Bangalore Crime: ಮೋದಿ, ಸಿದ್ದರಾಮಯ್ಯ ಸಹಿತ ಗಣ್ಯರ ಹೆಸರು ಬಳಸಿ ವಂಚನೆ: ಬೆಂಗಳೂರಿನ ವ್ಯಕ್ತಿ ಬಂಧನ
Bangalore News ಬೆಂಗಳೂರಿನಲ್ಲಿ ಅತಿಗಣ್ಯರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.
ಬೆಂಗಳೂರು: ಈತ ಅಂತಿಂತಹ ವಂಚಕನಲ್ಲ.ನನಗೆ ಮೋದಿ ಪರಮಾಪ್ತರು, ಸಿದ್ದರಾಮಯ್ಯ ಅವರ ಆತ್ಮೀಯತೆಯಿಂದ ಏನು ಬೇಕಾದರೂ ಮಾಡಿಸಿಕೊಡಬಲ್ಲೆ. ನನ್ನ ಆತ್ಮೀಯ ಪಟ್ಟಿಯಲ್ಲಿ ಗಣ್ಯಾತಿ ಗಣ್ಯರಿದ್ದಾರೆ ಎಂದು ತಾನೇ ಗಣ್ಯನಂತೆ ಖುದ್ದು ಕರೆ ಮಾಡಿ ನಯವಾಗಿಯೇ ವಂಚಿಸುತ್ತಿದ್ದ.
ಬೆಂಗಳೂರಿನ ಈ ನಯವಂಚಕ ಈಗ ಪೊಲೀಸರ ಅತಿಥಿ. ಈತನ ಹೆಸರು ಸಂತೋಷ್ ರಾವ್. ಬೆಂಗಳೂರಿನಲ್ಲಿಯೇ ಹಲವರಿಗೆ ಮೋಸ ಮಾಡಿದ ದೂರುಗಳಿದ್ದು, ಈಗ ಬಂದ ದೂರಿನನ್ವಯ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಯಾರೀತ ಸಂತೋಷ್‌ರಾವ್
ಮಹಾಲಕ್ಷ್ಮಿ ಲೇಔಟ್ ನಿವಾಸಿ ನಿಖಿಲ್ ಎಂಬುವರು ಸಂತೋಷ್ ರಾವ್ ಒಂದೂವರೆ ಕೋಟಿ ರೂಪಾಯಿ ವಂಚಿಸಿರುವ ಬಗ್ಗೆ ದೂರು ಸಲಿಸಿದ್ದರು. ಹಾಗಾಗಿ ಈತನ ಮೋಸ ಬಯಲಾಗಿದೆ.
ಎಂಜಿನಿಯರಿಂಗ್ ಪದವೀಧರನಾಗಿರುವ ಸಂತೋಷ್ ರಾವ್, ಪಿಎಂ, ಸಿಎಂ ಮತ್ತು ಸಚಿವರ ಕಚೇರಿಗಳ ಹೆಸರಿನಲ್ಲಿ ಸಂಘ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿ ಬೇಕಾದ ಕೆಲಸ ಮಾಡಿಕೊಳ್ಳುತ್ತಿದ್ದ. ಕೆಲವೊಮ್ಮೆ ಐ ಎ ಎಸ್ ಅಧಿಕಾರಿಗಳನ್ನೇ ಬೇಸ್ತು ಬೀಳಿಸಿದ್ದ ನಯವಂಚಕ ಈತ.
ರಾಜಕಾರಣಿ, ಉದ್ಯಮಿಗಳನ್ನು ಬಿಡಿ, ಮಠಗಳಿಗೂ ಟೋಪಿ ಹಾಕಿದ್ದ ಆರೋಪಿ ಸಂತೋಷ ಉತ್ತರಾದಿ ಮಠ ಮತ್ತು ಉಡುಪಿ ಮಠಗಳಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಗಣ್ಯ ವ್ಯಕ್ತಿಗಳ ಹೆಸರು ಹೇಳಿಕೊಂಡು ನಾನಾ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಆರೋಪಿ ಸಂತೋಷ್ ರಾವ್ ನಿಂದ ವಂಚನೆಗೀಡಾದವರು ಮಾಹಿತಿ ನೀಡಬಹುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.
ಬೆಳಕಿಗೆ ಬಂದದ್ದು ಹೇಗೆ?
ದೂರುದಾರ ನಿಖಿಲ್ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಸಂತೋಷ್ ರಾವ್, ಜಂಟಿಯಾಗಿ ಸಾಫ್ಟ್‌ವೇರ್ ಕಂಪನಿ ಸ್ಥಾಪನೆ ಮಾಡೋಣ ಎಂದು ಆಮಿಷ ಒಡ್ಡಿದ್ದ. ಕಂಪನಿ ಹೆಸರಿನಲ್ಲಿ ರೂ. 1.50 ಕೋಟಿ ಪಡೆದುಕೊಂಡಿದ್ದ ಎಂದು ನಿಖಿಲ್ ದೂರಿನಲ್ಲಿ ತಿಳಿಸಿದ್ದಾರೆ
ಕಂಪನಿ ನೋಂದಣಿ ಮಾಡಿಸಿದ್ದ ಸಂತೋಷ್, ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ. ವ್ಯವಹಾರ ಕುರಿತು ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಕೊನೆಗೆ ನಿಖಿಲ್, ತಮ್ಮ ಹಣವನ್ನು ಮರಳಿಸುವಂತೆಕೇಳಿದಾಗ ಆರೋಪಿ ಹಣ ಕೊಟ್ಟಿರಲಿಲ್ಲ ಎಂದು ಆವರು ಹೇಳಿದ್ದಾರೆ.
