Karnataka Budget: ಕಳೆದ ಬಜೆಟ್ ನಲ್ಲಿ ಸಿದ್ದರಾಮಯ್ಯ ನೀಡಿದ ಭರವಸೆಗಳೇನು, ಗ್ಯಾರಂಟಿ ಬಿಟ್ಟು ಜಾರಿಗೊಳಿಸಿದ್ದು ಎಷ್ಟು; ಇಲ್ಲಿದೆ ಹಿನ್ನೋಟ
Siddaramaiah Budget ಸರ್ಕಾರವೂ ಜನಪ್ರಿಯ ಮತಗಳಿಕೆಯ ಪ್ರಮುಖ ಅಸ್ತ್ರಗಳಾದ ಗ್ಯಾರಂಟಿಗಳ ಜಾರಿಗೆ ತೋರಿದ ಆಸಕ್ತಿಯನ್ನು ಇತರ ಘೋಷಣೆಗಳ ಜಾರಿಗೆ ಅಷ್ಟಾಗಿ ಗಮನ ಹರಿಸಲಿಲ್ಲ. ಮಾಧ್ಯಮಗಳೂ ಚರ್ಚೆನಡೆಸಲಿಲ್ಲ ಎನ್ನುವುದು ಮತ್ತೊಂದು ಚರ್ಚಾರ್ಹ ವಿಷಯವೇ.(ಸುದ್ದಿ ವಿಶ್ಲೇಷಣೆ: ಎಚ್.ಮಾರುತಿ. ಬೆಂಗಳೂರು)
ಬೆಂಗಳೂರು: ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 15ನೇ ಬಜೆಟ್ ಮಂಡಿಸಲಿದ್ದಾರೆ. 2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಮುಖ್ಯಮಂತ್ರಿಯಾಗಿಅಧಿಕಾರ ಸ್ವೀಕರಿಸಿದ ನಂತರ 14ನೇ ಬಜೆಟ್ ಮಂಡಿಸಿದ್ದರು. ಈ ಬಜೆಟ್ ಚುನಾವಣಾ ಸಂದರ್ಭದಲ್ಲಿ ಕೈ ಹಿಡಿದಿದ್ದ ಐದು ಗ್ಯಾರಂಟಿಗಳ ಸುತ್ತ ಗಿರಕಿ ಹೊಡದಿದ್ದೇ ಹೆಚ್ಚು.
ಅಂದಿನಿಂದ ಇದುವರೆಗೆ ಈ ಐದು ಗ್ಯಾರಂಟಿಗಳನ್ನು ಕುರಿತು ಚರ್ಚೆ ನಡೆಯಿತೇ ಹೊರತು 3.27 ಲಕ್ಷ ಕೋಟಿ ರೂ.ಗಳ ಬಜೆಟ್ ಕುರಿತು ಮಾತನಾಡಿದ್ದು ಕಡಿಮೆ. ಇನ್ನು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್, ಗ್ಯಾರಂಟಿಗಳ ಲೋಪದೋಷಗಳನ್ನು ಎತ್ತಿ ತೋರಿಸಲು ತೋರಿದ ಆಸಕ್ತಿಯನ್ನು ಒಟ್ಟಾರೆ ಆಯವ್ಯಯ ಬಗ್ಗೆ ಚರ್ಚಿಸಿದ್ದು ಕಡಿಮೆ ಎನ್ನುವ ಚರ್ಚೆಗಳು ನಡೆದಿವೆ.\
ಹೊಸ ಘೋಷಣೆ ಇರಲಿಲ್ಲ
ಕಳೆದ ವರ್ಷದ ಬಜೆಟ್ ನಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆಗಳನ್ನೇನೂ ಮಾಡಿರಲಿಲ್ಲ. ಕೆಲವು ಯೋಜನೆಗಳ ಹೆಸರನ್ನು ಪ್ರಸ್ತಾಪಿಸಿದ್ದನ್ನು ಬಿಟ್ಟರೆ ನೀರಾವರಿ, ಬೆಂಗಳೂರು ಅಭಿವೃದ್ದಿ, ನಮ್ಮ ಮೆಟ್ರೋ ಕೃಷಿ ಮೊದಲಾದ ವಲಯಗಳಿಗೆ ಭಾರಿ ಎನ್ನುವಂತಹ ಅನುದಾನವನ್ನು ಘೋಷಿಸಿರಲಿಲ್ಲ.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ 9 ಸವಾಲುಗಳನ್ನು ಎದುರಿಸಿ ನವ ಬೆಂಗಳೂರುಯೋಜನೆಯನ್ನು ನಿರ್ಮಾಣ ಮಾಡುವುದಾಗಿ ಬಜೆಟ್ ನಲ್ಲಿ ಪ್ರಕಟಿಸಲಾಗಿತ್ತು. ಈ ಏಳು ತಿಂಗಳಲ್ಲಿ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿರಂತರವಾಗಿ ಸಭೆಗಳನ್ನು ನಡೆಸಿದ್ದನ್ನು ಬಿಟ್ಟರೆ ಪ್ರಗತಿಯ ಹಾದಿಯಲ್ಲಿ ಹೆಜ್ಜೆ ಇಟ್ಟ ನಿದರ್ಶನಗಳು ಇಲ್ಲ.
