Greater Bangalore: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕರಡು ಮಸೂದೆ ಸಲ್ಲಿಕೆ, ಕಾರ್ಯವೈಖರಿ ಹೇಗೆ, ಬೆಂಗಳೂರು ವ್ಯಾಪ್ತಿ ಎಷ್ಟು ಹಿಗ್ಗಲಿದೆ?
Bangalore News ಬೆಂಗಳೂರು ವಿಸ್ತರಣೆ ಕಾಲ ಸನ್ನಿಹಿತವಾಗುತ್ತಿದೆ. ಗ್ರೇಟರ್ ಬೆಂಗಳೂರು ಯೋಜನೆಯಡಿ ಈಗಾಗಲೇ ಕರಡು ಮಸೂದೆಯೂ ಸಲ್ಲಿಕೆಯಾಗಿದೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಕುರಿತ ಕರಡು ವಿದೇಯಕವನ್ನು ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅವರ ನೇತೃತ್ವದ ಸಮಿತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುಧಾರಣಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. ಈ ಮಸೂದೆಯನ್ನು ಮುಂಬರುವ ಮುಂಗಾರು ಆಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಮೂಲಾಗ್ರವಾಗಿ ಚರ್ಚಿಸಲಿದೆ. ಈ ಕರಡು ಮಸೂದೆಯನ್ನ್ನು ಬ್ರ್ಯಾಂಡ್ಬೆಂ ಗಳೂರು ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್, ಮಾಜಿ ಐಎಎಸ್ ಅಧಿಕಾರಿ ಸಿದ್ದಯ್ಯ ಮತ್ತು ನಗರ ತಜ್ಞ ವಿ.ರವಿಚಂದರ್ ಸಿದ್ದಪಡಿಸಿದ್ದಾರೆ. ಈ ಮಸೂದೆಯಲ್ಲಿ ಈ ಸಮಿತಿಯು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಪ್ರಸ್ತಾಪ ಮಾಡಿದೆ.
ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024ರಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ರಚಿಸುವ ಪ್ರಸ್ತಾಪ ಮಾಡಿದೆ. ಪ್ರಾಧಿಕಾರ, ಪಾಲಿಕೆ ಮತ್ತು ವಾರ್ಡ್ ಗಳೆಂಬ ಮೂರು ಹಂತದಲ್ಲಿ ಆಡಳಿತ ವ್ಯವಸ್ಥೆ ಇರಲಿದೆ. ಒಂದರಿಂದ 10 ರವರೆಗೆ ಪಾಲಿಕೆಗಳನ್ನು ರಚಿಸಬಹುದಾಗಿದ್ದು, ಪ್ರತಿ ಪಾಲಿಕೆಯ ವ್ಯಾಪ್ತಿ 950 ಚ.ಅಡಿಗೆ ವಿಸ್ತರಿಸಬಹುದಾಗಿದೆ.
ಎಂದು ಸಲಹೆ ನೀಡಿದೆ. ಪ್ರಸ್ತುತ 708 ಚ.ಕಿಮೀ ವ್ಯಾಪ್ತಿಯಲ್ಲಿರುವ ಬಿಬಿಎಂಪಿ ವಿಸರ್ಜನೆಯಾಗಲಿದ್ದು, ಅದರ ವ್ಯಾಪ್ತಿಯನ್ನು 950 ಚದುರ ಕಿಲೋಮೀಟರ್ ವರೆಗೂ ವಿಸ್ತರಿಸಬಹುದಾಗಿದೆ ಎಂದೂ ಹೇಳಿದೆ. ಜೊತೆಗೆ ಬೆಂಗಳೂರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿವೆ. ಎಷ್ಟು ವಾರ್ಡ್ ಗಳಿರಬೇಕು ಎಂದು ನಿರ್ಧಿಷ್ಟವಾಗಿ ಹೇಳಿಲ್ಲ. ಆದರೆ ಅಂದಾಜು 400 ವಾರ್ಡ್ ಗಳು ರಚನೆಯಾಗಲಿವೆ ಎಂದು ಊಹಿಸಲಾಗಿದೆ.
