Bangalore Crime: ಬೆಂಗಳೂರಲ್ಲಿ ವಾಯುವಿಹಾರ ಹೊರಟಿದ್ದ ದಂಪತಿ ಮೇಲೆ ಹಲ್ಲೆ, ನಾಲ್ವರು ಆರೋಪಿಗಳು ಪರಾರಿ
ಬೆಂಗಳೂರಿನಲ್ಲಿ ನಡೆದು ಹೋಗುತ್ತಿದ್ದ ದಂಪತಿ ಮೇಲೆ ಹಲ್ಲೆ ನಡೆಸಿದ್ದ ನಾಲ್ವರು ಪರಾರಿಯಾಗಿದ್ದು, ಅವರ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ.ವರದಿ: ಎಚ್.ಮಾರುತಿ, ಬೆಂಗಳೂರು

ಬೆಂಗಳೂರು: ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಹೊಯ್ಸಳ ಗಸ್ತು ವಾಹನ ಆಗಮಿಸುತ್ತಿದ್ದಂತೆ ಪರಾರಿಯಾದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ವಿಶಾಲ್ ತಿವಾರಿ ಮತ್ತು ಅವರ ಪತ್ನಿ ವಿರುಪಾಕ್ಷಪುರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ನಾಲ್ವರು ಕಿಡಿಗೇಡಿಗಳು ತಿವಾರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಪತ್ನಿಗೂ ಕಿರುಕುಳ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವಿಶಾಲ್ ತಿವಾರಿ ದಂಪತಿಗಳು ತಮ್ಮ ಪಾಡಿಗೆ ತಾವು ಹೋಗುತ್ತಿದ್ದಾಗ ನಾಲ್ವರು ಕಿಡಿಗೇಡಿಗಳು ಅಡ್ಡಗಟ್ಟಿ ಹಲ್ಲೆ ಮಾಡಿ ಬೆದರಿಕೆಯೊಡ್ಡಿದ್ದಾರೆ. ವಿಶಾಲ್ ಅವರು ತುರ್ತು ಸಹಾಯಕ್ಕಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಅವರ ಪತ್ನಿಗೂ ಆರೋಪಿಗಳು ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ದೂರು ನೀಡುವಂತೆ ಸಂತ್ರಸ್ತ ದಂಪತಿಯನ್ನು ಕೋರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಆರೋಪಿಗಳು ಪರಾರಿಯಾಗಿದ್ದಾರೆ. ವಿಶಾಲ್ ಅವರು ಮದ್ಯ ಕುಡಿದಿದ್ದರು. ಠಾಣೆಗೆ ಬಂದು ದೂರು ನೀಡುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಎಲ್ಲ ದೃಶ್ಯ ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೂರು ನೀಡಿದ ನಂತರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತೆ ಜೊತೆ ವಾಟ್ಸ್ಆ್ಯಪ್ ಚಾಟ್ ಶಂಕೆ, ಯುವಕನ ಮೇಲೆ ಹಲ್ಲೆ
ತನ್ನ ಸ್ನೇಹಿತೆ ಜೊತೆ ವಾಟ್ಸ್ಆ್ಯಪ್ ಚಾಟ್ ಮಾಡುತ್ತಿದ್ದಾನೆ ಎಂದು ಶಂಕಿಸಿ ಯುವಕನೊಬ್ಬನ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಶಾಂಕ್ ಹಾಗೂ ಈತನ ಸ್ನೇಹಿತ ಚಂದನ್ ಬಂಧಿತ ಆರೋಪಿಗಳು. ಇವರಿಬ್ಬರೂ ಸೇರಿಕೊಂಡು ಹರ್ಷಿತ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಹರ್ಷಿತ್ ನೀಡಿದ್ದ ಹೇಳಿಕೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಿತ್ ಅವರ ತಂದೆ, ಬಸವನಗುಡಿಯಲ್ಲಿ ಹೂ ಅಲಂಕಾರ ಮಳಿಗೆ ನಡೆಸುತ್ತಿದ್ದಾರೆ. ತಂದೆಗೆ ಹರ್ಷಿತ್ ನೆರವು ನೀಡುತ್ತಿದ್ದರು. ಇವರ ಅಂಗಡಿ ಸಮೀಪವಿದ್ದ ಲ್ಯಾಬ್‌ವೊಂದರಲ್ಲಿ ಯುವತಿಯೊಬ್ಬರು ಕೆಲಸ ಮಾಡುತ್ತಿದ್ದು, ಹರ್ಷಿತ್‌ಗೂ ಪರಿಚಯವಾಗಿತ್ತು. ಇಬ್ಬರೂ ಚಾಟ್ ಮಾಡಲಾರಂಭಿಸಿದ್ದರು.
