Drought: ಬರ ನಿರ್ವಹಣೆಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ, ಏನಿದರ ವಿಶೇಷ, ಲಾಭ ಹೇಗೆ
ಕನ್ನಡ ಸುದ್ದಿ  /  ಕರ್ನಾಟಕ  /  Drought: ಬರ ನಿರ್ವಹಣೆಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ, ಏನಿದರ ವಿಶೇಷ, ಲಾಭ ಹೇಗೆ

Drought: ಬರ ನಿರ್ವಹಣೆಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ, ಏನಿದರ ವಿಶೇಷ, ಲಾಭ ಹೇಗೆ

ಕೋಲಾರ ಮಾದರಿಯ ಸಮಗ್ರ ಕೃಷಿಯನ್ನು ಕರ್ನಾಟಕದ ಇತರೆ ಭಾಗದಲ್ಲಿ ಅನುಷ್ಠಾನಗೊಳಿಸುವುದೂ ಸೇರಿದಂತೆ ರೈತರ ಸುಸ್ಥಿರ ಕೃಷಿಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಒತ್ತು ನೀಡಲಿದೆ.

ರೈತರು ಬರ ಎದುರಿಸಲು ಸಹಕಾರಿಯಾಗುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ.
ರೈತರು ಬರ ಎದುರಿಸಲು ಸಹಕಾರಿಯಾಗುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಪ್ರತಿ ವರ್ಷ ರೈತರು ಬರದಿಂದ ತೊಂದರೆಗೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೆ ತರಲು ಮುಂದಾಗಿದೆ. ಕಳೆದ ವಾರ ಕರ್ನಾಟಕ ಬಜೆಟ್‌ 2024 ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಸಮಗ್ರ ಕೃಷಿ ಯೋಜನೆಗೆ ವಿಸ್ತೃತ ರೂಪ ನೀಡಿ ಸಮೃದ್ದಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಕುರಿತು ಕರ್ನಾಟಕದ ಕೃಷಿ ಇಲಾಖೆ ನಾನಾ ಜಿಲ್ಲೆಗಳಲ್ಲಿರುವ ಯಶಸ್ವಿಯಾಗಿರುವ ಕೃಷಿ ಮಾದರಿಗಳನ್ನು ಸಂಗ್ರಹಸಿ, ಅವುಗಳನ್ನು ಇತರೆ ಜಿಲ್ಲೆಗಳಿಗೆ ವಿಸ್ತರಿಸಿ ರೈತರನ್ನು ಆತ್ಮಹತ್ಯೆ ಹಾಗೂ ಬರದಿಂದ ಪಾರು ಮಾಡಲು ಯತ್ನಿಸುತ್ತಿದೆ.

ಏನಿದು ಯೋಜನೆ

ಕರ್ನಾಟಕವೂ ಕೃಷಿ ಮುಂಚೂಣಿ ರಾಜ್ಯವೇ. ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಗಟ್ಟಿ ನೆಲೆಯನ್ನು ಹೊಂದಿದೆ. ಕೆಲವು ಜಿಲ್ಲೆಗಳು ನೀರಾವರಿ ಸೌಲಭ್ಯ ಹೊಂದಿದ್ದರೆ, ಇನ್ನಷ್ಟು ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯ ಕಡಿಮೆ ಇದೆ. ಇದರಿಂದ ಜನ ಮಳೆಯಾಶ್ರಿತ ಬೆಳೆಯ ಜತೆಗೆ ಬೋರ್‌ವೆಲ್‌ಗಳನ್ನು ಆಧರಿಸಿ ವರ್ಷವಿಡೀ ಕೃಷಿ ಮಾಡುತ್ತಿದ್ಧಾರೆ. ಕೆಲವೊಮ್ಮೆ ಒಳ್ಳೆಯ ಬೆಳೆ ಬಂದಾಗ ಬೆಲೆ ಸಿಗದೇ ಇರುವುದು, ಬೆಲೆ ಇದ್ದಾಗ ಬೆಳೆಯೇ ಬಾರದಿರುವಂತಹ ಸನ್ನಿವೇಶಗಳೂ ಆಗಾಗ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಹಣ್ಣು ಹಾಗೂ ತರಕಾರಿ ವಿಚಾರದಲ್ಲಿ ಇದು ನಡೆದುಕೊಂಡು ಬರುತ್ತಲೇ ಇದೆ. ಆದರೂ ರೈತರು ತಮ್ಮ ಕಾಯಕವನ್ನು ಬಿಟ್ಟಿಲ್ಲ.

