ಕನ್ನಡ ಸುದ್ದಿ  /  ಕರ್ನಾಟಕ  /  ಮತ ಕೇಂದ್ರಗಳಲ್ಲಿ ವಿಶೇಷಚೇತನರು, ಕಿವುಡ, ಮೂಗರು, ಅಂಧರಿಗೂ ಉಂಟು ಸೌಲಭ್ಯ

ಮತ ಕೇಂದ್ರಗಳಲ್ಲಿ ವಿಶೇಷಚೇತನರು, ಕಿವುಡ, ಮೂಗರು, ಅಂಧರಿಗೂ ಉಂಟು ಸೌಲಭ್ಯ

ಮತದಾನಕ್ಕೆ ಎಲ್ಲ ರೀತಿಯ ಜನ ಬರುವುದರಿಂದ ಅವರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಚುನಾವಣಾ ಆಯೋಗ ಮಾಡಿದೆ. ಅಂಧರು, ಕಿವುಡರು, ಮೂಗರು, ವಿಶೇಷ ಚೇತನರಿಗೂ ಸೌಲಭ್ಯಗಳನ್ನು ಕರ್ನಾಟಕದ ಮೊದಲ ಹಂತದಲ್ಲಿ ಮತದಾನಕ್ಕೆ ಹೋಗುತ್ತಿರುವ ಮತಗಟ್ಟೆಗಳಲ್ಲಿ ಒದಗಿಸಲಾಗುತ್ತದೆ.

ಲೋಕಸಭೆ ಚುನಾವಣೆಗೆ ಅಣಿಯಾಗಿರುವ ಕರ್ನಾಟಕದ ವಿಶೇಷ ಮತಗಟ್ಟೆ.
ಲೋಕಸಭೆ ಚುನಾವಣೆಗೆ ಅಣಿಯಾಗಿರುವ ಕರ್ನಾಟಕದ ವಿಶೇಷ ಮತಗಟ್ಟೆ.

ಬೆಂಗಳೂರು: ಚುನಾವಣಾ ಆಯೋಗವು ಸಾಮಾನ್ಯ ಮತದಾರರ ಜತೆಯಲ್ಲಿ ವಿಶೇಷ ಮತದಾರರಿಗೂ ಹಲವಾರು ಸೌಲಭ್ಯ ಕಲ್ಪಿಸಿದೆ. ವಯಸ್ಸಾದವರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡುವ ವ್ಯವಸ್ಥೆ ಮಾಡಿದ್ದ ಚುನಾವಣೆ ಆಯೋಗವು ಇನ್ನೂ ಹಲವು ಸುಧಾರಣೆಗಳನ್ನು ಮಾಡಿದೆ. ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ರ‍್ಯಾಂಪ್ ವ್ಯವಸ್ಥೆ, ವೀಲ್ ಚೇರ್, ಸಹಾಯಕರ ನಿಯೋಜನೆ, ಅಂಧ ಮತದಾರರಿಗೆ ಬೃೈಲ್ ಲಿಪಿಯಲ್ಲಿ ಸಿದ್ದಪಡಿಸಿರುವ ಮಾದರಿ ಮತಪತ್ರದ ಪ್ರದರ್ಶನ ಹಾಗೂ ಅದರ ವಿವರಣೆಯ ಆಡಿಯೋ ಮತಗಟ್ಟೆಗಳಲ್ಲಿ ಲಭ್ಯವಿರಲಿದೆ.

ಟ್ರೆಂಡಿಂಗ್​ ಸುದ್ದಿ

ಭಾಗಶಃ ಅಂಧತ್ವ ಹೊಂದಿರುವ ಮತದಾರರಿಗೆ ಮ್ಯಾಗ್ನಿಫೈಡ್ ಲೆನ್ಸ್ ಬಳಸಿ ಮತದಾನ ಮಾಡುವ ಸೌಲಭ್ಯ ದೊರಕುತ್ತದೆ. ಕಿವುಡ ಮತ್ತು ಮೂಗ ಮತದಾರರಿಗೆ ಸಂಜ್ಞೆ ಭಾಷೆ ಬಳಸಿ ಮತದಾನ ಮಾಡುವ ವಿಧಾನದ ಬಗ್ಗೆ ಸಹಾಯಕರು ಲಭ್ಯವಿರುತ್ತಾರೆ.

ವಿಶೇಷಚೇತನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಎಲ್ಲೆಡೆ ವಿಶೇಷಚೇತನ ಸ್ನೇಹಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ವೀಲ್ ಚೇರ್, ಸನ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರಗಳನ್ನು ಬರೆದು ಮತಗಟ್ಟೆಯನ್ನು ಅಲಂಕರಿಸಲಾಗಿದೆ.

ಆಕರ್ಷಕ ಮತಗಟ್ಟೆಗಳು

ಮತದಾನದ ದಿನದಂದ ಮತದಾರರಿಗೆ ಹಬ್ಬದ ವಾತಾವರಣ ರೀತಿ ಸ್ವಾಗತಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಯುವ, ಸಖಿ, ವಿಶೇಷಚೇತನ, ಸಂಪ್ರಾದಯಿಕ ಹಾಗೂ ವಿಷಯದಾರಿತ ಮತಗಟ್ಟೆಗಳು ವಿವಿಧ ರೀತಿಯಲ್ಲಿ ಮತದಾರರ ಕೈ ಬೀಸಿ ಕರೆಯಲಿವೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ವಿಷಯಾಧಾರಿತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಯನ್ನು ತಿಳಿಸುವ ಪ್ರದರ್ಶಿಕೆಗಳ ಪ್ರದರ್ಶನ ಹಾಗೂ ಮಾಹಿತಿಗಳನ್ನು ಗೋಡೆ ಬರಹಗಳ ಮೂಲಕ ಆಕರ್ಷಿಣೀಯವಾಗಿ ಚಿತ್ರದ ಮೂಲಕ ಮೂಡಿಸಿ ಮತದಾರರ ಮನಸೂರೆಗೊಳ್ಳುವಂತೆ ನಿರ್ಮಿಸಲಾಗಿದೆ.

ಸಖಿಯರಿಗೂ ಗೌರವ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳನ್ನು ವಿವಿಧ ಬಣ್ಣ ಹಾಗೂ ಚಿತ್ತಾಕರ್ಷಕ ಗೋಡೆ ಬರಹಗಳ ಮೂಲಕ ಮಹಿಳೆಯ ಸಾಮರ್ಥ್ಯ, ಸಬಲೀಕರಣ ಮತ್ತು ಮತದಾನದ ಪ್ರಾಮುಖ್ಯತೆಗಳನ್ನು ತಿಳಿಸುತ್ತಾ ಮತದಾನ ಜಾಗೃತಿ ಸಂದೇಶಗಳನ್ನು ಬಿತ್ತರಿಸಲು ವಿಶೇಷವಾಗಿ ಮತಗಟ್ಟೆ ನಿರ್ಮಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಶೇ.50 ಕ್ಕಿಂತ ಹೆಚ್ಚಿರುವುದರಿಂದ ಈ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಮತಗಟ್ಟೆ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಮಹಿಳೆಯರಾಗಿರುವುದು ವಿಶೇಷ.

ಗಿರಿಜನರಿಗೆ ಸ್ವಾಗತ

ಗಿರಿಜನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಸ್ಥಾಪಿಸಿ ಈ ಮತಗಟ್ಟೆಗಳನ್ನು ಸ್ಥಳೀಯರು ಬಳಕೆ ಮಾಡುವ ಸಾಮಗ್ರಿಗಳು ಹಾಗೂ ಪ್ರಾಕೃತಿಕವಾಗಿ ದೊರೆಯುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಮತಗಟ್ಟೆಗಳನ್ನು ಸ್ಥಳೀಯರ ಸಂಪ್ರಾದಾಯ ಹಾಗೂ ಆಚರಣೆಗಳನ್ನು ಪ್ರತಿಬಿಂಬಿಸುವ ಪ್ರತಿಕೃತಿಗಳೊಂದಿಗೆ ಚಿತ್ತಾಕರ್ಷಕವಾಗಿ ಮನಸೆಳೆಯುವಂತೆ ಸಿಂಗರಿಸಿ, ಮತದಾರರನ್ನು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಮತದಾರರನ್ನು ಕೈಬೀಸಿ ಕರೆಯುತ್ತಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point