ಯುವತಿಯ ಸ್ನೇಹಿತ ಶಶಾಂಕ್, ವಾಟ್ಸ್‌ಆ್ಯಪ್ ಚಾಟಿಂಗ್ ಅನ್ನು ಗಮನಿಸಿದ್ದ. ಹರ್ಷಿತ್ ಕೇವಲ ಸ್ನೇಹಿತ ಮಾತ್ರ ಎಂದು ಯುವತಿ ಹೇಳಿದ್ದರೂ ಆರೋಪಿ ಹರ್ಷಿತ್ ಮೇಲೆ ಅನುಮಾನ ಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಶಾಂಕ್ ಮತ್ತು ಆತನ ಸ್ನೇಹಿತ ಚಂದನ್ ಇಬ್ಬರೂ ಮದ್ಯ ಕುಡಿದು ಬೈಕ್‌ನಲ್ಲಿ ಹರ್ಷಿತ್ ಅವರ ಅಂಗಡಿಗೆ ಹೋಗಿದ್ದರು. ಅಲ್ಲಿ ಹರ್ಷಿತ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.ಹರ್ಷಿತ್ ಅವರ ಬಲಗೈ ಹೆಬ್ಬೆರಳು ತುಂಡಾಗಿ ಎಡಗೈಗೂ ಗಾಯವಾಗಿತ್ತು. ಎರಡೂ ಕೈಗಳಿಂದ ರಕ್ತ ಸೋರುತ್ತಿತ್ತು. ಸ್ಥಳೀಯರು ಹರ್ಷಿತ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶಶಾಂಕ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರೆಂಬ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ
ಬೆಂಗಳೂರು ನಗರದ ಕೆಲವು ರಸ್ತೆಗಳ ಬದಿಯಲ್ಲಿ ನಿಲ್ಲಿಸುತ್ತಿದ್ದ ಲಾರಿಗಳನ್ನು ಕಳವು ಮಾಡಿ ಗುಜರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾರತಿನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಗಾಂಧಿ ನಗರದ 24 ವರ್ಷದ ರಾಜ ಹಾಗೂ ಬಾಹುಬಲಿ ನಗರದ 20 ವರ್ಷದ ರಂಜಿತ್ ಕುಮಾರ್ ಬಂಧಿತ ಆರೋಪಿಗಳು. ಇವರಿಂದ 12 ಲಕ್ಷ ಮೌಲ್ಯದ ಲಾರಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೋಲ್ಸ್ ಪಾರ್ಕ್ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಲಾರಿಯನ್ನು ಕದ್ದು ತಂದು ನಿಲ್ಲಿಸಿದ್ದ ಆರೋಪಿಗಳು, ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಇಬ್ಬರನ್ನೂ ಹಿಡಿಯಲು ಮುಂದಾಗಿದ್ದರು. ಆಗ ಪೊಲೀಸರನ್ನು ನೋಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಅನುಮಾನಗೊಂಡ ಪೊಲೀಸರು, ಇಬ್ಬರನ್ನೂ ಬೆನ್ನಟ್ಟಿ ಹಿಡಿದು ಹಿಡಿದು ವಿಚಾರಣೆ ನಡೆಸಿದಾಗ ಲಾರಿ ಕಳ್ಳತನ ಮಾಡಿರುವ ಸಂಗತಿ ಗೊತ್ತಾಗಿದೆ.
ಆರೋಪಿಗಳು ಕನಕಪುರ ಮುಖ್ಯರಸ್ತೆಯಲ್ಲಿರುವ ಸಿಲ್ಕ್ ಇನ್‌ಸ್ಟಿಟ್ಯೂಟ್ ಕ್ವಾರ್ಟರ್ಸ್ ಹತ್ತಿರ ನಿಲ್ಲಿಸಿದ್ದ ಲಾರಿಯನ್ನು ಕಳ್ಳತನ ಮಾಡಿದ್ದರು. ಲಾರಿಯನ್ನು ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡಲೆಂದು ಭಾರತಿನಗರಕ್ಕೆ ಬಂದಿದ್ದರು. ಆದರೆ ಅವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿದ್ದ ಇಬ್ಬರೂ ಆರೋಪಿಗಳು ಸುಲಭವಾಗಿ ಹಣ ಸಂಪಾದಿಸಲು ಕಳ್ಳತನದ ಹಾದಿ ಹಿಡಿದಿದ್ದರು. ಇವರಿಬ್ಬರೂ ಮತ್ತಷ್ಟು ಲಾರಿಗಳನ್ನು ಕಳ್ಳತನ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ:ಎಚ್. ಮಾರುತಿ, ಬೆಂಗಳೂರು
