Bangalore News: ಬೆಂಗಳೂರಿಗೆ ಅತಿಥಿ ಉಪನ್ಯಾಸಕರ ಪಾದಯಾತ್ರೆ: ಕುಸಿದು ಬಿದ್ದ ಉಪನ್ಯಾಸಕಿ, ಭರವಸೆ ಮರೆತ ಕಾಂಗ್ರೆಸ್ ವಿರುದ್ದ ಆಕ್ರೋಶ
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದ ಅತಿಥಿ ಉಪನ್ಯಾಸಕರು ಬೆಂಗಳೂರು ಚಲೋ ಪಾದಯಾತ್ರೆ ಆರಂಭಿಸಿದ್ದು, ಬುಧವಾರ ಸಂಜೆ ಬೆಂಗಳೂರು ತಲುಪಿದ್ದಾರೆ. ಗುರುವಾರ ವಿಧಾನಸೌಧವರೆಗೂ ಮೆರವಣಿಗೆ ನಡೆಸಲು ಉದ್ದೇಶಿಸಿದ್ದಾರೆ.
ಬೆಂಗಳೂರು:ಸೇವಾಭದ್ರತೆ, 12 ತಿಂಗಳ ವೇತನ, ಉಪನ್ಯಾಸಕಿಯರಿಗೆ ವೇತನ ಸಹಿತ ಹೆರಿಗೆ ರಜೆ ಖಾಸಗಿ ನೌಕರರಿಗೆ ಸಿಗುವಂತೆ ಉಪನ್ಯಾಸಕರಿಗೂ ಗ್ರಾಚ್ಯುಟಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿರುವ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನೆಲಮಂಗಲದಿಂದ ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದಾರೆ. ಮಂಗಳವಾರ ದಾಬಸ್ ಪೇಟೆ ಪಟ್ಟಣದಿಂದ ಹೊರಟು ನೆಲಮಂಗಲ ತಲುಪಿದ್ದರು. ಅತಿಥಿ ಉಪನ್ಯಾಸಕರು ದಾರಿಯುದ್ದಕ್ಕೂ ಭಿತ್ತಿಪತ್ರಗಳನ್ನು ಹಿಡಿದು ಸಾಗಿದರು. ಓರ್ವ ಉಪನ್ಯಾಸಕಿ ಅನಾರೋಗ್ಯದಿಂದ ಕುಸಿದು ಬಿದ್ದ ಘಟನೆಯೂ ನಡೆದಿದೆ.
ವಿಶೇಷ ಚೇತನ ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿ ಗಮನ ಸೆಳೆಯುತ್ತಿದೆ. ನಮ್ಮದು ಹಸಿವಿನ ಹೋರಾಟವಾಗಿದ್ದು ಕಾಯಂಗೊಳಿಸಬೇಕು. ಸರ್ಕಾರದಿಂದ ಸ್ಪಷ್ಟ ಭರವಸೆ ಸಿಗುವವರೆಗೂ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತ ಗೌಡ ಕಲ್ಮನಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.\
ಉಪನ್ಯಾಸಕರ ಆಕ್ರೋಶ
ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಉಪನ್ಯಾಸಕರನ್ನು ಬೆದರಿಸಲಾಗುತ್ತಿದೆ. ಇಂತಹ ಒತ್ತಡಕ್ಕೆ ನಾವು ಮಣಿಯುವುದಿಲ್ಲ. ಕೆಲಸದಿಂದ ತೆಗೆದು ನಿರುದ್ಯೋಗ ಭಾಗ್ಯ ಕರುಣಿಸುತ್ತೀರಾ ಎಂದು ಅವರು ಪ್ರಶ್ನಿಸುತ್ತಾರೆ.
ರಾಜ್ಯದ 440 ಸರ್ಕಾರಿ ಪದವಿ ಕಾಲೇಜುಗಳಲ್ಲಿ 14,183 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉದ್ಯೋಗ ಕಾಯಂ ಆಗಬಹುದೆನ್ನುವ ನಿರೀಕ್ಷೆಯಲ್ಲಿ 20 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಕಳೆದ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು, ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದಾರೆ. ಆದರೂ ಕಾಯಂಗೊಳಿಸಲು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಶ್ನಿಸುತ್ತಾರೆ.
ಬೇಡಿಕೆಗಳು ಹಲವು
ಖಾಸಗಿ ನೌಕರರಿಗೆ ಸಿಗುವಂತೆ ಉಪನ್ಯಾಸಕರಿಗೂ ಗ್ರಾಚ್ಯುಟಿ, ವಯೋಸಹಜ ನಿವೃತ್ತಿವರೆಗೂ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆಗೆದು ಹಾಕುವುದಿಲ್ಲ ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಮುಷ್ಕರ ಆರಂಭವಾಗಿ ತಿಂಗಳು ಕಳೆದಿದ್ದರೂ ಉಪನ್ಯಾಸಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ.
ಸರ್ಕಾರಿ ಪದವಿ ಕಾಲೇಜುಗಳು ಬಹುತೇಕ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಈಗ ಅವರೆಲ್ಲರೂ ತರಗತಿಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ತೊಡಗಿರುವುದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ ಮತ್ತು ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಿದ್ದಾರೆ. ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ದಶಕಗಳಿಂದ ಅವರ ಬೇಡಿಕೆಗಳು ನನೆಗುದಿಗೆ ಬಿದ್ದಿವೆ.
ಭರವಸೆ ಮರೆತ ಕಾಂಗ್ರೆಸ್
ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸುವುದಾಗಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಆ ಭರವಸೆಯನ್ನು ಈಡೇರಿಸಿ ಎಂದು ಅತಿಥಿ ಉಪನ್ಯಾಸಕರು ಈಗ ಒತ್ತಾಯಿಸುತ್ತಿದ್ದಾರೆ.
ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಬೋಧಕರಲ್ಲಿ ಶೇಕಡ 70ರಷ್ಟು ಅತಿಥಿ ಉಪನ್ಯಾಸಕರೇ ಇದ್ದಾರೆ. ಅತ್ಯಂತ ಕಡಿಮೆ ಸಂಭಾವನೆ ಪಡೆದು ಮಕ್ಕಳಿಗೆ ಭೋದನೆ ಮಾಡುತ್ತಿದ್ದಾರೆ. ಇವರಲ್ಲಿ ಪಿಎಚ್.ಡಿ ಎಂ ಫಿಲ್ ಪಡೆದವರೂ ಇದ್ದಾರೆ. ಆದರೂ ಉದ್ಯೋಗ ಭದ್ರತೆಯಿಲ್ಲದೆ ಕಾರ್ಯನಿರ್ವಹಿಸಬೇಕಾಗಿದೆ.
ಹೊಸ ಕಾಲೇಜು ಮತ್ತು ಜಿಲ್ಲೆಗೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರ ಆಸಕ್ತಿ ತೋರುತ್ತದೆ. ಆದರೆ ಉಪನ್ಯಾಸಕರ ಬೇಡಿಕೆಗಳತ್ತ ಆಸಕ್ತಿ ತೋರುವುದಿಲ್ಲ ಎಂದು ಅವರು ಆಪಾದಿಸುತ್ತಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)
ವಿಭಾಗ