Bangalore Crime: ಸೈಬರ್ ವಂಚನೆಗೆ ಸಿಲುಕಿದ ಬೆಂಗಳೂರಿನ ವೈದ್ಯ; ಮಹಿಳೆ ವಿಡಿಯೋ ಕರೆ ಸ್ವೀಕರಿಸಿ 2.3 ಲಕ್ಷ ರೂ.ಕಳೆದುಕೊಂಡರು !
Cyber Crime ಬೆಂಗಳೂರಿನಲ್ಲಿ ಅನಾಮಿಕ ಮಹಿಳೆಯ ಕರೆ ಸ್ವೀಕರಿಸಿದ ವೈದ್ಯರೊಬ್ಬರು ಬೆತ್ತಲಾಗಿ ಹಣ ಕಳೆದುಕೊಂಡಿದ್ದಾರೆ. ಸೈಬರ್ ಅಪರಾಧ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಸೈಬರ್ ಅಪರಾಧಗಳ ವಂಚನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಇಂತಹ ಪ್ರಕರಣಗಳಿಗೆ ಬಲಿಪಶುಗಳಾಗುತ್ತಿರುವವರು ಸುಶಿಕ್ಷಿತರೇ ಆಗಿದ್ದಾರೆ. ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಇಂತಹ ಮತ್ತೊಂದು ಸೈಬರ್ ವಂಚನೆ ಪ್ರಕರಣ ನಡೆದಿದ್ದು, ವೈದ್ಯರೊಬ್ಬರು ಸಿಲುಕಿದ್ದಾರೆ.ಮಧ್ಯರಾತ್ರಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೊಬೈಲ್ ಕಾಲ್ ರಿಸೀವ್ ಮಾಡಿದ ವೈದ್ಯರೊಬ್ಬರಿಗೆ ಈ ಕರೆ ದುಬಾರಿಯಾಗಿ ಪರಿಣಮಿಸಿದೆ. ನಡುರಾತ್ರಿಯಲ್ಲಿ ಮಹಿಳೆಯ ಕರೆಯನ್ನು ಸ್ವೀಕರಿಸಿದ 72 ವರ್ಷದ ವೈದರು 2.3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಕಳೆದ ತಿಂಗಳು ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ವೈದ್ಯರು ಸೈಬರ್ ಸೆಕ್ಸ್ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಜುಲೈ 27ರಂದು ಈ ಪ್ರಕರಣ ನಡೆದಿದ್ದು, ಆಗಸ್ಟ್ 5ರಂದು ವೈದ್ಯರು ದೂರು ನೀಡಿದ್ದಾರೆ. ಕುಮಾರ ಪಾರ್ಕ್ ವೆಸ್ಟ್ ನಿವಾಸಿಯಾಗಿರುವ ವೈದ್ಯರು ಸೈಬರ್ ಕ್ರೈಂ (ಸೆನ್ ) ಪೊಲೀಸರಿಗೆ ದೂರು
ಸಲ್ಲಿಸಿದ್ದು, ಪ್ರಕರಣದ ವಿವರ ನೀಡಿದ್ದಾರೆ. ಮಧ್ಯರಾತ್ರಿಯಲ್ಲಿ ವಿಡಿಯೋ ಕರೆ ಬಂದಿದ್ದು, ಯಾರೋ ಪರಿಚಿತರು ವೈದ್ಯಕೀಯ ಸಹಾಯಕ್ಕಾಗಿ ಕರೆಯನ್ನು ಮಾಡಿರಬಹುದು ಎಂದು ಕರೆಯನ್ನು ಸ್ವೀಕರಿಸಿದ್ದೆ. ಆದರೆ ಕರೆ ಮಾಡಿದ ಮಹಿಳೆ ಬೆತ್ತಲೆಯಾಗಿದ್ದು, ಅಶ್ಲೀಲವಾಗಿ ಮಾತನಾಡುತ್ತಿದ್ದಳು. ಜತೆಗೆ ನನ್ನನ್ನು ಉದ್ರೇಕಿಸಿ ಬೆತ್ತಲೆಯಾಗುವಂತೆ
ಉದ್ರೇಕಿಸುತ್ತಿದ್ದಳು. ಈ ಸೈಬರ್ ವಂಚಕರು ಈ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಮಹಿಳೆಯ ಮಾತುಗಳಿಗೆ ಮರುಳಾಗಿ ಒಂದು ಹಂತದಲ್ಲಿ ವೈದ್ಯರೂ ಬೆತ್ತಲೆಯಾಗಿದ್ದಾರೆ. ಕೂಡಲೇ ವಿಡಿಯೋ ಕರೆ ಸಂಪರ್ಕ ಕಳೆದುಕೊಂಡಿದೆ.
