆಲಸಗಳಿಗೆ ಆದ್ಯತೆ ನೀಡಿ, ಕಲುಷಿತ ನೀರಿಗೆ ಡಿಸಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ ಸೂಚನೆ
CM Siddaramaiah Meeting ಚುನಾವಣೆ ಮುಗಿದಿರುವುದರಿಂದ ಪ್ರಗತಿಗೆ ಸಂಬಂಧಿಸಿ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ( CM Siddaramaiah) ಜಿಲ್ಲಾಧಿಕಾರಿಗಳ ಸಭೆ ನಡೆಸಿದರು.
ಬೆಂಗಳೂರು:ಈಬಾರಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅನುಷ್ಠಾನದ ಅವಧಿ ಸುದೀರ್ಘವಾಗಿತ್ತು. ಸರ್ಕಾರದ ಆಡಳಿತಕ್ಕೆ ಲಕ್ವ ಹೊಡೆದಂತಾಗಿತ್ತು. ಎಲ್ಲ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಾಗಿದ್ದರು. ಚುನಾವಣಾ ಕೆಲಸದಲ್ಲಿ ನಿರತರಾಗಿದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲು ಸಾಧ್ಯವಾಗಿರಲಿಲ್ಲ. ನೀತಿ ಸಂಹಿತೆ ಜೂನ್ ಆರರ ವರೆಗೆ ಇದೆ. ಆದರೂ ತುರ್ತು ಕೆಲಸಗಳಿಗೆ ಗಮನ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಚುನಾವಣೆ ಮುಗಿದಿದೆ. ನೀತಿ ಸಂಹಿತೆ ಸಡಿಲವಾಗಿದೆ. ಹೀಗಾಗಿ ಅಧಿಕಾರಿಗಳು ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಬೇಕು. ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದಂತೆ ಜೂನ್ ಕೊನೆಯ ವೇಳೆಗೆ ಆದೇಶ ಹೊರ ಬರಬೇಕು. ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕೂಡ ಶೀಘ್ರವಾಗಿ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಹಾಗೂ ಮುಂಗಾರು ಕೃಷಿ ಚಟುವಟಿಕೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿ ವಿಡಿಯೋ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ,ಶಿವಾನಂದ ಪಾಟೀಲ, ಚೆಲುವರಾಯಸ್ವಾಮಿ, ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ, ರಹೀಂ ಖಾನ್, ಎಸ್. ಎಸ್. ಮಲ್ಲಿಕಾರ್ಜುನ್, ಸಂತೋಷ್ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಿಎಂ ಸೂಚನೆಗಳೇನು?
- ಚುನಾವಣಾ ನೀತಿ ಸಂಹಿತೆ ಸಮಯ ಈ ಬಾರಿ ದೀರ್ಘವಾಗಿತ್ತು. ಇದರಿಂದ ಆಡಳಿತ ಯಂತ್ರ ಸ್ಥಗಿತವಾದಂತೆ ಆಗಿತ್ತು. ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲು ಅಧಿಕಾರಿಗಳಿಂದ ಸಾಧ್ಯ ಆಗಿರಲಿಲ್ಲ.ನಮ್ಮ ಮನವಿ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದೆ.
- ಜೂನ್ 6 ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ತುರ್ತು ಕೆಲಸಗಳಿಗೆ ಗಮನ ಕೊಡಬೇಕು. ಎಲ್ಲ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲು ಪ್ರಾರಂಭಿಸಬೇಕು.
- ಈಗ ಮಳೆ ವಾಡಿಕೆಗಿಂತ ಅಧಿಕವಾಗಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ. ಚುನಾವಣಾ ಸಿದ್ಧತೆ ಜನವರಿಯಲ್ಲೇ ಶುರುವಾಗಿತ್ತು. ಬಿತ್ತನೆ ಬೀಜ, ಗೊಬ್ಬರಕ್ಕೆ ಒತ್ತು ನೀಡಬೇಕು.ಮೇ ತಿಂಗಳಲ್ಲಿ ಗುರಿ 2.95 ಲಕ್ಷ ಹೆಕ್ಟೇರ್ ಪ್ರದೇಶ. ಸಾಧನೆಯಾಗಿರುವುದು 68,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೂ 13 ದಿನ ಬಾಕಿದೆ.
