Bangalore News: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಬಾಕಿ ಉಳಿದ ಪ್ರಕರಣ,ಬೆಂಗಳೂರಿಗೆ ಪ್ರತ್ಯೇಕ ಜಂಟಿ ಆಯುಕ್ತರ ಹುದ್ದೆ ಮಂಜೂರು
ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಪ್ರಕರಣಗಳ( Commercial tax department) ವಿಲೇವಾರಿಗೆ ಪ್ರತ್ಯೇಕ ಜಂಟಿ ನಿರ್ದೇಶಕರ ಹುದ್ದೆಯನ್ನು ಮಂಜೂರು ಮಾಡಲಾಗಿದ್ದು. ಜುಲೈ 1ರಿಂದ ಜಾರಿಗೆ ಬರಲಿದೆ.
ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಬೆಂಗಳೂರಿಗೆಂದೇ ಹೆಚ್ಚುವರಿ ಜಂಟಿ ಆಯುಕ್ತರ ಹುದ್ದೆ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ಕಚೇರಿ ಜುಲೈ 1 ರಿಂದ ಜಾರಿಗೆ ಬರಲಿದೆ. ಕೆಲಸ ಮರು ಹಂಚಿಕೆ 2017 ಕ್ಕೂ ಹಿಂದಿನ ಪ್ರಕರಣಗಳ ತೀರ್ಮಾನವಾಗಿರುವುದರಿಂದ ಬೆಂಗಳೂರಿನಲ್ಲಿ ಹೆಚ್ಚು ಮೇಲ್ಮನವಿಗಳು ದಾಖಲಾಗುತ್ತಿದ್ದು, ಇವುಗಳ ವಿಲೇವಾರಿಗಾಗಿ ಹೆಚ್ಚುವರಿ ಜಂಟಿ ಆಯುಕ್ತರ ಹುದ್ದೆ ಮಂಜೂರು ಮಾಡಲಾಗಿದೆ. ಇದರಿಂದ ಪ್ರಕರಣಗಳ ವಿಲೇವಾರಿ, ತ್ವರಿತ ಕೆಲಸ ಹಾಗೂ ಅಡಚಣೆ ತಪ್ಪಿಸಲು ಇದು ಸಹಕಾರಿಯಾಗಲಿದೆ. ಇದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಸರ್ಕಾರ ಇದಕ್ಕೆ ಸಮ್ಮತಿ ಸೂಚಿಸಿದೆ.
ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ವೇಳೆ ಸಿಎಂ ಸಿದ್ದರಾಮಯ್ಯ ಈ ವಿಷಯ ತಿಳಿಸಿದ್ದಾರೆ.
ಅಂದಾಜು, ಜಾರಿ, ಮೇಲ್ಮನವಿ ಸಮನ್ವಯ ಸಭೆ ತಿಂಗಳಿಗೆ 2 ಬಾರಿ ಕಡ್ಡಾಯವಾಗಿ ನಡೆಸಬೇಕು. ಕ್ರಿಯಾಯೋಜನೆ ಸಿದ್ದಪಡಿಸಬೇಕು. ಮೇಲ್ಮನವಿಗಳನ್ನು ಸಕಾಲದಲ್ಲಿ ಇತ್ಯರ್ಥ ಮಾಡಬೇಕು.ಇನ್ನು ಮುಂದೆ ಮೇಲ್ಮನವಿ ಪ್ರಕರಣಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು. ವಿಳಂಬ ಮಾಡಿದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ದವೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎನ್ನುವುದು ಸಿದ್ದರಾಮಯ್ಯ ನೀಡಿದ ಸೂಚನೆ.
ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ನಾನು ಪರಿಗಣಿಸುತ್ತೇನೆ. ಬೇರೆ ಯಾವ ಪ್ರಭಾವಕ್ಕೂ ನಾನು ಮಣೆ ಹಾಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ವರ್ಗಾವಣೆ ವೇಳೆ ನಿಮ್ಮ ಕಾರ್ಯಕ್ಷಮತೆಯೇ ಮಾನದಂಡ. ಬೇರೆ ಯಾವ ಪ್ರಭಾವಕ್ಕೂ ನಾನು ಮಣೆ ಹಾಕಲ್ಲ. ಅಂದಾಜು, ಜಾರಿ, ಮೇಲ್ಮನವಿ ತಂಡಗಳು ನಿರಂತರ ಸಹಕಾರದಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಜಿಎಸ್‌ಟಿ ನಕಾರಾತ್ಮಕ ಸೆಟಲ್ ಮೆಂಟ್ ಆಗುವ ಕಡೆ ಇತರೆ ಸರಕುಗಳ ಮೇಲಿನ ತೆರಿಗೆ ಸಂಗ್ರಹವನ್ನು ಚುರುಕಗೊಳಿಸಬೇಕು. ವೃತ್ತಿ ತೆರಿಗೆ ಸಂಗ್ರಹವನ್ನೂ ಚುರುಕುಗೊಳಿಸಲು ಗುರಿ ನಿಗಧಿ ಪಡಿಸಬೇಕು. ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಆ ವೇಳೆಗೆ ಗುರಿ ತಲುಪಿರಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಸಿ.ಶಿಖಾ ಉಪಸ್ಥಿತರಿದ್ದರು.
ಗಣಿ ಹರಾಜಿಗೆ ಎಐ ತಂತ್ರಜ್ಞಾನ
ಹರಾಜಿಗೆ ಲಭ್ಯವಿರುವ ಗಣಿಗಳ ಹರಾಜು ಪ್ರಕ್ರಿಯೆಯನ್ನು ಕೂಡಲೇ ಕೈಗೆತ್ತಿಕೊಳ್ಳುವ ಜತೆಗೆ ಉಪ ಖನಿಜ ರಾಜಸ್ವ ಸಂಗ್ರಹ ಹೆಚ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ರಾಜಸ್ವ ಸಂಗ್ರಹ ಚುರುಕುಗೊಳಿಸಬೇಕು. ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಂದಾಯ ಇಲಾಖೆ ಲ್ಯಾಂಡ್ ಬ್ಯಾಂಕ್ ಸೃಜಿಸಿದಲ್ಲಿ, ಅರಣ್ಯ ಪರಿಹಾರ ಭೂಮಿ (compensatory afforestation) ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು
ಡ್ರೋನ್ ಸರ್ವೇ ಮತ್ತು ಎಐ( AI) ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳುವ ಮೂಲಕ ಕ್ರಷರ್‌ಗಳ ರಾಜಸ್ವ ಸಂಗ್ರಹ ಸೋರಿಕೆ ತಡೆಗಟ್ಟಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಇದೇ ವೇಳೆ ಸಿಎಂ ಅಧ್ಯಕ್ಷತೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು.
ಕರ್ನಾಟಕದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಈ ವರೆಗಿನ ತೆರಿಗೆ ಸಂಗ್ರಹ ನಿಗದಿತ ಗುರಿಗೆ ಶೇ. 110 ರಷ್ಟಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣಾ ಕ್ರಮಗಳಿಂದ ಹೆಚ್ಚಿನ ತೆರಿಗೆ ಸಂಗ್ರಹದ ನಿರೀಕ್ಷೆ ಇದೆ. 2023-24 ನೇ ಸಾಲಿನಲ್ಲಿ 20,000 ಕೋಟಿ ರೂ. ಗುರಿಗೆ ಎದುರಾಗಿ 20287.30 ಕೋಟಿ ರೂ ರಾಜಸ್ವ ಸಂಗ್ರಹವಾಗಿದೆ.
ಜಿ.ಐ.ಎಸ್. ಆಧಾರಿತ ಆಸ್ತಿಗಳ ವಿವರ ಹಾಗೂ ಮಾರ್ಗಸೂಚಿ ದರ ನಿಗದಿಯನ್ನು ಜಾರಿಗೊಳಿಸುವ ಮೂಲಕ ತೆರಿಗೆ ಸೋರಿಕೆ ತಡೆಗಟ್ಟಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.
ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸುವಂತೆ ಸೂಚಿಸಲಾಯಿತು. ದಸ್ತಾವೇಜುಗಳ ನೋಂದಣಿಯನ್ನು ಡಿಜಿಟಲ್ ಆಗಿ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.