ಸಂಚಾರ ನಿಮಯ ಉಲ್ಲಂಘಿಸಿದ್ರೆ ತಪ್ಪಿಸಿಕೊಳ್ಳುವ ಮಾತೇ ಇಲ್ಲ; ಎಐ ಕ್ಯಾಮೆರಾಗಳಿಗೆ ಬೆಂಗಳೂರು ಸಂಚಾರಿ ಪೊಲೀಸರು ಅಪ್‌ಗ್ರೇಡ್
ಸಂಚಾರ ನಿಯಮಗಳನ್ನು ಹತ್ತಾರು ವಾಹನಗಳು ಉಲ್ಲಂಘಿಸುತ್ತವೆ. ಆದರೆ ಕೆಲವೇ ಕೆಲವು ಮಾತ್ರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗುತ್ತಿದ್ದವು. ಇದಕ್ಕೆ ಪರಿಹಾರವಾಗಿ ಬೆಂಗಳೂರು ಸಂಚಾರ ಪೊಲೀಸರು ಎಐ ಕ್ಯಾಮೆರಾಗಳಿಗೆ ಅಪ್‌ಗ್ರೇಡ್ ಆಗಿದ್ದಾರೆ. ಇದರಿಂದ ಸಂಚಾರ ನಿಯಮ ಎಷ್ಟೇ ಮಂದಿ ಉಲ್ಲಂಘಿಸಿದರೂ ಕ್ಯಾಮೆರಾದಲ್ಲಿ ಸೆರೆಯಾಗುತ್ತೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ಸಂಚಾರ ನಿಯಮಗಳ ಉಲ್ಲಂಘನೆಯ (Traffic Rules Violations in Bangalore) ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸಿಗ್ನಲ್ ಜಂಪ್ (Signal Jump) ಮಾಡುವುದು, ನೋ ಪಾರ್ಕಿಂಗ್ (No Parking) ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಏಕ ಮುಖ ರಸ್ತೆಗಳಲ್ಲಿ(Driving in One way Road) ವಿರುದ್ಧವಾಗಿ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನಗಳ ಚಾಲನೆ, ನಂಬರ್ ಪ್ಲೇಟ್ ಮರೆಮಾಚಿ ಸಂಚರಿಸುವುದು, ವೀಲ್ಹೀಂಗ್ ಮಾಡುವುದು ಹೀಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಕೆಲವೊಮ್ಮೆ ಎಲ್ಲಾ ವಾಹನ ಸವಾರರ ಸಂಚಾರ ನಿಯಮ ಉಲ್ಲಂಘನೆಗಳು ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗುವುದಿಲ್ಲ. ಇದಕ್ಕೆ ಪರಿಹಾರ ಎಂಬಂತೆ ಬೆಂಗಳೂರು ಸಂಚಾರ ಪೊಲೀಸರು ಸಿಸಿ ಕ್ಯಾಮೆರಾಗಳನ್ನು ಎಐಗೆ ಅಪ್‌ಗ್ರೇಡ್ ಮಾಡುತ್ತಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಡಿಯಲ್ಲಿ ಕೃತಕ ಬುದ್ದಿಮತ್ತೆ (ಎಐ) ಕ್ಯಾಮೆರಾಗಳ ಮೊರೆ ಹೋಗಿದ್ದಾರೆ. ಈ ಕ್ಯಾಮೆರಾಗಳು ಟ್ರಾಫಿಕ್ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತವೆ. ಒಂದೇ ಒಂದು ವಾಹನವೂ ಸಂಚಾರ ನಿಯಮ ಉಲ್ಲಂಘನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಬೆಂಗಳೂರು ಸಂಚಾರಿ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಪ್ರವೇಶ ಇಲ್ಲದ ವಲಯಗಳಲ್ಲಿ ವಾಹನ ಚಲಾಯಿಸುವುದು, ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆಯಂತೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸುಲಭವಾಗಿ ಪತ್ತೆಹಚ್ಚಲಾಗುತ್ತಿದೆ. 2022 ರಲ್ಲಿ 4.99 ಲಕ್ಷ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದವು. ಆದರೆ 2023ರ ಅವಧಿಯಲ್ಲಿ ಈ ಪ್ರಕರಣಗಳ ಸಂಖ್ಯೆ 1.44 ಲಕ್ಷಕ್ಕೆ ಇಳಿಕೆಯಾಗಿದೆ. ಅಂದರೆ ಕ್ಯಾಮೆರಾ ಅಳವಡಿಕೆಯಂತ ತಂತ್ರಜ್ಞಾನದಿಂದಾಗಿ ವರ್ಷದಿಂದ ವರ್ಷಕ್ಕೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಸಂಖ್ಯೆ ಇಳಿಕೆಯಾಗುತ್ತಿದೆ. ಇನ್ನ 2024ರಲ್ಲಿ ಈವರೆಗೆ ಕೇವಲ 58,000 ಪ್ರಕರಣಗಳು ಮಾತ್ರ ದಾಖಲಾಗಿವೆ.
2022ರಲ್ಲಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲಾಯಿತು. ಅಂದಿನಿಂದ ಹೆಚ್ಚು ಪ್ರಕರಣಗಳನ್ನು ಪತ್ತೆಮಾಡಲು ಸಾಧ್ಯವಾಗಿದೆ. ಜೊತೆಗೆ ಗ್ರಾಹಕರಿಗೆ ಈ ಸಂಬಂಧ ನೋಟಿಸ್ ಕಳುಹಿಸುವ ಹಿನ್ನೆಲೆಯಲ್ಲಿ ಸಂಚಾರ ಉಲ್ಲಂಘನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಲೇ ಇವೆ. ಮೇಲಾಗಿ ಸಿಗ್ನಲ್ ಜಂಪಿಂಗ್ ಮತ್ತು ಸುರಕ್ಷತಾ ಬೆಲ್ಟ್‌ಗಳನ್ನು ಬಳಸದೆ ವಾಹನ ಚಾಲನೆ ಮಾಡುವ ಘಟನೆಗಳು ಗಮನಾರ್ಹವಾಗಿ ಹೆಚ್ಚಾಗಿದ್ದರೂ ಇಂತಹ ಪ್ರಕರಣಗಳನ್ನು ದಾಖಲಿಸಲಾಗಿಲ್ಲ.
ಇದೀಗ ಒಂದೇ ಸಲ 10 ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ಪತ್ತೆಹಚ್ಚಲು ಎಐ ಕ್ಯಾಮೆರಾಗಳನ್ನು ನವೀಕರಿಸುವ ಮುಂದಾಗಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂಎನ್ ಅನುಚೇತ್ ಅವರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಇರುವ ಕ್ಯಾಮೆರಾಗಳಲ್ಲಿ 10ಕ್ಕೆ 7 ಪ್ರಕರಣಗಳನ್ನು ಪತ್ತೆ ಹಚ್ಚಬಹುದು. ಆದರೆ 10ಕ್ಕೆ 10 ಪ್ರಕರಣಗಳನ್ನು ಪತ್ತೆ ಹಚ್ಚುವಂತಹ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಭೌತಿಕವಾಗಿ ವಾಹನಗಳನ್ನು ತಡೆದು ತಪಾಸಣೆ ಮಾಡುವುದು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ಅಗತ್ಯವನ್ನು ಅಧಿಕಾರಿಗಳು ತಿಳಿಸಿದ್ದಾರೆ. ಸುಧಾರಿತ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಅನುಚೇತ್ ಅವರು ತಿಳಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)