ಬೆಂಗಳೂರಿಗೆ ಮೂರು ಹಂತದ ಆಡಳಿತ ವ್ಯವಸ್ಥೆಯ ಅಗತ್ಯವನ್ನು ಸಮಿತಿ ಸದಸ್ಯ ರವಿಚಂದರ್ ಪ್ರತಿಪದಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಬೇಕಿದ್ದರೆಕಾಯಿದೆಯಾಗಿ ರಚನೆಯಾಗಬೇಕಿದೆ. ಸದ್ಯ ಕರಡು ರೂಪದಲ್ಲಿದ್ದು, ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ಪಡೆದರೆ ಹಾದಿ ಸುಗಮವಾಗಲಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿ 1,400 ಕಿಮೀ ವ್ಯಾಪ್ತಿ ಒಳಗೊಂಡಿದ್ದು, ಬಹುತೇಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಂದಿರುವ ವಿಸ್ತೀರ್ಣ ಹೊಂದಿದೆ. ಒಂದು ವೇಳೆ ಪ್ರಾಧಿಕಾರ ರಚನೆಯಾದರೆ ಬಿಡಿಎ ತನ್ನ ಯೋಜನಾ ಅಧಿಕಾರವನ್ನು ಕಳೆದುಕೊಳ್ಳಲಿದೆ. ಆದರೆ ಪ್ರಾಧಿಕಾರದ ಪರವಾಗಿ ಮೂಲಭೂತ ಸೌಕರ್ಯ ಯೋಜನಗಳನ್ನು ಕೈಗೊಳ್ಳಬಹುದಾಗಿದೆ. ರಾಜ್ಯ ಸರ್ಕಾರವು ಬಿಡುಗಡೆ ಮಾಡುವ ಅನುದಾನವನ್ನು ಯಾವ ಪಾಲಿಕೆಗೆ ಎಷ್ಟು ಹಂಚಿಕೆ ಮಾಡಬೇಕೆಂಬುದನ್ನು ಬೆಂಗಳೂರು ಪ್ರಾಧಿಕಾರ ನಿರ್ಧರಿಸಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಸ್ತೀರ್ಣಗೊಂಡರೆ ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ಅನೇಕ ಹೊರವಲಯದ ಪ್ರದೇಶಗಳು ಜಿಬಿಎ ವ್ಯಾಪ್ತಿಗೆ ಒಳಪಡಲಿವೆ.
ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್ ಗಳಿದ್ದು, ಸಧ್ಯ 225ಕ್ಕೆ ಹೆಚ್ಚಿಸಲಾಗಿದೆ. ಸ್ಥಾಯಿ ಸಮಿತಿಗಳನ್ನು ರದ್ದುಗೊಳಿಸಿ ಮೇಯರ್ ಇನ್ ಕೌನ್ಸಿಲ್ ಚುನಾವಣೆ ನಡೆಸಲು ಶಿಫಾರಸ್ಸು ಮಾಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಬೆಂಗಳೂರು ಉಸ್ತುವಾರಿ ಹೊಂದಿರುವ ಸಚಿವರು ಮತ್ತು ಇತರ ನಾಲ್ವರು ಸಚಿವರು ಉಪಾಧ್ಯಕ್ಷರಾಗಿರಲಿದ್ದಾರೆ. ಬೆಂಗಳೂರು ನಗರದ ಎಲ್ಲ ಶಾಸಕರು ಮತ್ತು ಬಿಡಿಎ, ಜಲ ಮಂಡಳಿ, ಮೆಟ್ರೋ ನಿಗಮ, ಬಿಎಂಟಿಸಿ ಮುಖ್ಯಸ್ಥರೂ ಪ್ರಾಧಿಕಾರದ ಭಾಗವಾಗಿರಲಿದ್ದಾರೆ.
ಮೇಲಿನ ಯಾವುದೇ ಸ್ವಾಯತ್ತ ಸಂಸ್ಥೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಪ್ರಾಧಿಕಾರವುಕಾರ್ಯ ನಿರ್ವಹಿಸಲಿದೆ. ಪ್ರಾಧಿಕಾರವು ಪಾಲಿಕೆಗಳನ್ನು ಆಳುವುದಿಲ್ಲ, ಬದಲಾಗಿ ಇಡೀ ಬೆಂಗಳೂರು ವ್ಯಾಪ್ತಿಯ ನಿರ್ಧಾರಗಳನ್ನು ಕೈಗೊಳ್ಳಲಿದೆ. ಅಂದರೆ ರಸ್ತೆ, ರಾಜಕಾಲುವೆ ಮೊದಲಾದ ವಿಷಯಗಳನ್ನು ನಿರ್ವಹಿಸಲಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.
ವರದಿ: ಎಚ್.ಮಾರುತಿ, ಬೆಂಗಳೂರು

ವಿಭಾಗ