Jail Posting: ದರ್ಶನ್ ರಾಜಾತಿಥ್ಯ ಪ್ರಕರಣ, ಕಾರಾಗೃಹ ಡಿಐಜಿ ಎತ್ತಂಗಡಿ, ದಿವ್ಯಶ್ರಿಗೆ ಇಲಾಖೆ ಜವಾಬ್ದಾರಿ
New DIG ಕರ್ನಾಟಕ ಕಾರಾಗೃಹ ಇಲಾಖೆ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ನೂತನ ಡಿಐಜಿಯಾಗಿ ಕೆ.ಸಿ.ದಿವ್ಯಶ್ರೀ ಅವರನ್ನು ನೇಮಿಸಲಾಗಿದೆ.
ಬೆಂಗಳೂರು: ಭಾರೀ ಸದ್ದು ಮಾಡುತ್ತಿರುವ ನಟ ದರ್ಶನ್( film Star Darshan Case) ಹಾಗೂ ಸಂಗಡಿಗರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ರಾಜಾತಿಥ್ಯ ಪ್ರಕರಣದ( Royal Treatment in Bangalore Jail) ನಂತರ ಕಾರಾಗೃಹ ಇಲಾಖೆ ಆಡಳಿತಕ್ಕೂ ಮೇಜರ್ ಸರ್ಜರಿ ಮಾಡಲಾಗಿದೆ. ಕಾರಾಗೃಹ ಇಲಾಖೆಯ ಡಿಐಜಿಯಾಗಿದ್ದ(DIG Transfer) ಸೋಮಶೇಖರ್ ಅವರನ್ನು ಕರ್ನಾಟಕ ಸರ್ಕಾರ ಎತ್ತಂಗಡಿ ಮಾಡಲಾಗಿದೆ. ಅವರ ಜಾಗಕ್ಕೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿ ಕೆ.ಸಿ.ದಿವ್ಯಶ್ರೀ ( DIG KC Divyashree) ಅವರನ್ನು ನೇಮಿಸಲಾಗಿದೆ. ಸೋಮಶೇಖರ್ ಅವರನ್ನು ಕಾರಾಗೃಹ ಅಕಾಡೆಮಿಯ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ದಿವ್ಯಶ್ರೀ ಅವರು ಕಾರಾಗೃಹ ಅಕಾಡೆಮಿಯ ನಿರ್ದೇಶಕರಾಗಿದ್ದರು.
ಎರಡು ತಿಂಗಳ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್, ನಟಿ ಪವಿತ್ರ ಗೌಡ ಹಾಗೂ ಹದಿನೇಳು ಮಂದಿಯನ್ನು ಬಂಧಿಸಲಾಗಿತ್ತು. ಎರಡು ತಿಂಗಳಿನಿಂದ ಹದಿನಾಲ್ಕು ಮಂದಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಮೂರು ದಿನದ ಹಿಂದೆ ದರ್ಶನ್‌ಗೆ ರಾಜಾತಿಥ್ಯ ನೀಡಿದ ಫೋಟೋ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಈವರೆಗೂ ಬೆಂಗಳೂರು ಕಾರಾಗೃಹ ಇಲಾಖೆ ಸೇವೆಯಲ್ಲಿದ್ದ ಹದಿಮೂರು ಮಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.
ಈಗಾಗಲೇ ಸರ್ಕಾರ ನೇಮಿಸಿರುವ ಐದು ತಂಡಗಳು ತನಿಖೆಯನ್ನೂ ಆರಂಭಿಸಿವೆ. ಮತ್ತೊಂದು ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸುವ ಆದೇಶವಾಗಿದ್ದರೆ ಇತರರನ್ನು ಶಿವಮೊಗ್ಗ, ವಿಜಯಪುರ, ಮೈಸೂರು, ಬೆಳಗಾವಿ, ಕಲಬುರಗಿ ಕಾರಾಗೃಹಕ್ಕೆ ವರ್ಗ ಮಾಡುವ ಆದೇಶ ಮಾಡಲಾಗಿದೆ.
ಇದರ ನಡುವೆಯೇ ಪೊಲೀಸ್ ಇಲಾಖೆಯಷ್ಟೇ ಪ್ರಮುಖವಾಗಿರುವ ಕಾರಾಗೃಹ ಇಲಾಖೆಯಲ್ಲೂ ಬದಲಾವಣೆ ಮಾಡಲಾಗಿದೆ. ಕಾರಾಗೃಹ ಇಲಾಖೆ ಡಿಜಿಪಿ ನಂತರ ಪ್ರಮುಖ ಹುದ್ದೆಯಾದ ಕಾರಾಗೃಹ ಇಲಾಖೆಯ ಡಿಐಜಿ ಹುದ್ದೆಯಲ್ಲಿದ್ದ ಸೋಮಶೇಖರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಮೇಲುಸ್ತುವಾರಿ ಮಾಡುವಲ್ಲಿ ವಿಫಲರಾದ ಆರೋಪದ ಮೇಲೆ ಅವರನ್ನು ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಇಲಾಖೆಯಲ್ಲೇ ಡಿಐಜಿ ಹುದ್ದೆಯ ಕಾರಾಗೃಹ ಅಕಾಡೆಮಿಯ ನಿರ್ದೇಶಕಾಗಿದ್ದ ಕೆ.ಸಿ.ದಿವ್ಯಶ್ರೀ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಒಂದೂವರೆ ದಶಕದಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿವ್ಯಶ್ರೀ ಈ ಹಿಂದೆ ಮೈಸೂರು. ಬೆಂಗಳೂರು ಕಾರಾಗೃಹಗಳಲ್ಲಿ ಅಧೀಕ್ಷಕರಾಗಿದ್ದರು. ಆನಂತರ ಡಿಐಜಿ ಹುದ್ದೆಗೆ ಬಡ್ತಿ ಪಡೆದಿದ್ದರು.
]ಈಗ ಅವರಿಗೆ ಮಹತ್ವದ ಹುದ್ದೆ ನೀಡಿ ಎಲ್ಲಾ ಕಾರಾಗೃಹಗಳಲ್ಲಿನ ಇಂತಹ ಚಟುವಟಿಕೆ ನಿಗ್ರಹಿಸಲು ಸೂಚಿಲಾಗಿದೆ. ಕಾರಾಗೃಹ ಇಲಾಖೆ ಡಿಜಿಪಿಯಾಗಿರುವ ಮಾಲಿನಿ ಕೃಷ್ಣಮೂರ್ತಿ ಅವರು ಕೆಲ ದಿನಗಳ ಹಿಂದೆಯಷ್ಟೇ ಈ ಇಲಾಖೆಗೆ ಬಂದಿದ್ದಾರೆ. ಈಗ ಎರಡೂ ಹುದ್ದೆಗೆ ಮಹಿಳೆಯರೇ ನಿಯೋಜನೆ ಆದಂತೆ ಆಗಿದೆ.