ಉದ್ಯೋಗ, ಕಂಪನಿ ಸ್ಥಾಪನೆ, ಹಣ ದ್ವಿಗುಣ ಹಾಗೂ ಹಲವು ಆಮಿಷವೊಡ್ಡಿ ಆರೋಪಿ ಸಂತೋಷ್ ಹಲವರನ್ನು ವಂಚಿಸಿರುವ ಮಾಹಿತಿ ಇದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವಂಚನೆಯ ಕೆಲವು ಝಲಕ್ ಗಳು
ಮಠಗಳು, ದೇವಸ್ಥಾನಗಳ ಆಡಳಿತ ಮಂಡಳಿ ಮುಖ್ಯಸ್ಥರನ್ನು ವಂಚಿಸುವುದು ಈತನಿಗೆ ಪಂಚಾಮೃತ ಕುಡಿದಷ್ಟೇ ಸಲೀಸು.
ಉತ್ತರಾದಿ ಮಠಕ್ಕೆ ಕರೆ ಮಾಡಿ ಪ್ರಧಾನಿ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮಲ್ಲಿಗೆ ಇಂದು ಸಂತೋಷ್ ರಾವ್ ಎಂಬವರು ಬರುತ್ತಿದ್ದಾರೆ ಎಂದು ಹೇಳುತ್ತಿದ್ದ. ಕೇಂದ್ರ ಸಚಿವರ ಧ್ವನಿಯನ್ನೇ ಅನುಕರಿಸಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದ. ಹೀಗೆ ಉತ್ತರಾದಿ ಮಠಕ್ಕೂ ಕರೆ ಮಾಡಿದ್ದ. ಉತ್ತರಾದಿ ಮಠದ ಆಡಳಿತ ಮಂಡಳಿ ಮುಖ್ಯಸ್ಥರು ತಮ್ಮ ವಾಹನ ಕಳುಹಿಸಿ ಆತನನ್ನು ಕರೆಸಿಕೊಂಡಿದ್ದರು. ಸಭಾ ಮಂಟಪ ಉದ್ಘಾಟನೆ ಕಾರ್ಯಕ್ರಮಕ್ಕೆ ಆತನಿಗೆ ಭವ್ಯ ಸ್ವಾಗತ ನೀಡಲಾಗಿತ್ತು. ಜತೆಗೆ ಸ್ವಾಮೀಜಿಗಳಿಂದ ಆತನಿಗೆ ಸನ್ಮಾನವನ್ನು ಮಾಡಿಸಲಾಗಿತ್ತು. ಮಠಗಳಿಗೆ ಸಂತೋಷ್ ಪರಮ ದೈವಭಕ್ತನಂತೆ ಮಡಿಯುಟ್ಟು ಆಗಮಿಸುತ್ತಿದ್ದ.
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲು ಜಿಲ್ಲಾಡಳಿತದ ವ್ಯವಸ್ಥೆಯನ್ನೇ ಬಳಸಿಕೊಂಡಿದ್ದ ಸಂತೋಷ್. ಪ್ರಧಾನಿ ಕಚೇರಿಯಿಂದ ಮಾತನಾಡುವಂತೆ ಉಡುಪಿ ಜಿಲ್ಲಾಧಿಕಾರಿಗೇ ನೇರವಾಗಿ ಕರೆ ಮಾಡಿ ನಮ್ಮ ಪಿಎ ಉಡುಪಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಬೇಕಾದ ವ್ಯವಸ್ಥೆ ಮಾಡಿ ಎಂದು ಈತನೇ ಸೂಚನೆ ನೀಡಿದ್ದ. ಪ್ರಧಾನಿ ಕಚೇರಿಯಿಂದ ಕರೆ ಬಂದಿದೆ ಎಂದು ನಂಬಿದ ಜಿಲ್ಲಾಡಳಿತ ಆರೋಪಿಗೆ ಕಾರು ಮತ್ತು ಎಸ್ಕಾರ್ಟ್ ವ್ಯವಸ್ಥೆ ಜಿಲ್ಲಾಡಳಿತ ಮಾಡಿತ್ತು. ಉಡುಪಿ ಮಠಕ್ಕೆ ಭೇಟಿ ಮತ್ತು ಸ್ವಾಮೀಜಿಗಳ ಭೇಟಿಯ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ಮಾಡಿತ್ತು.
ಈ ಸ್ಥಳಗಳಿಗೆ ಭೇಟಿ ನೀಡಿದ ವಿಡಿಯೋ ಮತ್ತು ಭಾವಚಿತ್ರಗಳನ್ನು ಬಳಸಿಕೊಂಡು ತನಗೆ ದೊಡ್ಡ ಮಟ್ಟದ ಸಂಪರ್ಕ ಇದೆ ಎಂದು ಉದ್ಯಮಿಗಳನ್ನು ನಂಬಿಸುತ್ತಿದ್ದ. ಈ ಮೂಲಕ ಅವರಿಂದ ಕೋಟಿ ಕೋಟಿ ರೂ. ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)