Bangalore News: ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಹೊಸ ನಿಯಮ, ಕೆಲಸಗಾರರು ಪಾರ್ಕ್, ಸೋಫಾ ಬಳಸುವಂತಿಲ್ಲ, ಇದೇನಾ ಸಮಾನತೆ, ಉಗಿದ ನೆಟ್ಟಿಗರು
ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರ ಸುತ್ತೊಲೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಕಾರ್ಪೆಂಟರ್‌ಗಳು, ಪ್ಲಂಬರ್‌ಗಳು ಅಪಾರ್ಟ್‌ಮೆಂಟ್‌ನ ಅಮೆನೆಟಿಸ್‌ಗಳನ್ನು ಬಳಸುವಂತೆ ಇಲ್ಲ ಎಂಬ ಸುತ್ತೊಲೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರ ಸುತ್ತೊಲೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಕಾರ್ಪೆಂಟರ್‌ಗಳು, ಪ್ಲಂಬರ್‌ಗಳು ಅಪಾರ್ಟ್‌ಮೆಂಟ್‌ನ ಅಮೆನೆಟಿಸ್‌ಗಳನ್ನು ಬಳಸುವಂತೆ ಇಲ್ಲ ಎಂದು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳ ಸೊಸೈಟಿಯೊಂದು ಸುತ್ತೊಲೆ ಹೊರಡಿಸಿದೆ. ಈ ಕೆಲಸಗಾರರು ತಮ್ಮ ಬಿಡುವಿನ ವೇಳೆಯಲ್ಲಿ ಪಾರ್ಕ್, ಆಂಫಿಥಿಯೇಟರ್, ಗೆಜೆಬೋಸ್, ರಿಸೆಪ್ಷನ್‌ನಲ್ಲಿರುವ ಸೋಫಾಗಳಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಹೀಗಾಗಿ, ಕೆಲಸಗಾರರು ಇಂತಹ ಯಾವುದೇ ಅಪಾರ್ಟ್‌ಮೆಂಟ್ ಸೌಕರ್ಯಗಳನ್ನು ಬಳಸಬಾರದು ಎಂದು ಆ ಸುತ್ತೊಲೆಯಲ್ಲಿ ತಿಳಿಸಲಾಗಿದೆ.
ಕಟ್ಟಡಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಕಾರ್ಪೆಂಟರ್‌ಗಳು ಮತ್ತು ಪ್ಲಂಬರ್‌ಗಳು ಅಪಾರ್ಟ್‌ಮೆಂಟ್ ರಿಸೆಪ್ಷನ್‌ನಲ್ಲಿರುವ ಸೋಫಾದಲ್ಲಿ ಕುಳಿತುಕೊಳ್ಳುವುದಕ್ಕೂ ರೆಸಿಡೆಂಟ್ ಸೊಸೈಟಿ ತಡೆ ನೀಡಿದೆ.
"ತಮ್ಮ ಶಿಫ್ಟ್‌ಗಾಗಿ ಕಾಯುವ ಸಂದರ್ಭದಲ್ಲಿ, ತಮ್ಮ ಆಹಾರ ಸೇವಿಸುವ ಸಂದರ್ಭದಲ್ಲಿ ಕೆಲಸಗಾರರು ವೇಟಿಂಗ್ ಪ್ರದೇಶವನ್ನು ಬಳಸಬಹುದು. ಅವರಿಗೆ ಕೆಲಸ ನಡುವೆ ವಿಶ್ರಾಂತಿಯಲ್ಲಿ ಇರುತ್ತಾರೆ ಎಂದು ನಮಗೆ ತಿಳಿದಿದೆ. ಆದರೆ, ಕೆಲಸಗಾರರು ಪಾರ್ಕ್, ಆಂಫಿಥಿಯೇಟರ್, ಗೆಜೆಬೋಸ್ ಎಲ್ಲಾ ಕಡೆ ಸುತ್ತಾಡುವುದನ್ನು ನೋಡುವುದು ನಮಗೆ ಕಷ್ಟವಾಗುತ್ತದೆ. ನಮ್ಮ ಸುತ್ತ ಸದಾ ಕೆಲಸಗಾರರು ಸುತ್ತಾಡುತ್ತಿರುವುದು ನಿವಾಸಿಗಳಿಗೆ ಕಷ್ಟವಾಗುತ್ತಿದೆ. ಕಾಮನ್ ಏರಿಯಾಗಳ ಮೇಲೆ ನಿಗಾ ವಹಿಸಲು ಭದ್ರತಾ ಸಿಬ್ಬಂದಿಗೂ ಆಗುವುದಿಲ್ಲ. ಅಡುಗೆಯವರು, ಕಾರ್ಪೆಂಟರ್‌ಗಳು, ಪ್ಲಂಬರ್‌ಗಳು ಕಟ್ಟಡದ ರಿಸೆಪ್ಷನ್‌ನಲ್ಲಿ ಕುಳಿತುಕೊಳ್ಳುವಂತೆ ಇಲ್ಲ. ಬಹುತೇಕರು ಈಗ ಸೋಫಾದಲ್ಲಿ ಕುಳಿತುಕೊಳ್ಳುವುದನ್ನು ನಿಲ್ಲಿಸಿದ್ದಾರೆ" ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.
