ಕನ್ನಡ ಸುದ್ದಿ  /  ಕರ್ನಾಟಕ  /  Dengue In Bangalore: ಬೆಂಗಳೂರಿನಲ್ಲಿ ಡೆಂಗ್ಯೂಗೆ ಇಬ್ಬರ ಸಾವಿನ ಶಂಕೆ, ಬಿಬಿಎಂಪಿ ಕಟ್ಟೆಚರ, ವರದಿಗೆ ಸೂಚನೆ

Dengue in Bangalore: ಬೆಂಗಳೂರಿನಲ್ಲಿ ಡೆಂಗ್ಯೂಗೆ ಇಬ್ಬರ ಸಾವಿನ ಶಂಕೆ, ಬಿಬಿಎಂಪಿ ಕಟ್ಟೆಚರ, ವರದಿಗೆ ಸೂಚನೆ

Bangalore News ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಲ್ಲೂ ನಿಧಾನವಾಗಿ ಡೆಂಗ್ಯೂ ಪ್ರಕರಣ ಏರಿಕೆಯಾಗಿದ್ದು, ಇಬ್ಬರ ಸಾವಿನ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು ಭಾಗದಲ್ಲಿ ಡೆಂಗ್ಯೂ ಪ್ರಕರಣ ಏರಿಕೆಯಾಗಿದೆ.
ಬೆಂಗಳೂರು ಭಾಗದಲ್ಲಿ ಡೆಂಗ್ಯೂ ಪ್ರಕರಣ ಏರಿಕೆಯಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುತ್ತಿರುವ ನಡುವೆಯೇ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ನಿಧಾನವಾಗಿ ಏರಿಕೆ ಕಾಣುತ್ತಿವೆ. ಡೆಂಗ್ಯೂವಿನಿಂದ ಇಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಆರೋಗ್ಯ ಸ್ಥಿತಿಗತಿ ಪರಾಮರ್ಶೆಗೆ ಮುಂದಾಗಿದ್ದು. ಸನ್ನದ್ದವಾಗಿರುವಂತೆ ಎಲ್ಲಾ ವಲಯ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಕಳೆದ ವಾರ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಜ್ವರ ಕಾಣಿಸಿಕೊಂಡಿದ್ದು. ಡೆಂಗ್ಯೂ ಇರುವ ಶಂಕೆ ವ್ಯಕ್ತವಾಗಿತ್ತು. ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡ ಅವರು ಈಗಾಗಲೇ ಸೇವೆಗೂ ಮರಳಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಡೆಂಗ್ಯೂ ಜ್ವರದ ಇಬ್ಬರು ಶಂಕಿತ ಸಾವುಗಳು ಎರಡು ದಿನದಲ್ಲಿ ವರದಿಯಾಗಿವೆ. ಒಂದು ಸಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಂಭವಿಸಿದ್ದರೆ, ಇನ್ನೊಂದು ಅದರ ವ್ಯಾಪ್ತಿಯಿಂದ ಹೊರಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಬಿಬಿಎಂಪಿ ವ್ಯಾಪ್ತಿಯ ವೃದ್ಧರೊಬ್ಬರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಹೊರಗೆ ವಾಸಿಸುವ ಹಿರಿಯ ನಾಗರಿಕರೊಬ್ಬರು ಡೆಂಗ್ಯೂ ಸಂಬಂಧಿತ ತೊಡಕುಗಳಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ವಿವರಗಳನ್ನು ನೀಡಿದ್ದಾರೆ. ಆರೋಗ್ಯ ಇಲಾಖೆಯ ಅಧಿಕೃತವಾಗಿ ದೃಢಪಡಿಸಿಕೊಳ್ಳುವುದು ಬಾಕಿ ಇದ್ದು ಎರಡೂ ಸಾವುಗಳು ಡೆಂಗ್ಯೂವಿನಿಂದ ಆಗಿವೆಯೇ ಎನ್ನುವ ಪರಿಶೀಲನೆ ನಡೆದಿವೆ. 