ಸಂಚಾರ ವ್ಯವಸ್ಥೆ, ಪರಿಸರ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ನಾಗರಿಕರ ರೋಗ್ಯ, ಪ್ರಾಣಿಗಳ ಆರೋಗ್ಯ ಇ ಆಡಳಿತ ನೀರಿನ ಭದ್ರತೆ ಮತ್ತು ಪ್ರವಾಹ ನಿರ್ವಹಣೆ ಮಾಡುವ ಸವಾಲುಗಳನ್ನು ಎದುರಿಸುವುದಾಗಿ ಹೇಳಲಾಗಿತ್ತಾದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಒಟ್ಟಾರೆ ಸ್ಪಷ್ಟ ಚಿತ್ರಣ ಇಲ್ಲ ಎಂದಷ್ಟೇ ಹೇಳಬಹುದು.ಹಾಗೆಂದು ಸರ್ಕಾರದ ಹಾದಿ ಸುಗಮವಾಗಿತ್ತು ಎಂದು ಹೇಳುವಂತಿಲ್ಲ.
ಗ್ಯಾರಂಟಿ ಯೋಜನೆ ಸುತ್ತಾ
ಐದು ಗ್ಯಾರಂಟಿಗಳಿಗೆ ಬೇಕಾದ 35 ಸಾವಿರ ಕೋಟಿ ರೂಪಾಯಿ ಮತ್ತು ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಉಳಿಸಿದ್ದ 2.55 ಲಕ್ಷ ಕೋಟಿ ಮೊತ್ತದ ಬಾಕಿ ಕಾಮಗಾರಿಗಳ ಹೊರೆ ಸಿದ್ದರಾಮಯ್ಯ ಅವರ ಕೈ ಕಟ್ಟಿ ಹಾಕಿದ್ದಂತೂ ನಿಜ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನುದಾನ ನೀಡಿಕೆಯನ್ನು ಶೇ.1ರಷ್ಟು ಕಡಿಮೆ ಮಾಡಲಾಗಿತ್ತು. 2008-13ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಅನೇಕ ಯೋಜನೆಗಳಿಗೆ ಮರುಜೀವ ನೀಡಿದ್ದರು. ಹೊಸ ಯೋಜನೆಗಳನ್ನು ಪ್ರಕಟಿಸುವ ಗೋಜಿಗೆ ಹೋಗಿರಲಿಲ್ಲ.
ಅನುದಾನ ಕಡಿತ ಮಾಡಿದ್ದರೂ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಕಲ್ಪಿಸುವ ಘೋಷಣೆ ಮಾಡಿದ್ದರಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೆಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ಯೋಜನೆ ಹೊರತುಪಡಿಸಿ ನೀರಾವರಿಗೆ ಒತ್ತುನೀಡಿರಲಿಲ್ಲ. ಎತ್ತಿನಹೊಳೆ ಯೋಜೆನೆಗೆ ಮಾತ್ರ ಅನುದಾನ ನಿಗದಿಪಡಿಸಲಾಗಿತ್ತು.ಮಹದಾಯಿ, ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆಗೆ ಅನುದಾನ ಮೀಸಲಿಟ್ಟಿರಲಿಲ್ಲ.
