Karnataka Politics: ಬಿಜೆಪಿಗೆ ಡೆಡ್‌ಲೈನ್ ಕೊಟ್ಟ ಸೋಮಣ್ಣ, ಷರತ್ತುಗಳ ಪಟ್ಟಿ ಉದ್ದವಿದೆ
Somanna political Decision ಮಾಜಿ ಸಚಿವ ವಿ.ಸೋಮಣ್ಣ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿನ ಈಗಿನ ಬೆಳವಣಿಗೆಗಳನ್ನಾಧರಿಸಿ ಹೊಸ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕಾಗಿ ಹೊಸ ಆಯ್ಕೆಯನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಡಬಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕಡೆ ಸೋಲುಂಡು ಬಿಜೆಪಿ ವಿರುದ್ದ ಮುನಿಸಿಕೊಂಡಿರುವ ಮಾಜಿ ಸಚಿವ, ಹಿರಿಯ ನಾಯಕ ವಿ.ಸೋಮಣ್ಣ ಪಕ್ಷ ಬಿಡುವ ಹಂತಕ್ಕೆ ಬಂದಿದ್ದಾರೆ.
ಈಗಾಗಲೇ ಕಾಂಗ್ರೆಸ್‌ನಿಂದಲೂ ಸೋಮಣ್ಣ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಲ್ಲವೇ ಉಸ್ತುವಾರಿ ಹೊತ್ತುಕೊಳ್ಳುವ, ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ಭರವಸೆಯೂ ಈಗಲೇ ದೊರೆತಿದೆ.
ಆದರೆ ಬಿಜೆಪಿಯ ಹಿರಿಯ ನಾಯಕರ ಸ್ವಷ್ಟ ಭರವಸೆ ಹಾಗೂ ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೋಮಣ್ಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಈ ಮಾಸಾಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರದಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಸೋಮಣ್ಣ ದೆಹಲಿಗೆ ಹೋಗುವ ಸಾಧ್ಯತೆಯಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮಗೆ ನೀಡಿದ ವಾಗ್ದಾನ, ಆನಂತರ ಚುನಾವಣೆ ಫಲಿತಾಂಶ, ಈಗ ಬಿಜೆಪಿಯಲ್ಲಿ ಆಗಿರುವ ಬದಲಾವಣೆಗಳು, ಅದರಿಂದ ತಮ್ಮ ರಾಜಕೀಯ ಭವಿಷ್ಯದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಸೋಮಣ್ಣ ಚರ್ಚಿಸಿ ಬಳಿಕ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ.
ಈ ಕಾರಣಕ್ಕೆ ಅವರು ಡಿಸೆಂಬರ್ 6ರ ಡೆಡ್‌ಲೈನ್ ನಿಗದಿಪಡಿಸಿಕೊಂಡಿದ್ದು, ಅಂದು ಹೊಸ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಹೈ ಕಟ್ಟಣ್ಣಪೆಗೆ ಜೈ
ಸೋಮಣ್ಣ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಗನಿಗೆ ಅರಸೀಕೆರೆ ಇಲ್ಲವೇ ತುಮಕೂರು ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಹಾಗೂ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದರು. ಮಗನಿಗೆ ಗೋವಿಂದರಾಜನಗರ ಕ್ಷೇತ್ರಕ್ಕೆ ಅವಕಾಶ ಕೊಡುವುದಾದರೆ ನನಗೆ ಚಾಮರಾಜನಗರ ಜಿಲ್ಲೆಯಲ್ಲಿ ಟಿಕೆಟ್ ಕೊಡಿ ಎಂದು ಕೇಳಿಕೊಂಡಿದ್ದರು.
