Bangalore News: ಮಳೆ ತಾರದ ವಿದೇಶಿ ಮರ ಬೆಂಗಳೂರಲ್ಲಿ ಬೆಳೆಸುವುದಕ್ಕೆ ವಿರೋಧ, ದೇಸಿ ಮರಕ್ಕೆ ಒತ್ತು ನೀಡಲು ಸಲಹೆ
ಬೆಂಗಳೂರಿನಲ್ಲಿ ಅಲಂಕಾರಕ್ಕಾಗಿ ವಿದೇಶಿ ಮರಗಳನ್ನು ಬೆಳೆಸುವುದನ್ನು ಬಿಡಲು ಪರಿಸರವಾದಿಗಳ ಆಗ್ರಹಿಸುತ್ತಿದ್ದಾರೆ. ದೇಸೀಯ ಮೂಲದ ಮರಗಿಡಗಳನ್ನು ನೆಡಲು ಮನವಿ ಮಾಡಿದ್ದಾರೆ. ಅವರು ನೀಡಿರುವ ವಿದೇಶಿ ಮರಗಳು ಯಾವುವು ದೇಸೀ ಮರಗಳಾವುವು? ಇಲ್ಲಿದೆ ವಿವರ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಇನ್ನೊಂದು ತಿಂಗಳಲ್ಲಿ ಸಸಿ ನೆಡುವ ಆಂದೋಲನ ಆರಂಭವಾಗಲಿದೆ. ಒಂದು ಕಡೆ ಮರಗಳನ್ನು ನೆಡುತ್ತಾ ಸಾಧ್ಯವಾದಷ್ಟೂ ಅವುಗಳನ್ನು ಉಳಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಅಭಿವೃದ್ಧಿ ಹೆಸರಿನಲ್ಲಿ ಹತ್ತಾರು ವಷಗಳ ಕಾಲ ಬೆಳೆದು ನಿಂತ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಲಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಇತ್ತೀಚಿನ ದಶಕಗಳಲ್ಲಿ ನೆಡುತ್ತಾ ಬರಲಾಗುತ್ತಿರುವ ಸಸಿಗಳೆಲ್ಲಾ ವಿದೇಶಿ ಮೂಲದವಾಗಿದ್ದು, ನೆಲದ ಸೊಗಡಿಗೆ ಹೊಂದಿಕೆಯಾಗುತ್ತಿಲ್ಲ. ಈ ವಿದೇಶಿ ಮರಗಳನ್ನು ನೆಡದಂತೆ ಪರಿಸರವಾದಿಗಳು ವಿರೋಧಿಸುತ್ತಾ ಬರುತ್ತಿದ್ದಾರೆ.
ವಿರೋಧ ಯಾಕೆ
ಆದರೆ ವೇಗವಾಗಿ ಬೆಳೆಯುವ ನೋಡಲು ಆಕರ್ಷಕವಾಗಿರುವ ಈ ಮರಗಳನ್ನು ಸರಕಾರ ನೆಡುವುದನ್ನು ಬಿಟ್ಟಿಲ್ಲ. ಬ್ರಿಟೀಷರು ಇಲ್ಲಿ ಆಡಳಿತ ನಡೆಸುತ್ತಿದ್ದಾಗ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಖಾಲಿ ಪ್ರದೇಶ ಉಳಿದುಕೊಂಡಿದ್ದನ್ನು ನೋಡಿದ ಅವರು ಮರಗಳನ್ನು ಬೆಳೆಸಲು ನಿರ್ಧರಿಸಿ ತಮ್ಮದೇ ದೇಶದ ಸಸಿಗಳನ್ನು ತರಿಸಿ ನೆಡುತ್ತಾ ಬಂದರು. ಅದೇ ಸಂಪ್ರದಾಯ ಈಗಲೂ ಮುಂದುವರೆದಿದ್ದು, ಅಮೆರಿಕ, ಬ್ರೆಜಿಲ್, ಮೆಕ್ಸಿಕೊ ಮೊದಲಾದ ದೇಶಗಳ ಗಿಡಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ಅಲಂಕಾರಕ್ಕಾಗಿ ಬೆಳೆಸುವ ಕೊನಾಕಾರ್ಪಸ್ ಸಸ್ಯವು ಚಳಿಗಾಲದಲ್ಲಿ ಹೂಗಳನ್ನು ಬಿಡುತ್ತದೆ. ನೋಡಲು ಆಕರ್ಷಕವಾಗಿದ್ದರೂ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಗುಜರಾತ್ ಸಕಾರ ನಿಷೇಧಿಸಿದೆ. ಆದರೆ ಈ ಮರಗಳನ್ನು ಬೆಂಗಳೂರಿನಲ್ಲಿ ವಿಫುಲವಾಗಿ ನೋಡಬಹುದಾಗಿದೆ. ಯಲಹಂಕ ಸೇರಿದಂತೆ ನಗರದ ಅನೇಕ ಭಾಗಗಳಲ್ಲಿ ಈ ಮರಗಳನ್ನು ಬಿಬಿಎಂಪಿ ನೆಡುತ್ತಿದೆ. ಈ ಮರಗಳು ಧೀರ್ಘ ಕಾಲ ಉಳಿದುಕೊಳ್ಳುವುದರಿಂದ ನೆಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಪರಿಸರದ ಮೇಲೆ ಪರಿಣಾಮ
ಮನುಷ್ಯರು ಮತ್ತು ಪ್ರಾಣಿಗಳ ಆರೋಗ್ಯವನ್ನು ಒತ್ತೆಯಿಟ್ಟು ಇಂತಹ ಸಸಿಗಳನ್ನು ಬೆಳೆಸುವ ಅಗತ್ಯವಾದರೂ ಏನು ಎಂದು ಪರಿಸರವಾದಿಗಳು ಪ್ರಶ್ನಿಸುತ್ತಾರೆ. ಗುಜರಾತ್ ಮತ್ತು ಇತರ ರಾಜ್ಯಗಳ ವಿಜ್ಞಾನಿಗಳು ನಡೆಸಿರುವ ಸಂಶೋಧನೆಗಳ ಪ್ರಕಾರ ಈ ಮರಗಳಿಂದ ಕೆಮ್ಮು, ಶೀತ ಮತ್ತು ಅಸ್ತಮಾ ಉಂಟಾಗುತ್ತದೆ ಎಂದು ಕಂಡುಕೊಂಡಿದ್ದಾರೆ.