ಬೆಂಗಳೂರಿನಲ್ಲಿ ಎರಡು ಶಂಕಿತ ಡೆಂಗ್ಯೂ ಸಾವುಗಳು ವರದಿಯಾಗಿದ್ದು, ನಗರದಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರೋಗ್ಯ ಪರಾಮರ್ಶೆಗೂ ದಾರಿ ಮಾಡಿಕೊಟ್ಟಿದೆ. ಮೈಕ್ರೋ ಪ್ಲಾನ್‌ ಅನ್ನು ಡೆಂಗ್ಯೂ ಸಂಬಂಧ ಬಿಬಿಎಂಪಿ ಆರೋಗ್ಯ ಶಾಖೆ ರೂಪಿಸುವಂತೆ ಆಯುಕ್ತರು ಸೂಚನೆ ನೀಡಿದ್ಧಾರೆ.

ಜನವರಿ 1 ರಿಂದ ಜೂನ್ 28 ರವರೆಗೆ ಬೆಂಗಳೂರಿನಲ್ಲಿ 1,530 ದೃಢಪಡಿಸಿದ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ಇತ್ತೀಚೆಗೆ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಿರ್ಮೂಲನೆ ಮಾಡುವಂತೆ ನಿವಾಸಿಗಳನ್ನು ಒತ್ತಾಯಿಸುವ "ಡ್ರೈ ಡೇ" ಅಭಿಯಾನದ ನೇತೃತ್ವ ವಹಿಸಿದ್ದರು. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಹೊಂದಿರುವ ಆಟೋರಿಕ್ಷಾಗಳನ್ನು ಬಳಸುವುದು ಸೇರಿದಂತೆ ಸೂಕ್ಷ್ಮ ಮಟ್ಟದ ಯೋಜನೆಗಳು, ಮನೆ-ಮನೆ ಸಮೀಕ್ಷೆಗಳು ಮತ್ತು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ.

ಬಿಬಿಎಂಪಿ ಆರೋಗ್ಯ ಹೆಚ್ಚುವರಿ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರ ಪ್ರಕಾರ, ಇವು ಪ್ರಸ್ತುತ ಶಂಕಿತ ಪ್ರಕರಣಗಳು. ಅಧಿಕೃತ ವರದಿ ಬರಬೇಕಿದೆ. ಇಬ್ಬರು ಮೃತಪಟ್ಟಿರುವ ಮಾಹಿತಿಯಿದೆ. ಶಂಕಿತ ಪ್ರಕರಣವಾಗಿರುವುದರಿಂದ ಆರೋಗ್ಯ ವಿಭಾಗವು ಬೆಂಗಳೂರಿನಲ್ಲಿ ಡೆಂಗ್ಯೂ ಕುರಿತು ಮುನ್ನೆಚ್ಚರಿಕೆಯನ್ನು ವಹಿಸಿದೆ. ಈಗಾಗಲೇ ಪ್ರತಿ ವಲಯದಲ್ಲೂ ಡೆಂಗ್ಯೂ ನಿಯಂತ್ರಣಕ್ಕೆ ಯೋಜನೆ ರೂಪಿಸಿ ಕಾರ್ಯೋನ್ಮುಖರಾಗಿದ್ದೇವೆ ಎನ್ನುತ್ತಾರೆ.

ಬೆಂಗಳೂರಿನ ಭಾಗದಲ್ಲಿ ಎರಡು ಸಾವಿನ ಪ್ರಕರಣಗಳು ಡೆಂಗ್ಯೂಗೆ ಸಂಬಂಧಿಸಿದ್ದು ಮೊದಲನೆಯದ್ದು. ಈಗಾಗಲೇ ಹಾಸನ, ಶಿವಮೊಗ್ಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಡೆಂಗ್ಯೂಗೆ ಐದು ಮಂದಿ ಬಲಿಯಾಗಿರುವುದು ಖಚಿತವಾಗಿದೆ ಎನ್ನುವುದು ಆರೋಗ್ಯ ಇಲಾಖೆಯ ವಿವರಣೆ.