ಇದನ್ನೂ ಓದಿರಿ:ಮಳೆಗಾಲ ಬಂತು, ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯ ವಾತಾವರಣವನ್ನು ಈಗಲೇ ಸಿದ್ಧಗೊಳಿಸಿ; ಈ ಟಿಪ್ಸ್‌ಗಳನ್ನು ಪಾಲಿಸಿ
- ಮೈಸೂರಿನ ಎರಡು ಗ್ರಾಮಗಳಲ್ಲಿ ಕಾಲರಾ ಕಂಡು ಬಂದಿದೆ. ಇದಕ್ಕೆ ಕಾರಣ ಕಲುಷಿತ ನೀರು. ನೀರು ಕಲುಷಿತಗೊಳ್ಳಲು ಇಂಜಿನಿಯರುಗಳು ಕಾರಣ. ಕುಡಿಯಲು ನೀರು ಯೋಗ್ಯವೇ ಅಲ್ಲವೇ ಎಂಬುದನ್ನು ಪತ್ತೆ ಮಾಡದಿರುವುದು ದೊಡ್ಡ ಅಪರಾಧ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆ ಸಂಭವಿಸಿದೆ. ಇದಕ್ಕೆ ಯಾರು ಜವಾಬ್ದಾರಿ. ಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ಆಗಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳೇ ಇದಕ್ಕೆ ಹೊಣೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲಾಗುವುದು. ಇನ್ನು ಮುಂದೆ ಕಲುಷಿತ ನೀರಿನಿಂದ ತೊಂದರೆ ಆದರೆ ಡಿಸಿಗಳೇ ನೇರ ಹೊಣೆ. ಕಾಲರ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು.
- ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಆರ್ಥಿಕ ವರ್ಷದ ಎರಡು ತಿಂಗಳು ಕಳೆದು ಹೋಗುತ್ತಿದೆ. ಒಂದು ವರ್ಷದಲ್ಲಿ ಮಾಡುವ ಕೆಲಸವನ್ನು 10 ತಿಂಗಳಲ್ಲಿ ಮಾಡಿ ಮುಗಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯದರ್ಶಿಗಳ ಸಭೆ ನಡೆಸಲಾಯಿತು. ಜೂನ್ ಕೊನೆಯ ವರೆಗೆ ಎಲ್ಲ ಹೊಸ ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿರಿ: ಬೆಂಗಳೂರು ಕೈಲಾಗಲ್ಲ ಎಂದು ಆರ್ಸಿಬಿ ಸೋಲು ಸಂಭ್ರಮಿಸಿದ ಸಿಎಸ್ಕೆ ಆಟಗಾರ, ನೀನು ಕ್ರಿಕೆಟಿಗನೇ ಅಲ್ಲ ಎಂದ ನೆಟ್ಟಿಗರು
- ಟೆಂಡರ್ ಕರೆಯಲು ಯಾವುದೇ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಟೆಂಡರ್ ಕರೆದು, ಅಂತಿಮಗೊಳಿಸಿ, ಕಾರ್ಯಾದೇಶ ನೀಡಲು ಪ್ರಯತ್ನಿಸಬೇಕು. ಇದರಲ್ಲಿ ವಿಳಂಬವಾದರೆ ರಾಜ್ಯದ ಅಭಿವೃದ್ಧಿಯಲ್ಲಿ ವಿಳಂಬವಾಗುತ್ತದೆ.
- 500 ಕ್ಕೂ ಹೆಚ್ಚು ಘೋಷಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ಎಲ್ಲ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಲು ಸೂಚಿಸಿದರು.
- ಸಕಾಲದಲ್ಲಿ ರೈತರಿಗೆ ಸಾಲ ಸಿಗುವುದನ್ನು ಖಾತರಿಪಡಿಸಬೇಕು. ಈ ವರ್ಷದ ಸಾಲ ಯೋಜನೆ ಕಳುಹಿಸಲಾಗಿದೆ. ಜಿಲ್ಲಾ ಬ್ಯಾಂಕರುಗಳೊಂದಿಗೆ ಸಮನ್ವಯ ವಹಿಸಿ, ಕ್ರಮ ಕೈಗೊಳ್ಳಬೇಕು.
- ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ಓದಿರಿ: Brundavana Serial: ಪುಷ್ಪಾ ಮನೆಗೆ ಹೊರಟು ನಿಂತ ಸಹನಾ, ಭಾರ್ಗವಿಗೆ ಬ್ಯಾಡ್ ಟೈಮ್ ಶುರುನಾ?
- ಬೆಳೆ ವಿಮೆ ಕ್ಲೇಮ್ ಮಾಡುವ ಸಂದರ್ಭದಲ್ಲಿ ಕಂಪೆನಿಗಳ ಸ್ಯಾಂಪಲ್ ಪರಿಶೀಲನೆಯ ಕುರಿತು ರೈತರು ಹಲವು ಸಂದೇಹಗಳನ್ನು ಹೊಂದಿದ್ದಾರೆ. ಕಂಪನಿಗಳು ಆಡುವ ಆಟದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಅಪಾಯವಿದೆ ಎನ್ನುವ ಸಲಹೆ ಸಚಿವ ಲಾಡ್ ಅವರಿಂದ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಕುರಿತು ಮುಂಚಿತವಾಗಿಯೇ ವಿಮಾ ಕಂಪೆನಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)