ಆದರೆ ಆಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಇದ್ದ ಹಿರಿಯ ನಾಯಕರು ಸೋಮಣ್ಣಅವರಿಗೆ ವಿಶೇಷ ಮಹತ್ವ ನೀಡಿದ್ದರು. ಮತ್ತೊಂದು ಕಡೆ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವುದು ಮೋದಿ ಶಾ ಇರಾದೆಯಾಗಿತ್ತು. ಪಕ್ಷದ ಅಧಿಕಾರಕ್ಕೆ ಬಂದರೆ ನಿಮಗೆ ಮಹತ್ವದ ಹುದ್ದೆ ನೀಡಲಾಗುತ್ತದೆ. ಇದರಿಂದ ನೀವು ಸಿಎಂ ಸಿದ್ದರಾಮಯ್ಯ ವಿರುದ್ದ ಕಣಕ್ಕಿಳಿದು ಗೆದ್ದು ಬನ್ನಿ. ಮೈಸೂರು ಭಾಗದ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಅಮಿತ್ ಶಾ ಸಹಿತ ಹಲವರು ಸೂಚಿಸಿದ್ದರು. ಸೋಮಣ್ಣ ಅವರಿಗೆ ಮೂಲ ಕ್ಷೇತ್ರ ಗೋವಿಂದರಾಜನಗರ ಹಾಗೂ ಚಾಮರಾಜನಗರ ಜಿಲ್ಲೆಯ ಕ್ಷೇತ್ರ ಒಂದರಲ್ಲಿ ಸ್ಪರ್ಧಿಸುವ ಇರಾದೆ ಇತ್ತಾದರೂ ವರಿಷ್ಠರ ಮಾತಿಗೆ ಕಟ್ಟು ಬಿದ್ದು ಸಿಎಂ ವಿರುದ್ದ ಅನಿವಾರ್ಯವಾಗಿ ವರುಣ ಕ್ಷೇತ್ರದಲ್ಲಿ ಕಣಕ್ಕೆ ಇಳಿದರು. ಚಾಮರಾಜನಗರದಿಂದಲೂ ಸ್ಪರ್ಧಿಸಿದರು. ತಮ್ಮ ಬೆಂಬಲಿಗರು, ಹಿತೈಷಿಗಳು ಗೋವಿಂದರಾಜನಗರ ಕ್ಷೇತ್ರದ ಜತೆಗೆ ಇನ್ನೊಂದು ಕಡೆ ಸ್ಪರ್ಧಿಸುವಂತೆ ಹೇಳಿದರೂ ಹೈ ಕಮಾಂಡ್ ಕಟ್ಟಪ್ಪಣೆ ಮುಂದೆ ಸೋಮಣ್ಣ ಏನೂ ಮಾಡಲಾಗಲಿಲ್ಲ. ಒಲ್ಲದ ಮನಸಿನಿಂದಲೇ ಎರಡೂ ಕಡೆಗೂ ಸ್ಪರ್ಧಿಸಿ ಸೋತರು.
ನಾವೆಲ್ಲಾ ಸೋಮಣ್ಣ ಅವರಿಗೆ ವರುಣದಲ್ಲಿ ಸ್ಪರ್ಧೆ ಬೇಡವೇ ಬೇಡ ಎಂದೆವು. ಗೋವಿಂದರಾಜ ನಗರ ಕ್ಷೇತ್ರ ಬಿಡಬೇಡಿ ಎಂದು ಮನವಿ ಮಾಡಿದೆವು. ನೀವೇನೋ ಹೇಳುತ್ತೀರಿ. ಹೈ ಕಮಾಂಡ್ ಕೇಳಬೇಕಲ್ಲ. ಹೊಸ ಸವಾಲು ಎದುರಿಸುತ್ತಿದ್ದೇನೆ. ನೀವೆಲ್ಲಾ ಜತೆಗಿರಿ ಎಂದು ಹೇಳಿದರು. ನಾವೆಲ್ಲ ಕೆಲಸ ಮಾಡಿದೆವು. ಆದರೆ ಆನಂತರ ಆದದ್ದೇ ಬೇರೆ ಎಂದು ಅಂದಿನ ರಾಜಕೀಯ ಸನ್ನಿವೇಶವನ್ನು ಸೋಮಣ್ಣ ಅವರ ಅನುಯಾಯಿಯಾಗಿ ಬಿಡಿಸಿಡುತ್ತಾರೆ.
