Bangalore News: ಬೆಂಗಳೂರಲ್ಲಿ ಹಣ ದುಪ್ಪಟ್ಟು ಆಮಿಷ, 40 ಕೋಟಿ ರೂ. ಸಂಗ್ರಹಿಸಿದ ಡೆವಲಪರ್‌ ಕಂಪೆನಿ; ಮೋಸ ಹೋದ 150 ಮಂದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಹಣ ದುಪ್ಪಟ್ಟು ಆಮಿಷ, 40 ಕೋಟಿ ರೂ. ಸಂಗ್ರಹಿಸಿದ ಡೆವಲಪರ್‌ ಕಂಪೆನಿ; ಮೋಸ ಹೋದ 150 ಮಂದಿ

Bangalore News: ಬೆಂಗಳೂರಲ್ಲಿ ಹಣ ದುಪ್ಪಟ್ಟು ಆಮಿಷ, 40 ಕೋಟಿ ರೂ. ಸಂಗ್ರಹಿಸಿದ ಡೆವಲಪರ್‌ ಕಂಪೆನಿ; ಮೋಸ ಹೋದ 150 ಮಂದಿ

Fraud case ಹಣ ದ್ವಿಗುಣ ಮಾಡಿಕೊಡುವುದಾಗಿ ಜನರಿಂದ ಹಣ ಸಂಗ್ರಹಿಸಿದ ಬೆಂಗಳೂರಿನ ಡೆವಲಪರ್‌ ಕಂಪೆನಿ ಮೋಸ ಮಾಡಿದೆ. ಹಣ ಸಂಗ್ರಹಿಸಿದವರು ಪರಾರಿಯಾಗಿದ್ದು, ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ಧಾರೆ.ವರದಿ: ಎಚ್.ಮಾರುತಿ, ಬೆಂಗಳೂರು

ಬೆಂಗಳೂರಲ್ಲಿ ಭಾರೀ ವಂಚನೆ ಪ್ರಕರಣ ದಾಖಲಾಗಿದೆ.
ಬೆಂಗಳೂರಲ್ಲಿ ಭಾರೀ ವಂಚನೆ ಪ್ರಕರಣ ದಾಖಲಾಗಿದೆ.

ಬೆಂಗಳೂರು: ವಂಚಕರ ಪ್ರಪಂಚದಲ್ಲಿ ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಣವನ್ನು ದುಪ್ಪಟ್ಟು ಮಾಡುತ್ತೇವೆ ಎಂಬ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಪೊಲೀಸರು ಬುದ್ದಿ ಮಾತು ಹೇಳುತ್ತಲೇ ಇರುತ್ತಾರೆ. ಆಗಾಗ್ಗೆ ಇಂತಹ ಪ್ರಕರಣಗಳನ್ನು ಕುರಿತು ವರದಿ ಗಳು ಬಿತ್ತರಗೊಳ್ಳುತ್ತಲೇ ಇರುತ್ತವೆ. ಆದರೂ ಜನ ಬುದ್ದಿ ಕಲಿಯುವುದಿಲ್ಲ.ತಿಂಗಳಿಗೆ ಶೇ 25ರಷ್ಟು ಲಾಭ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಬರೋಬ್ಬರಿ 40 ಕೋಟಿ ರೂಪಾಯಿ ಸಂಗ್ರಹಿಸಿ ಆರೋಪಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಜು ಹಾಗೂ ಜಿ.ವಿ. ಮುನಿರಾಜು ಎಂಬ ಆರೋಪಿಗಳು ವಿಜಯನಗರದ ಎಂ.ಸಿ. ಲೇಔಟ್‌ನಲ್ಲಿ ಹಣ ಹೂಡಿಕೆ ಹೆಸರಿನಲ್ಲಿ ಅಕ್ಷಯ್ ಫಾರ್ಚ್ಯೂನ್ (ಎಫ್‌) ಡೆವಲಪರ್ಸ್ ಕಂಪನಿ ಆರಂಭಿಸುತ್ತಾರೆ. ಇವರು ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಹೂಡಿಕೆ ಹೆಸರಿನಲ್ಲಿ 150ಕ್ಕೂ ಹೆಚ್ಚು ಸಾರ್ವಜನಿಕರಿಂದ ಸುಮಾರು ರೂಪಾಯಿ 40 ಕೋಟಿ ಹಣವನ್ನು

