Bangalore News: ಬೆಂಗಳೂರಲ್ಲಿ ನಿಲ್ಲದ ಡ್ರಗ್ಸ್‌ ಹಾವಳಿ, ಆ್ಯಪ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ವ್ಯಕ್ತಿ ಸೆರೆ-bangalore news drug peddler using app to sell drugs to foreigners arrested in bangalore kerala person arrested mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ನಿಲ್ಲದ ಡ್ರಗ್ಸ್‌ ಹಾವಳಿ, ಆ್ಯಪ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ವ್ಯಕ್ತಿ ಸೆರೆ

Bangalore News: ಬೆಂಗಳೂರಲ್ಲಿ ನಿಲ್ಲದ ಡ್ರಗ್ಸ್‌ ಹಾವಳಿ, ಆ್ಯಪ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ವ್ಯಕ್ತಿ ಸೆರೆ

Bangalore Crime News: ವಿದೇಶಿಗರನ್ನು ಸೆಳೆಯಲು ಆ್ಯಪ್ ಬಳಸಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕೇರಳ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು(Bangalore police) ಬಂಧಿಸಿದ್ದಾರೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರುತ್ತಿದ್ದವರನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರುತ್ತಿದ್ದವರನ್ನು ಬಂಧಿಸಲಾಗಿದೆ.

ಬೆಂಗಳೂರು: ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

32 ವರ್ಷದ ಕೇರಳದ ಶಿವಕೃಷ್ಣ ಹಾಗೂ 28 ವರ್ಷದ ರೋಷನ್ ಬಂಧಿತ ಆರೋಪಿಗಳು. ಇವರಿಬ್ಬರನ್ನೂ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿರುವ ಪೊಲೀಸರು ಇವರಿಂದ ರೂ. 16.50 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಮೈಕೊ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆ್ಯಪ್ ಮೂಲಕ ವಿದೇಶಿ ಪೆಡ್ಲರ್‌ ವೊಬ್ಬನನ್ನು ಸಂಪರ್ಕಿಸುತ್ತಿದ್ದ ಶಿವಕೃಷ್ಣ, ಆನ್‌ಲೈನ್ ಮೂಲಕ ಹಣ ಪಾವತಿಸಿ ಗಾಂಜಾ ಖರೀದಿ ಮಾಡುತ್ತಿದ್ದ. ಆ ಗಾಂಜಾವನ್ನು ಬೆಂಗಳೂರಿಗೆ ತರಿಸಿಕೊಂಡು ಪರಿಚಯಸ್ಥ ಗ್ರಾಹಕರಿಗೆ ಮಾತ್ರ ಮಾರಾಟ ಮಾಡುತ್ತಿದ್ದ. ಈತನಿಂದ ಒಟ್ಟು 5 ಕೆ.ಜಿ 180 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ರೋಷನ್, ಗಾಂಜಾವನ್ನು ಯಾರಿಗೂ ಅನುಮಾನ ಬರಬಾರದು ಎಂದು ಗುಜರಿ ಅಂಗಡಿಯೊಂದರಲ್ಲಿ ಸಂಗ್ರಹಿಸಿಕೊಳ್ಳುತ್ತಿದ್ದ. ಈತನಿಂದ 200 ಕೆ.ಜಿ ಗಾಂಜಾ, 2 ಮೊಬೈಲ್ ಹಾಗೂ ಬೈಕ್ ವೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಕ್ರಮವಾಗಿ ನೆಲೆಸಿದ್ದ 10 ವಿದೇಶಿಯರ ಬಂಧನ

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಮಾಹಿತಿಯನ್ನು ಆಧರಿಸಿ 10 ವಿದೇಶಿಯರ ನಿವಾಸಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

ಹೆಣ್ಣೂರು, ಕೆ.ಜಿ.ಹಳ್ಳಿ ,ಸೋಲದೇವನಹಳ್ಳಿ, ರಾಮಮೂರ್ತಿನಗರ, ಕೆ.ಆರ್. ಪುರ ಮತ್ತು ಆರ್.ಟಿ. ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿದೇಶಿಯರು ಅಕ್ರಮವಾಗಿ ವಾಸವಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ನೈಜೀರಿಯಾದ ಕೋವಾಸೆ ಎಂಬಾತನ ಮನೆಯಲ್ಲಿ ರೂ. 22 ಲಕ್ಷ ಮೌಲ್ಯದ 105 ಗ್ರಾಂ ಕೊಕೇನ್, 110 ಗ್ರಾಂ ಎಂಡಿಎಂಎ ಮಾತ್ರೆಗಳು ಸಿಕ್ಕಿವೆ. ಈತ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದು, ಮಾದಕ ವಸ್ತುಗಳ ಮಾರಾಟದಿಂದ ಹಣ ಸಂಪಾದಿಸುತ್ತಿದ್ದ. ಡ್ರಗ್ಸ್ ಜೊತೆಗೆ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮವಾಗಿ ನೆಲೆಸಿದ್ದ 10 ವಿದೇಶಿಯರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಬಹುತೇಕ ಎಲ್ಲ ವಿದೇಶಿಯರು ಅಕ್ರಮವಾಗಿ ವಾಸವಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಅಪ್ಪ ಮಕ್ಕಳು

ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಶ್ರೀರಾಮ್ ಹಾಗೂ ಆತನ ಮಗ ಕಲ್ಯಾಣ್‌ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಅವರಿಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿರುವ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಾಲಯದ ಅನುಮತಿ ಪಡೆದು ಶ್ರೀರಾಮ್ ಮನೆ ಮೇಲೆ ದಾಳಿ ನಡೆಸಲಾಗಿದೆ. 100ಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿರುವ ಚೆಕ್‌ಗಳು, ವಾಹನಗಳ ನೋಂದಣಿ ಪ್ರಮಾಣ ಪತ್ರಗಳು, ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಶ್ಯಾಮಣ್ಣ ಗಾರ್ಡನ್‌ ನಿವಾಸಿ ಶ್ರೀರಾಮ್, ಹಲವು ವರ್ಷಗಳಿಂದ ಬಡ್ಡಿ ವ್ಯವಹಾರ ಮಾಡುತ್ತಿದ್ದ. ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಆತನ ಮಗ ಕಲ್ಯಾಣ್‌ಕುಮಾರ್ ಅಪ್ಪನ ಬಡ್ಡಿ ದಂಧೆಗೆ ಸಾಥ್ ನೀಡುತ್ತಿದ್ದ. ಜನರಿಗೆ ಸಾಲ ಕೊಡುತ್ತಿದ್ದ ಇವರು, ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದರು. ಈ ಸಂಬಂಧ ಕೆಲವು ಅಮಾಯಕರು ಸಹಕಾರ ಇಲಾಖೆಗೆ ದೂರು ನೀಡಿದ್ದರು ಎಂದು ಅವರು ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಸಹಕಾರ ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಅಪ್ಪ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಬ್ಬರಿಗೂ ನೋಟಿಸ್ ನೀಡಲಾಗಿದೆ. ಆದರೆ ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)