ಈ ಮರಗಳನ್ನು ಬೆಳಸುವುದರಿಂದ ಪರಿಸರದ ಮೇಲೆ ಅಸಮತೋಲನ ಉಂಟಾಗುತ್ತದೆ. ಇಂತಹ ಮರಗಳನ್ನು ಮರುಭೂಮಿಯಲ್ಲಿ ಕಾಣಬಹುದಾಗಿದೆ. ಈ ಮರಗಳು ಮಳೆಯನ್ನು ತರುವುದಿಲ್ಲ. ನಾಲ್ಕು ವರ್ಷಗಳ ನಂತರ ನೋಡಲು ಕುರೂಪಿಯಾಗಿ ಕಾಣಿಸುತ್ತವೆ ಎನ್ನುತ್ತಾರೆ. ವಿದೇಶಿ ಮರಗಳ ಬೇರುಗಳು ಭೂಮಿಯ ಆಳಕ್ಕೆ ಇಳಿಯುವುದಿಲ್ಲ.ಹಾಗಾಗಿ ಬಿರುಗಾಳಿ ಅಥವಾ ಭಾರಿ ಮಳೆ ಬಂದಾಗ ಸುಲಭವಾಗಿ ಬೇರು ಸಮೇತ ಧರೆಗುರುಳುತ್ತವೆ.
ಗುಜರಾತ್ ತೀರ್ಮಾನವೇನು
ಈ ವರ್ಷದ ಜನವರಿಯಿಂದ ಗುಜರಾತ್ ಸರಕಾರ ಕೊನಾಕಾರ್ಪಸ್ ಸಸಿಗಳನ್ನು ನೆಡುವುದನ್ನು ಸ್ಥಗಿತಗೊಳಿಸಿದೆ. ಇಂತಹ ವಿಲಕ್ಷಣ ಮರಗಳನ್ನು ಬೆಳೆಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಮಾನವ, ಪ್ರಾಣಿ, ಪಕ್ಷಿ ಗಳ ಸಂಕುಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮರಗಳನ್ನು ವೈಜ್ಞಾನಿಕವಾಗಿ ಬೆಳೆಸುವ ಅಗತ್ಯವನ್ನು ಬಿಬಿಎಂಪಿ ಮನಗಾಣಬೇಕು. ವಾಣಿಜ್ಯ ಪ್ರದೇಶಗಳಲ್ಲಿ ಬೇರೆ ರೀತಿಯ ಮರಗಳನ್ನು ಬೆಳೆಸಿದರೆ ವಾಸದ ಪ್ರದೇಶಗಳಲ್ಲಿಯೇ ಬೇರೆ ರೀತಿಯ ಮರಗಳನ್ನು ಬೆಳಸಬೇಕು. ದೇವಸ್ಥಾನಗಳಿರುವ ಸುತ್ತಮುತ್ತ ಸಾಂಪ್ರದಾಯಿಕ ಮತ್ತು ದೈವಿಕ ಮಹತ್ವವುಳ್ಳ ಮರಗಳನ್ನು ಬೆಳಸುವಂತೆ ಸಲಹೆ ಮಾಡುತ್ತಾರೆ. ಆದರೆ ಪಾಲಿಕೆ ಬಳಿ ಇಂತಹ ಯೋಜನೆಗಳಿಲ್ಲ. ಬೆಂಗಳೂರು ಸಮುದ್ರ ಮಟ್ಟಕ್ಕಿಂತ 3000 ಅಡಿಗಳಷ್ಟು ಎತ್ತದಲ್ಲಿದ್ದು ಪಶ್ಚಿಮ ಘಟ್ಟಗಳಲ್ಲಿ ಬೆಳೆಸುವ ಮರಗಳನ್ನು ಬೆಳೆಸಲು ಅವಕಾಶವಿದೆ.