ಮರು ದಿನ ಬೆಳಗ್ಗೆ ವೈದ್ಯರಿಗೆ ಮತ್ತೊಂದು ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಸೈಬರ್ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ನೀವು ಮಹಿಳೆಯೊಬ್ಬರೊಂದಿಗೆ ಆತ್ಮೀಯವಾಗಿ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವುದು, ತುಂಬಾ ಪರಿಚಿತರಂತೆ ಇರುವುದು, ಮತ್ತು ಬೆತ್ತಲೆ ವಿಡಿಯೋ ಹಾಗೂ ಫೋಟೋಗಳಿದ್ದು, ಸಾಮಾಜಿಕ ಜಾಲತಾಣಗಳಾದ ಎಕ್ಸ್, ಇನ್ ಸ್ಟಾಗ್ರಾಂ ಮತ್ತು ಯೂ ಟ್ಯೂಬ್ ಗಳಲ್ಲಿ ಹರಿದಾಡುತ್ತಿವೆ ಎಂದು ಬೆದರಿಸಿದ್ದಾನೆ. ಈ ವಿಡಿಯೋದಲ್ಲಿರುವ ಮಹಿಳೆ ನಿಮ್ಮ ವಿರುದ್ಧ ದೂರು ನೀಡಿದ್ದು ಪ್ರಕರಣವನ್ನು ದಾಖಲಸಿಕೊಳ್ಳಲಾಗಿದೆ ಎಂದೂ ವೈದ್ಯರಿಗೆ ಆತಂಕ ಉಂಟು ಮಾಡಿದ್ದಾನೆ.
ಇದರಿಂದ ಬೆದರಿದ ವೈದ್ಯರು ಅಪಾಯದಿಂದ ಪಾರಾಗಲು ಉಪಾಯ ಕೇಳಿದ್ದಾರೆ. ಆತ ಸಹಾಯ ಮಾಡುವವನಂತೆ ನಟಿಸಿ ಸಾಮಾಜಿಕ ಜಾಲತಾಣಗಲಿಂದ ವಿಡಿಯೋ ಮತ್ತು ಫೋಟೋಗಳನ್ನು ಡಿಲಿಟ್ ಮಾಡುವುದಾಗಿ ತಿಳಿಸಿದ್ದಾನೆ. ಕೆಲವು ನಿಮಿಷಗಳ ನಂತೆರ ಮತ್ತೆ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಆತ ತನ್ನನ್ನು ತಾನು ಯೂ ಟ್ಯೂಬ್ ಉದ್ಯೋಗಿ ಎಂದು ಪರಿಚಯಿಸಿಕೊಂಡು ದೆಹಲಿ ಸೈಬರ್ ಪೊಲೀಸ್ ಅಧಿಕಾರಿಯೊಬ್ಬರು ನಿಮ್ಮನ್ನು ಸಂಪರ್ಕಿಸಲು ತಿಳಿಸಿದ್ದಾರೆ ಎಂದು ಹೇಳಿದ್ದಾನೆ. ಯೂ ಟ್ಯೂಬ್ ನಿಂದ ಅಳಿಸಿಹಾಕಲು 41,500 ರೂ.ಗಳಿಗೆ ಬೇಡಿಕೆ ಇಟ್ಟಿದ್ದಾನೆ. ತುಂಬಾ ವಿಚಲಿತರಾಗಿದ್ದ ವೈದ್ಯರು ಹೇಗಾದರೂ ಪಾರಾಗಬೇಕೆಂದು ನಿರ್ಧರಿಸಿ ಈ ವಂಚಕನಿಗೆ ಹಣವನ್ನು ವರ್ಗಾಯಿಸಿದ್ದಾರೆ. ನಂತರ ಅವರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, 2.3 ಲಕ್ಷ ರೂಪಾಯಿಗಳನ್ನು ಕಿತ್ತಿದ್ದಾರೆ.
ಈ ಪ್ರಕರಣ ನಡೆದ ಮರುದಿನ ವೈದ್ಯರು ಪೊಲೀಸ್ ಠಾಣೆಯೊಂದಕ್ಕೆ ಭೇಟಿ ನೀಡಿ ಇಂತಹ ಪ್ರಕರಣದಿಂದ ಪಾರಾಗುವುದು ಹೇಗೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮೂರನೇ ಭೇಟಿಯಲ್ಲಿ ತಾನೇ ಬಲಿಪಶುವಾಗಿರುವುದನ್ನು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ತಾನು ವಿಡಿಯೋ ಕರೆಯನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಿದ್ದಾರೆ. ಈ ವೈದ್ಯರು ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಹಣವನ್ನು ಹಿಂಪಡೆಯಲು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)