ಈ ಕಾರಣದಿಂದಲೇ ರೈತರು ಕೆಲವು ಜಿಲ್ಲೆಗಳಲ್ಲಿ ವಿಭಿನ್ನ ಹಾಗೂ ಯಶಸ್ವಿ ಮಾದರಿಗಳನ್ನು ಅಸುಸರಿಸಿಕೊಂಡು ಬರುತ್ತಿದ್ದಾರೆ. ಅಂತಹ ಮಾದರಿಗಳನ್ನು ಒಳಗೊಂಡಿರುವುದೇ ಕರ್ನಾಟಕ ರೈತ ಸಮೃದ್ಧಿ ಯೋಜನೆ. ಇದಕ್ಕೆ ಅನುದಾನವನ್ನೇ ನೀಡುವುದಿಲ್ಲ. ಆಯಾ ಜಿಲ್ಲೆಗಳಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಆರ್ಥಿಕ ನೆರವನ್ನು ಪಡೆದು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

ಕರ್ನಾಟಕ ರೈತ ಸಮೃದ್ಧಿ ಯೋಜನೆ ಎನ್ನುವುದು ಸಿಎಂ ಅವರ ಪರಿಕಲ್ಪನೆ. ಅಂದರೆ ರೈತರ ಆತ್ಮಹತ್ಯೆ ಹೆಚ್ಚಿರುವ ಜಿಲ್ಲೆಗಳು, ಬರದಿಂದ ತೊಂದರೆ ಅನುಭವಿಸಿದ ಪ್ರದೇಶಗಳು, ಎಂತಹ ಸನ್ನಿವೇಶದಲ್ಲೂ ಪರಿಸ್ಥಿತಿ ಎದುರಿಸಿ ಗೆದ್ದ ರೈತರು, ಬರವನ್ನೂ ವರವನ್ನಾಗಿಸಿದ ಜಿಲ್ಲೆ, ರೈತರ ಯಶೋಗಾಥೆಗಳನ್ನು ಇತರೆ ಜಿಲ್ಲೆಗಳಿಗೆ ತಿಳಿಸಿಕೊಡಲಾಗುತ್ತದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಯಲ್ಲಿ ಕಲಿಬೇಕಾದ ಕೃಷಿ ಪಾಠಗಳನ್ನು ರೈತರಿಗೆ ಮನವರಿ ಮಾಡಿಕೊಡುವುದು ಇದರ ಉದ್ದೇಶ. ಈ ಕುರಿತು ಕೃಷಿ ಇಲಾಖೆ ಹಾಗೂ ಇತರೆ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಿ ಇದನ್ನು ಮಾದರಿಯಾಗಿ ರೂಪಿಸಲಾಗುವುದು. ಇದೊಂದು ರೀತಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಯೋಜನೆಯಾಗಲಿದೆ ಎನ್ನುವುದು ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್‌ ಅವರ ವಿವರಣೆ.