ಈ ಸುತ್ತೊಲೆಯು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿವಾಸಿಗಳ ಕಲ್ಯಾಣ ಸಂಘ (ಆರ್‌ಡಬ್ಲ್ಯುಎ) ನಿರ್ಧಾರವನ್ನು ಟ್ವಿಟ್ಟರ್ ಬಳಕೆದಾರರು ಖಂಡಿಸಿದ್ದು, "ಶ್ರೀಮಂತ ವರ್ಗದ ದರ್ಪ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅದು ಯಾವ ಸೊಸೈಟಿ, ಅದರ ಹೆಸರು ಬಹಿರಂಗಪಡಿಸಿ. ನಾವು ಆ ಸೊಸೈಟಿಯಲ್ಲಿ ಮನೆ ಖರೀದಿಸುವುದನ್ನು ತಪ್ಪಿಸುತ್ತೇವೆ. ಇಂತಹ ಸಾಮಾಜಿಕ ತಾರತಮ್ಯ ಒಳ್ಳೆಯದಲ್ಲ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಂಬಲ ಸಿಬ್ಬಂದಿಗಳನ್ನು (ಸಪೋರ್ಟ್ ಸ್ಟಾಫ್) ಕಾರ್ಪೊರೇಟ್ ಕಂಪನಿಗಳು ಹೇಗೆ ನೋಡಿಕೊಳ್ಳುತ್ತಿವೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಅಮೆರಿಕದ ಕಂಪನಿಯ ಕೆಫೆಟೇರಿಯಾದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು, ಇತರೆ ಬೆಂಬಲ ಸಿಬ್ಬಂದಿಗಳು ಸಿಇಒ ಜತೆ ಕುಳಿತುಕೊಳ್ಳುವುದು, ಗೌರವಿಸುವುದು, ಗೌರವಯುತವಾಗಿ ಸೇವೆ ಪಡೆಯುವುದನ್ನು ನೋಡಿದ್ದೆ. ಆದರೆ, ನನ್ನ ಈಗಿನ ಕಂಪನಿಯಲ್ಲಿ ಸಿಇಒ ಅಥವಾ ಇತರೆ ಅಧಿಕಾರಿಗಳ ಮುಂದೆ ಕ್ಲೀನರ್‌ಗಳು ದೂರದಲ್ಲಿ ನಿಂತುಕೊಂಡು ಚಹ ಸೇವಿಸುತ್ತಾರೆ. ಇವೆಲ್ಲ ನಮ್ಮ ಸಮಾಜದಲ್ಲಿ ಉಳಿದಿರುವ ಜಾತಿ/ಊಳಿಗಮಾನ್ಯ ಸಮಾಜದ ಒಳಸ್ವರಗಳು" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸೇವಕರು, ಅಡುಗೆಯವರು, ಪ್ಲಂಬರ್‌ಗಳು ಮತ್ತು ಕಾರ್ಪೆಂಟರ್‌ಗಳು ಕಠಿಣ ಪರಿಶ್ರಮಿಗಳು. ಆದರೆ, ಇನ್ನೂ ಅವರೊಂದಿಗೆ ಕುಳಿತುಕೊಳ್ಳಲು ಅಥವಾ ಅವರ ಉಪಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನಿರಾಶದಾಯಕ. ಎಲ್ಲರನ್ನೂ ಸಮಾನತೆ ಮತ್ತು ಗೌರವದಿಂದ ಕಾಣುವ ಸಮಾಜಕ್ಕಾಗಿ ಶ್ರಮಿಸೋಣ" ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.