Bangalore News: ಬೆಂಗಳೂರಿನಲ್ಲಿ ಮಾಜಿ ಸಚಿವ ಎಲ್ ಜಿ ಹಾವನೂರು ಪುತ್ರ ಆತ್ಮಹತ್ಯೆ
ಬೆಂಗಳೂರಿನಲ್ಲಿಯೇ ನೆಲೆಸಿದ್ದ ಮಾಜಿ ಸಚಿವ ಎಲ್.ಜಿ.ಹಾವನೂರು ಅವರ ಪುತ್ರ, ಅಶೋಕ ಹಾವನೂರು ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಬಾಗಲಗುಂಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಕರ್ನಾಟಕದ ಮಾಜಿ ಸಚಿವ, ಕಾನೂನು ತಜ್ಞರಾಗಿದ್ದ ಎಲ್.ಜಿ.ಹಾವನೂರು ಅವರ ಪುತ್ರ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶೋಕ ಹಾವನೂರು(62) ಅವರು ತಮ್ಮ ನಿವಾಸದಲ್ಲಿಯೇ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಹೊರ ವಲಯದ ಬಾಗಲಗುಂಟೆ ಪೊಲೀಸರು ಈ ಕುರಿತು ಮೊಕದ್ದಮೆಯನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಖಿನ್ನತೆಯಿಂದ ಬಳಲುತ್ತಿದ್ದ ಅಶೋಕ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದರೂ, ನಿಖರ ಕಾರಣ ಏನು ಎಂಬುದು ತಿಳಿದಿಲ್ಲ.
ಕಾನೂನು ತಜ್ಞರಾಗಿ, ಕರ್ನಾಟಕದಲ್ಲಿ ಹಲವಾರು ವರದಿಗಳನ್ನು ನೀಡುವ ಮೂಲಕ ಗಮನ ಸೆಳೆಸಿದ್ದ ಎಲ್.ಜಿ.ಹಾವನೂರು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹಿತ ಹಲವರಿಗೆ ಆಪ್ತರಾಗಿದ್ದರು. ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಆಯೋಗದ ವರದಿ ನೀಡಿದ, ದಕ್ಷಿಣ ಆಫ್ರಿಕಾದ ಸಂವಿಧಾನ ರಚನೆಯಲ್ಲಿ ತಮ್ಮ ಯೋಗದಾನ ನೀಡಿದವರು ಹಾವನೂರು ಅವರು.
ಹಾವನೂರು ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಅದರಲ್ಲೂ ಬೆಂಗಳೂರು- ತುಮಕೂರು ರಸ್ತೆಯಲ್ಲಿ ಬರುವ ಬಾಗಲಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹಾವನೂರು ಬಡಾವಣೆಯಲ್ಲಿ ಹಾವನೂರು ಅವರ ಪುತ್ರ ಅಶೋಕ್ ಹಾವನೂರು ಕುಟುಂದವರೊಂದಿಗೆ ವಾಸಿಸುತ್ತಿದ್ದರು.
ರಾಮಮೂರ್ತಿ ನಗರದಲ್ಲಿ ಎಲ್.ಜಿ.ಹಾವನೂರು ಅವರ ಹೆಸರಿನಲ್ಲಿಯೇ ಕಾನೂನು ಮಹಾವಿದ್ಯಾಲಯ ಆರಂಭಿಸಲಾಗಿದ್ದು. ಕಾಲೇಜು ಸಮಿತಿಯ ಅಧ್ಯಕ್ಷರಾಗಿ ಅಶೋಕ್ ಹಾವನೂರು ಅವರು ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕೂವರೆ ದಶಕದಿಂದ ಈ ಕಾಲೇಜಿನಲ್ಲಿ ಸಕ್ರಿಯರಾಗಿದ್ದರು. ಹಲವಾರು ಸಂಸ್ಥೆಗಳೊಂದಿಗೂ ಗುರುತಿಸಿಕೊಂಡು ಸಕ್ರಿಯರೂ ಆಗಿದ್ದರು.
ಆದರೆ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಹೊರಗೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದರು. ಕುಟುಂಬದವರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಈ ವೇಳೆ ಸೋಮವಾರ ಮನೆಯಲ್ಲಿಯೇ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಠಡಿಯಿಂದ ಎಷ್ಟು ಹೊತ್ತಾದರೂ ಹೊರಗೆ ಬಾರದೇ ಇದ್ದಾಗ ಮಗಳು ಹಾಗೂ ಪತ್ನಿ ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಾಗಲಗುಂಟೆ ಪೊಲೀಸರು ಶವ ಕೆಳಕ್ಕೆ ಇಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆನಂತರ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ. ಅಶೋಕ್ ಅವರಿಗೆ ಪತ್ನಿ ಕವಿತಾ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.
ಅವರ ನಿವಾಸದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಆತ್ಮಹತ್ಯೆಗೆ ಏನು ಕಾರಣ ಎನ್ನುವ ಕುರಿತು ನಿಖರ ಮಾಹಿತಿ ದೊರೆತಿಲ್ಲ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದ್ದಾರೆ.
ವಿಭಾಗ