ಐದು ಯೋಜನೆಗಳ ಜಾರಿಗೆ ನೀಡಿದ ಆದ್ಯತೆಯನ್ನು ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ನೀಡಿದ್ದು ಕಡಿಮೆ. ಯಾವುದೇ ಕೋನದಿಂದ ನೋಡಿದರೂ ಐದು ಗ್ಯಾರಂಟಿಗಳ ಸುತ್ತ ಬಜೆಟ್ ಸುತ್ತುತ್ತದೆ. ಹಾಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಏನನ್ನೂ ಸಾಧನೆ ಮಾಡಿಲ್ಲ ಎಂದು ಹೇಳುವಂತಿಲ್ಲ. ಅವರ ಸಾಧನೆಗಳು ಗ್ಯಾರಂಟಿಗಳ ಪ್ರಖರ ಬೆಳಕಿನಲ್ಲಿ ಮುಸುಕಾಗಿವೆ. 7-8 ತಿಂಗಳಲ್ಲಿ ಮಹತ್ವದ ಸಾಧನೆಯನ್ನು ನಿರೀಕ್ಷಿಸುವುದು ತಪ್ಪು. ಕನಿಷ್ಟ 2 ವರ್ಷಗಳ ನಂತರ ಸರ್ಕಾರದ ಸಾಧನೆಗಳು ಕಣ್ಣಿಗೆ ರಾಚುವಂತಿರಬೇಕು. ಆರಂಭದಿಂದಲೇ ಆ ದಿಕ್ಕಿನಲ್ಲಿ ಸಾಗಿದರೆ ಪ್ರಗತಿಯನ್ನು ನಿರೀಕ್ಷಿಸಬಹುದಾಗಿದೆ.
ಮತ್ತೊಂದು ಚುನಾವಣೆ ಹೊಸ್ತಿಲಲ್ಲಿ
ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಮುಂಬರುವ ಬಜೆಟ್ ಹೇಗಿರುತ್ತದೆ ಎಂದು ಊಹಿಸುವುದು ಕಷ್ಟವೇನಲ್ಲ. ಜನಪ್ರಿಯ ಯೋಜನೆಗಳ ಮುಂದುವರಿಕೆ ಮತ್ತು ಆ ಬುಟ್ಟಿಗೆ ಮತ್ತಷ್ಟು ಭೇಷ್ ಅನ್ನಿಸಿಕೊಳ್ಳುವಂತಹ ಯೋಜನೆಗಳನ್ನು ನಿರೀಕ್ಷಿಸಬಹುದಾಗಿದೆ.
ಗ್ಯಾರಂಟಿಗಳ ಅನುಷ್ಠಾನಕ್ಕೆ ನೀಡಿದ ಆಸಕ್ತಿಯನ್ನು ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ನೀಡಿದ್ದರೆ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ವಲಯಗಳಲ್ಲಿ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವಿತ್ತು. ಅಂತಹ ಅವಕಾಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದುಕೊಂಡು ಬಿಟ್ಟರು ಎಂದು ಒಮ್ಮೊಮ್ಮೆ ಅನ್ನಿಸದೆ ಇರದು. ರಾಜಕಾರಣದ ಕೊನೆಯ ವರ್ಷಗಳಲ್ಲಿ ಹೆಜ್ಜೆ ಗುರುತು ಬಿಟ್ಟು ಹೋಗುವಂತಹ ಸಾಧನೆಯನ್ನು ಮುಂಬರುವ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ನಿರೀಕ್ಷಿಸುತ್ತಿದೆ ಕರ್ನಾಟಕದ ಜನತೆ.
(ಸುದ್ದಿ ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು)
ವಿಭಾಗ