ಕಾಂಗ್ರೆಸ್ ನಿಂದ ಆಹ್ವಾನ
ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ತುಮಕೂರು ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸಹಿತ ಹಲವರು ಸೋಮಣ್ಣ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಮೈಸೂರು ಭಾಗದಲ್ಲಿ ನಮಗೆ ಲಿಂಗಾಯಿತ ನಾಯಕರಿಲ್ಲ. ಮುಂದಿನ ಲೋಕಸಭೆ ಚುನಾವಣೆ ಉಸ್ತುವಾರಿ ನಿಮಗೆ ನೀಡಲಾಗುತ್ತದೆ. ಪಕ್ಷಕ್ಕೆ ಬನ್ನಿ ಎಂದು ಸಿದ್ದರಾಮಯ್ಯ ಖುದ್ದು ಆಹ್ವಾನ ನೀಡಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾದರೇ ನಿಮಗೆ ಅವಕಾಶವಿದೆ ಎಂದು ಪರಮೇಶ್ವರ್ ಕೂಡ ಹೇಳಿದ್ಧಾರೆ. ಕಾಂಗ್ರೆಸ್ ಸೇರಿದರೆ ಮುಂದೆ ನಿಮಗೆ ಗೋವಿಂದರಾಜನಗರ ಇಲ್ಲವೇ ರಾಜಾಜಿನಗರದಲ್ಲಿ ಟಿಕೆಟ್ ನೀಡಲಾಗುತ್ತದೆ. ನಿಮ್ಮ ಮಗನಿಗೆ ಬೇಕಾದರೆ ವಿಧಾನಸಭೆಗೆ ಸ್ಪರ್ಧಿಸಲು ರಾಜಾಜಿನಗರದಿಂದ ಅವಕಾಶ ಮಾಡಿಕೊಡಲಾಗುತ್ತದೆ ಎನ್ನುವ ಭರವಸೆಯನ್ನು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಆರ್ ನೀಡಿದ್ದಾರೆ. ಕಾಂಗ್ರೆಸ್‌ನಿಂದ ಆಹ್ವಾನವಿದ್ದು. ಹೋಗುವ ಮನಸಿದ್ದರೂ ಸೋಮಣ್ಣ ಬಿಜೆಪಿ ವರಿಷ್ಠರ ಮೇಲೆಯೇ ವಿಶ್ವಾಸವಿಟ್ಟು ಅವರ ಸೂಚನೆಗೆ ಕಾಯುತ್ತಿದ್ದಾರೆ.
ಸೋಮಣ್ಣ ಬೇಡಿಕೆಗಳೇನು
- ಈಗಲೂ ಮೋದಿ ಅವರನ್ನು ಪ್ರಧಾನಿ ಮಾಡಲು ಪಕ್ಷದಲ್ಲೇ ಉಳಿಯಲು ನಾನು ಸಂಪೂರ್ಣ ಸಿದ್ದನಿದ್ದೇನೆ. ಆದರೆ ನನ್ನ ಕೆಲ ಬೇಡಿಕೆ ಈಡೇರಿಸಬೇಕು
- ನಾನು ಸೋಲಲು ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಅವರ ಪಾತ್ರವೂ ಇದೆ. ಚಾಮರಾಜನಗರ ಹಾಗೂ ವರುಣದಲ್ಲಿ ಪಕ್ಷದ ಪ್ರಮುಖರನ್ನೆ ನನ್ನ ವಿರುದ್ದ ಎತ್ತಿಕಟ್ಟಿದರು. ಅವರ ವಿರುದ್ದ ಕ್ರಮ ಕೈಗೊಳ್ಳಬೇಕು
- ಮಹತ್ವ ನೀಡುವ ಮಾತನಾಡಿ ನಮ್ಮ ಸೋಲಿಗೆ ಕಾರಣರಾದ ವಿಜಯೇಂದ್ರ ಅವರಿಗೆ ಪಕ್ಷಾಧ್ಯಕ್ಷ ನೀಡಿದ್ದೀರಿ. ಖಂಡಿತಾ ಅವರು ನನ್ನ ರಾಜಕೀಯ ಜೀವನಕ್ಕೆ ಅಡ್ಡಿ ಮಾಡುತ್ತಾರೆ.
- ಅವರಿಬ್ಬರು ನನ್ನ ತಂಟೆಗೆ ಬಾರದಂತೆ ತಾಕೀತು ಮಾಡಬೇಕು. ನನ್ನ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು.
- ಕರ್ನಾಟಕದಿಂದ ರಾಜ್ಯಸಭೆ ಸ್ಥಾನ ಖಾಲಿಯಾಗುತ್ತಿದ್ದು, ಅಲ್ಲಿ ನನಗೆ ಅವಕಾಶ ಮಾಡಿಕೊಡಬೇಕು. ಇಲ್ಲವೇ ವಿಧಾನಪರಿಷತ್ ಗಾದರೂ ನೇಮಕ ಮಾಡಿಕೊಡಬೇಕು.
ಇದನ್ನೂ ಓದಿರಿ