Bangalore Crime: ಕೇರಳದಿಂದ ಬೆಂಗಳೂರಿಗೆ ಅಂಚೆಯಲ್ಲಿ ಬರುತ್ತಿತ್ತು ಡ್ರಗ್ಸ್, ಮಾರಾಟ ಜಾಲ ಬಯಲಿಗೆಳೆದ ಪೊಲೀಸರು
ಬೆಂಗಳೂರಿನಲ್ಲಿ ಡ್ರಗ್ಸ್ ವಹಿವಾಟಿಗೆ ವಿಭಿನ್ನ ಮಾರ್ಗ ಬಳಸಲಾಗುತ್ತಿದೆ. ಕೇರಳದಿಂದ ಅಂಚೆ ಮೂಲಕ ತರಿಸಿ ಮಾರಾಟ ಮಾಡುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ಧಾರೆ.(ವರದಿ: ಎಚ್ ಮಾರುತಿ,ಬೆಂಗಳೂರು)
ಬೆಂಗಳೂರು: ಅಂಚೆ ಮೂಲಕ ಡ್ರಗ್ಸ್ ಪಾರ್ಸೆಲ್ ತರಿಸಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಸಿಸಿಬಿ ಪೊಲೀಸರು ಈ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿ ರಿತಿಕ್‌ರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ರಿತಿಕ್ ರಾಜ್ ಕೆಲವು ತಿಂಗಳಿನಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿಕೊಂಡಿದ್ದ ಮಾಹಿತಿ ಲಭ್ಯವಾಗಿದೆ. ಈ ಜಾಲದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹೊರ ರಾಜ್ಯಗಳಿಂದ ಅಂಚೆ ಮೂಲಕ ಡ್ರಗ್ಸ್ ಪಾರ್ಸೆಲ್ ತರಿಸುತ್ತಿದ್ದ ಖಚಿತ ಮಾಹಿತಿ ಲಭ್ಯವಾಗಿತ್ತು. ನಂತರ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಉಡುಗೊರೆ ನೆಪದಲ್ಲಿ ಅಂಚೆ ಮೂಲಕ ಡ್ರಗ್ಸ್ ಪಾರ್ಸೆಲ್ ಬಂದಿತ್ತು. ಅದನ್ನು ಪಡೆಯಲು ಬಂದಿದ್ದಾಗಲೇ ರಿತಿಕ್ ರಾಜ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ಪಾರ್ಸಲ್ ನಲ್ಲಿ ರೂ. 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಅನ್ನು ಕಳುಹಿಸಲಾಗಿತ್ತು. ಕೇರಳದ ವ್ಯಕ್ತಿಯೊಬ್ಬ ಪಾರ್ಸೆಲ್ ಕಳುಹಿಸುತ್ತಿದ್ದ. ಅದನ್ನು ಪಡೆದು ಮಧ್ಯವರ್ತಿಗಳ ಮೂಲಕ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದೆ ಎಂದು ಆರೋಪಿ ರಿತಿಕ್‌ರಾಜ್ ಹೇಳಿಕೆ ನೀಡಿದ್ದಾನೆ.
ಈ ಮಾಹಿತಿ ಆಧರಿಸಿ ಬೆಂಗಳೂರು ಪೊಲೀಸರು ತನಿಖೆ ಇನ್ನಷ್ಟು ಚುರುಕುಗೊಳಿಸಿದ್ದಾರೆ. ಪಾರ್ಸೆಲ್ ಕಳುಹಿಸುತ್ತಿದ್ದ ಕೇರಳದ ವ್ಯಕ್ತಿಯನ್ನು ಪತ್ತೆ ಮಾಡಬೇಕಿದೆ. ಇದಕ್ಕಾಗಿ ಪೊಲೀಸ್ ತಂಡ ಈಗಾಗಲ ಕೇರಳಕ್ಕೆ ತೆರಳಿದೆ ಎಂದು ಪೊಲೀಸರು ಹೇಳಿದ್ದಾರೆ.
ರೂ. 35 ಕೋಟಿ ಬೆಲೆಯ ಬಿಡಿಎ ಭೂಮಿ ವಶ
ಬೆಂಗಳೂರಿನ ಹೇರೋಹಳ್ಳಿಯಲ್ಲಿ ಬಿಡಿಎ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಶನಿವಾರ ತೆರವುಗೊಳಿಸಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಹೇರೋಹಳ್ಳಿ ಗ್ರಾಮದ ಸರ್ವೆ ನಂಬರ್ 64ರಲ್ಲಿನ 32.45 ಗುಂಟೆ ಜಮೀನಿನಲ್ಲಿ ಶೆಡ್‌ಗಳು ಮತ್ತು ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಇದೀಗ ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಈ ಭೂಮಿಯ ಬೆಲೆ ಸುಮಾರು ರೂಪಾಯಿ 35 ಕೋಟಿ ಎಂದು ತಿಳಿದು ಬಂದಿದೆ.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 7ನೇ ಬ್ಲಾಕ್‌ನಲ್ಲಿ ಈ ಒತ್ತುವರಿಯನ್ನು ತೆರವು ಮಾಡಲಾಯಿತು. ಇಂತಹ ಅಕ್ರಮದ ಮಾಹಿತಿ ಇದ್ದರೆ ತಿಳಿಸಬಹುದು. ಮಾಹಿತಿ ಆಧರಿಸಿ ಅಕ್ರಮವಾಗಿ ಪಡೆದಿರುವ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರವು ತಿಳಿಸಿದೆ.
ಕಾರ್ಮಿಕರ ಮೇಲೆ ಹಲ್ಲೆ, ಬಾಲಕ ಸೇರಿ ನಾಲ್ವರ ಬಂಧನ:
ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದ ಆರೋಪದಡಿ ಬಾಲಕ ಸೇರಿ ನಾಲ್ವರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಲಿಗೆಗೆ ಯತ್ನ ಹಾಗೂ ಹಲ್ಲೆ ಸಂಬಂಧ ಕಾರ್ಮಿಕ ಭೀಮರಾಯ ದೂರು ಸಲ್ಲಿಸಿದ್ದರು. ಆರೋಪಿಗಳಾದ ಹೊಸಕೆರೆಹಳ್ಳಿಯ ಮುತ್ತುರಾಜು (23), ಮಹೇಶ್ (18) ಹಾಗೂ ಹರೀಶ್ (19) ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೊಸಕೆರೆಹಳ್ಳಿಯ ಸಪ್ತಗಿರಿ ಬಡಾವಣೆಯ ನಿವಾಸಿ ಭೀಮರಾಯ, ಫೆ.1ರಂದು ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಆಗ ಆಟೊದಲ್ಲಿ ಬಂದಿದ್ದ ಆರೋಪಿಗಳು, ಭೀಮರಾಯ ಅವರನ್ನು ಅಡ್ಡಗಟ್ಟಿ ಹಣ ನೀಡುವಂತೆ ಪೀಡಿಸಿದ್ದರು. ತನ್ನ ಬಳಿ ಹಣವಿಲ್ಲವೆಂದು ಭೀಮರಾಯ ಹೇಳಿದ್ದರು.
ಹಣ ನೀಡದಿದ್ದಕ್ಕೆ ಆರೋಪಿಗಳು, ಹಾಕಿ ಸ್ಟಿಕ್‌ನಿಂದ ಭೀಮರಾಯ ಅವರ ತಲೆ, ಕೈಗೆ ಹೊಡೆದು ಪರಾರಿಯಾಗಿದ್ದರು. ಗಾಯಗೊಂಡಿದ್ದ ದೂರುದಾರ ಭೀಮರಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)