ಕೋಲಾರ ಮಾದರಿ

ಕೃಷಿ ವಿಚಾರದಲ್ಲಿ ಒಂದಿಲ್ಲೊಂದು ಜಿಲ್ಲೆ ರೈತಾಪಿ ಚಟುವಟಿಕೆಗಳ ಮೂಲಕ ಗಮನ ಸೆಳೆದಿವೆ. ನೀರಾವರಿ ಯೋಜನೆ ಪ್ರಬಲವಾಗಿ ಇಲ್ಲದೇ ಇದ್ದರೂ ಇಲ್ಲಿನ ಕೃಷಿಕರು ಸಮಗ್ರ ಕೃಷಿ ಪದ್ದತಿ ಅನುಸರಿಸಿದ್ಧಾರೆ. ಅಂದರೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಸಹಿತ ಎಲ್ಲಾ ಮಾದರಿಗಳನ್ನು ಉಪಯೋಗಿಸಿಕೊಂಡಿದ್ಧಾರೆ. ಇದರಿಂದ ಇಡೀ ರಾಜ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಶೂನ್ಯಕ್ಕೆ ಬಂದಿವೆ. ಅದೇ ಹಾವೇರಿಯಂತಹ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಏಕ ರೂಪದ ಕೃಷಿಗೆ ಜೋತು ಬಿದ್ದಿರುವುದು ಕಂಡು ಬರುತ್ತಿದೆ. ಇದರಿಂದ ನಷ್ಟ ಅನುಭವಿಸಿದಾಗ ಜೀವ ಹರಣ ಮಾಡಿಕೊಳ್ಳುವ ಸನ್ನಿವೇಶ ಹೆಚ್ಚಿವೆ. ಕೋಲಾರ ಮಾದರಿಯನ್ನು ಬಹುತೇಕ ಜಿಲ್ಲೆಗಳಲ್ಲಿ ಹೇಗೆ ಜಾರಿಗೊಳಿಸಬಹುದು. ಈ ಮೂಲಕ ಬರ ಎದುರಿಸಿ ಆತ್ಮಹತ್ಯೆಯಿಂದ ರೈತರನ್ನು ಹೇಗೆ ಪಾರು ಮಾಡಬಹುದು ಎನ್ನುವುದನ್ನು ಮೊದಲ ಹಂತದಲ್ಲಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ಮೂಲಕ ಪ್ರಯೋಗಿಸಲಾಗುತ್ತದೆ ಎಂದು ಪಾಟೀಲ್‌ ಹೇಳುತ್ತಾರೆ.

ಯೋಜನೆ ಸ್ವರೂಪ ಹೀಗಿರಲಿದೆ

  • ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವುದು ನಮ್ಮ ಸರ್ಕಾರದ ಆದ್ಯತೆಯ ವಿಷಯವಾಗಿದ್ದು, ಈ ಉದ್ದೇಶದಿಂದ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು.
  • ಈ ಯೋಜನೆಯಡಿ ರೈತರಿಗೆ ಹಲವು ವಿಷಯಗಳಲ್ಲಿ ಮಾರ್ಗದರ್ಶನ ಹಾಗೂ ಬೆಂಬಲ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
  • ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ಆದಾಯದಲ್ಲಿ ಸುಸ್ಥಿರತೆಯನ್ನು ಕಂಡುಕೊಳ್ಳಲು ಬೆಂಬಲ ನೀಡುವುದು.

  • ಮಣ್ಣಿನ ಗುಣ ಹಾಗೂ ಮಾರುಕಟ್ಟೆ ಬೇಡಿಕೆಯನ್ನು ಆಧರಿಸಿ ಯಾವ ಬೆಳೆ * ಬೆಳೆಯಬೇಕೆಂಬ ಕುರಿತು ರೈತರಿಗೆ ಮಾರ್ಗದರ್ಶನ ನೀಡುವುದು.
  • ಮಣ್ಣು ಪರೀಕ್ಷೆ ಮತ್ತು ಗುಣಮಟ್ಟ ಕುರಿತು ಮಾಹಿತಿ ನೀಡುವುದು.
  • ಹೊಸ ಕೃಷಿ ಪದ್ಧತಿ ಹಾಗೂ ತಂತ್ರಜ್ಞಾನಗಳ ಕುರಿತು ರೈತರಿಗೆ ಅರಿವು ಮೂಡಿಸಿ, ಬೆಂಬಲ ನೀಡುವುದು.
  • ರೈತರಿಗೆ ಸಂಗ್ರಹಣೆ ಮತ್ತು ಮೌಲ್ಯವರ್ಧನೆಯ ಕುರಿತು ಅರಿವು ಮೂಡಿಸುವುದು.
  • ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು.

Whats_app_banner