Bangalore News: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ, ಬಿಬಿಎಂಪಿ ಆಯುಕ್ತರಿಗೂ ಜ್ವರ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ, ಬಿಬಿಎಂಪಿ ಆಯುಕ್ತರಿಗೂ ಜ್ವರ

Bangalore News: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ, ಬಿಬಿಎಂಪಿ ಆಯುಕ್ತರಿಗೂ ಜ್ವರ

Dengue ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿವೆ. ಬಿಬಿಎಂಪಿ ಆಯುಕ್ತರಿಗೆ ಜ್ವರ ಕಾಣಿಸಿಕೊಂಡಿದ್ದು, ಡೆಂಗ್ಯೂ ಭಯ ಎದುರಾಗಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಿವೆ.
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಿವೆ.

ಬೆಂಗಳೂರು: ಮಳೆಗಾಲದ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ 550 ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದರೆ, ಕಳೆದ ಮೂರು ವಾರಗಳಲ್ಲಿ 1,036 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಪ್ರಕರಣಗಳು ದುಪ್ಪಟ್ಟಾಗಿವೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳೂ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ವತಃ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ತುಷಾರ್‌ ಗಿರಿನಾಥ್‌ ಅವರೂ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಲಕ್ಷಣಗಳು ಕಂಡು ಬಂದಿವೆ.

ಆಯುಕ್ತರಿಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿತ್ತು. ಒಂದು ದಿನ ವಿಶ್ರಾಂತಿ ತೆಗೆದುಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಭಾನುವಾರ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಡೆಂಗ್ಯೂ ಲಕ್ಷಣಗಳು ಕಂಡು ಬಂದಿವೆ. ಆದರೆ ಡೆಂಗ್ಯೂ ಪರೀಕ್ಷೆಯನ್ನು ನಡೆಸಿಲ್ಲ. ಆರೋಗ್ಯಾಧಿಕಾರಿಗಳ ಸಲಹೆ ಮೇರೆಗೆ ಆಯುಕ್ತರು ವಿಶ್ರಾಂತಿ ಪಡೆಯುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಅವರು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

ಆಯುಕ್ತರು ಸಣ್ಣ ಪ್ರಮಾಣದ ಜ್ವರ ಇದ್ದರೂ ಅವರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ವಾಹನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿಭಾಗವಹಿಸಿದ್ದರು. ನಂತರ ಜಾಹಿರಾತು ನೀತಿ ಕುರಿತ ಪರಿಶೀಲನಾ ಸಮಿತಿ ಸಭೆಯಲ್ಲೂ ಪಾಲ್ಗೊಂಡಿದ್ದರು.

ಡೆಂಗ್ಯು ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಅರಿವುಮೂಡಿಸುವುದು, ಮನೆ ಮನೆ ಸಮೀಕ್ಷೆ ನಡೆಸುವುದು ಮತ್ತು ಔಷಧಿಯನ್ನು ಸಿಂಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 6 ತಿಂಗಳಲ್ಲಿ 2,442 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಸದ್ಯ 1,036 ಪ್ರಕರಣಗಳು ದಾಖಲಾಗಿವೆ. ತಮ್ಮ ಗಾತ್ರ ಮತ್ತು ಜನಸಂಖ್ಯೆಯ ಕಾರಣಕ್ಕೆ ಮಹದೇವಪುರ ಮತ್ತು ಪೂರ್ವ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ.

ಕೇವಲ ಬೆಂಗಳೂರು ಮತ್ರವಲ್ಲದೆ ಇಡೀ ರಾಜ್ಯದಲ್ಲೂ ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಶೇ.140 ರಷ್ಟು ಡೆಂಗಿ ಪ್ರಕರಣಗಲೂ ಹೆಚ್ಚಾಗಿವೆ. ಪ್ರಸಕ್ತ ಸಾಲಿನ ಜನವರಿ 1ರಿಂದ ಜೂನ್‌ ಮಧ್ಯಭಾಗದವರೆಗೆ ರಾಜ್ಯದಲ್ಲಿ 4,888 ಪ್ರಕರಣಗಳು ಪತ್ತೆಯಾಗಿವೆ.

ಎಲ್ಲ ಜಿಲ್ಲೆಗಳಲ್ಲೂ ಸಮಾನವಾಗಿ ಡೆಂಗ್ಯೂ ಪ್ರಕರಣಗಲೂ ಕಂಡು ಬಂದಿಲ್ಲವಾದರೂ ಚಿಕ್ಕಮಗಳೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಡೆಂಗ್ಯುಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ.

ಮೈಸೂರು, ಹಾವೇರಿ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದರೆ ಯಾದಗಿರಿ ಬೆಂಗಳೂರು ಗ್ರಾಮಾಂತರ, ವಿಜಯನಗರ, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ಪ್ರಕರಣಗಳು ಕಂಡು ಬಂದಿವೆ. ಡೆಂಗ್ಯೂ ಪರೀಕ್ಷೆಯನ್ನೂ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲಾಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಮಟ್ಟಿಗೆ ಕೊಳಚೆ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೊಳಚೆ ಪ್ರದೇಶದ 5 ವರ್ಷದ ಬಾಲಕಿ ಡೆಂಗ್ಯೂಗೆ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಆದರೆ ವೈದ್ಯರುಡೆಂಗ್ಯೂದಿಂದ ಮೃತಪಟ್ಟಿಲ್ಲ ಎಂದು ವಾದಿಸುತ್ತಿದ್ದರೆ ಪೋಷಕರು ಡೆಂಗ್ಯೂದಿಂದಲೇ ಮೃತಪಟ್ಟಿದ್ದಾಳೆ ಎಂದು ವಾದಿಸುತ್ತಿದ್ದಾರೆ.

ಕೊಳಚೆ ಪ್ರದೇಶಗಳಲ್ಲಿ ಕಸ ನಿರ್ವಹಣೆ ಅಸಮರ್ಪಕವಾಗಿದ್ದು, ಡೆಂಗ್ಯೂ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆಪಾದಿಸುತ್ತಾರೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಂಭವವಿದ್ದು, ಡೆಂಗ್ಯೂ ನಿಯಂತ್ರಣಕ್ಕೆ ಈಗಿನಿಂದಲೇ ಎಚ್ಚರ ವಹಿಸುವ ಅಗತ್ಯವಿದೆ. ಕಸ ನಿರ್ವಹಣೆಯೂ ಸೇರಿದಂತೆ ಔಷಧಿ ಸಿಂಪಡಣೆ, ಪರೀಕ್ಷೆಗಳ ಹೆಚ್ಚಳ ಮತ್ತು ಚಿಕಿತ್ಸೆಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸುವ ಅಗತ್ಯವಿದೆ ಎನ್ನುವುದು ಸ್ಥಳೀಯರ ಆಗ್ರಹ.

(ವರದಿ: ಎಚ್‌.ಮಾರುತಿ.ಬೆಂಗಳೂರು)

 

 

Whats_app_banner