ಇದರ ಪ್ರಯತ್ನವಾಗಿ ಲಾಲ್ ಭಾಗ್ ನಲ್ಲಿ ಕಳೆದ ವರ್ಷ ಪಶ್ಚಿಮ ಘಟ್ಟದಲ್ಲಿ ಬೆಳೆಸುವ ಸಸಿಗಳನ್ನು ನೆಡಲಾಗಿದೆ. ಬೆಂಗಳೂರಿನ ಹವಾಗುಣ, ಉಷ್ಣಾಂಶ, ಮಳೆ, ನೀರು, ತೇವಾಂಶ ನೋಡಿದರೆ ಇಲ್ಲಿ ಯಾವುದೇ ರೀತಿಯ ಮರಗಳನ್ನು ಬೆಳೆಸಬಹುದಾಗಿದೆ. ಶೇ.80ರಷ್ಟು ಮರಗಳು ಉಳಿದುಕೊಳ್ಳುವ ಹವಾಮಾನ ಇದೆ ಎಂದು ಹೇಳುತ್ತಾರೆ.
ನಮ್ಮ ಗಿಡಗಳನ್ನೇ ನೆಡಿ
ಬೆಂಗಳೂರಿನಲ್ಲಿ ಮರಗಳನ್ನು ಉಳಿಸಿಕೊಳ್ಳುವುದೂ ಒಂದು ಸವಾಲು. ಸಸಿಗಳನ್ನು ನೆಟ್ಟಾಗ ಅವುಗಳ ರಕ್ಷಣೆಗೆ ಬಿದಿರು ಅಥವಾ ಕಬ್ಬಿಣದ ಟ್ರೀ ಗಾರ್ಡ್ ಗಳಿಂದ ರಕ್ಷಿಸಲಾಗುತ್ತದೆ. ಆದರೆ ಬಿದಿರಿನ ಟ್ರೀ ಗಾರ್ಡ್ ಗಳು ಅಷ್ಟಾಗಿ ಪ್ರಯೋಜನಕ್ಕೆ ಬರುವುದಿಲ್ಲ. ಬದಲಾಗಿ ಒಂದು ಲಕ್ಷ ಬಿದಿರಿನ ಟ್ರೀ ಗಾರ್ಡ್ ಗಳಿಗೆ ಬದಲಾಗಿ 60 ಸಾವಿರ ಕಬ್ಬಿಣದ ಟ್ರೀ ಗಾರ್ಡ್ ಗಳನ್ನು ಅಳವಡಿಸಿದರೆ ಮರಗಳನ್ನು ಉಳಿಸಿಕೊಳ್ಳಬಹುದಾದ ಪ್ರಮಾಣ ಒಂದೇ ಆಗಿರುತ್ತದೆ.
ಕೆಲವು ಪರಿಸರವಾದಿಗಳು ಬಿದಿರನ್ನು ಬೆಳೆಸಲು ಸಲಹೆ ನೀಡುತ್ತಾರೆ. ಬಿದಿರು ಶೇ.60 -40 ರಷ್ಟು ಇಂಗಾಲವನ್ನು ಹೀರಿಕೊಂಡು ಶೇ.30ರಷ್ಟು ಹೆಚ್ಚು ಆಮ್ಲಜನಕವನ್ನು ನೀಡುತ್ತದೆ.
ಪರಿಸರವಾದಿಗಳು ಸುಮಾರು 143 ಸ್ಥಳೀಯ ಮರಗಳ ಪಟ್ಟಿಯನ್ನು ಬಿಬಿಎಂಪಿಗೆ ನೀಡಿದ್ದು, ಇವುಗಳನ್ನೇ ಭೆಳೆಸುವಂತೆ ಆಗ್ರಹಪಡಿಸಿದೆ. ಅವುಗಳೆಂದರೆ; ಬೇವು, ಬಿದಿರು, ಜಾಲಿ, ಚಿಗರೆ, ಮುತ್ತುಗ, ಬೆಟ್ಟ ತಂಗಡಗಿ, ಮಾವು, ಬೀಟೆ, ಬೇಲ, ನೆಲ್ಲಿ ಮರ, ಈಚಲು, ಕೆಂಪು ಬೂರಗ, ಕಾಟಿನಿಂಗು, ಮುತ್ತುಗ, ಬೀಟೆ, ಅತ್ತಿ, ಗೋಣಿ ಮರ, ಹೊಂಗೆ, ಗೇರು, ಅಂಟುವಾಳ, ಸಾಮೆ,ಅಮಟೆ, ಮತ್ತಿ, ಶ್ರೀಗಂಧ. ಇಂತಹ ಸ್ಥಳೀಯ ಮರಗಳನ್ನು ಬೆಳೆಸುವದರಿಂದ ಸ್ಥಳೀಯ ತಳಿಗಳನ್ನು ರಕ್ಷಿಸಿದಂತಾಗುತ್ತದೆ ಎನ್ನುವ ಸಲಹೆ ಕೇಳಿ ಬಂದಿದೆ.