ಸಂಗ್ರಹಿಸುತ್ತಾರೆ. ನಂತರ ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.ಮಂಜು ಹಾಗೂ ಜಿ.ವಿ. ಮುನಿರಾಜು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೂಡಿಕೆ ಮಾಡಿದ ಹಣದ ಮೇಲೆ ತಿಂಗಳಿಗೆ ಶೇ 25ರಷ್ಟು ಲಾಭಾಂಶ ನೀಡುವುದಾಗಿ ಇವರು ಸಾರ್ವಜನಿಕರನ್ನು ನಂಬಿಸುತ್ತಿದ್ದರು. ಕಚೇರಿಗೆ ಬರುವ ಗ್ರಾಹಕರಿಗೆ ಬಲೆ ಬೀಸುತ್ತಿದ್ದರು.

ಸಂಬಂಧಿಕರು ಮತ್ತು ಸ್ನೇಹಿತರಿಂದ ಹಣ ಹೂಡಿಕೆ ಮಾಡಿಸಿದರೆ ಕಮಿಷನ್ ನೀಡುವುದಾಗಿ ನಂಬಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಲಾಭ ಬರುತ್ತದೆ ಎಂದೂ ಆರೋಪಿಗಳು ಜಾಹೀರಾತು ನೀಡುತ್ತಿದ್ದರು. ಇವರ ಬಣ್ಣದ ಮಾತು ಮತ್ತು ಆಕರ್ಷಕ ಜಾಹೀರಾತಿಗೆ ಮರುಳಾಗಿ ಅನೇಕ

ಸಾರ್ವಜನಿಕರು ಅಕ್ಷಯ್ ಫಾರ್ಚ್ಯೂನ್ ಡೆವಲಪರ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಈ ಮೋಸದ ಕಂಪನಿಗೆ ಮುನಿರಾಜು ತನ್ನ ಪತ್ನಿ ಮತ್ತು ಸಂಬಂಧಿಕರನ್ನು ಮಾತ್ರ ನಿರ್ದೇಶಕ ಮಂಡಳಿಗೆ ಸದಸ್ಯರನ್ನಾಗಿ ನೇಮಿಸಿಕೊಂಡಿದ್ದ. ಇವರೆಲ್ಲರೂ ವಂಚನೆ ಎಸಗಿರುವ ಮಾಹಿತಿ ಲಭ್ಯವಾಗಿದೆ. ಮುನಿರಾಜು ಪತ್ನಿ ಕೆಲವರನ್ನು ಸಂಪರ್ಕಿಸಿ ಹಣ ಹೂಡಿಕೆ ಮಾಡಿಸಿದ್ದರು. ಆರಂಭದಲ್ಲಿ ಕೆಲವರಿಗೆ ಹೆಚ್ಚಿನ ಲಾಭ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಹೂಡಿಕೆ ಹೆಚ್ಚಾದಂತೆ ಲಾಭ ನೀಡುವುದನ್ನು ನಿಲ್ಲಿಸಿದ್ದರು. ಈ ವಂಚನೆ ಕುರಿತು ಹೂಡಿಕೆದಾರರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಲ್ಲಿ ಯಾರಾದರೂ ಹಣ ಹೂಡಿಕೆ ಮಾಡಿದ್ದರೆ ಅಥವಾ ವಂಚನೆಗೆ ಒಳಗಾಗಿದ್ದರೆ ದೂರು ನೀಡಬಹುದು ಎಂದು ಬೆಂಗಳೂರು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

Whats_app_banner