ಕನ್ನಡ ಸುದ್ದಿ  /  ಕರ್ನಾಟಕ  /  Hajj Pilgrimage: ಹಜ್‌ ಯಾತ್ರೆ ವೇಳೆ ಸಾವಿರಕ್ಕೂ ಅಧಿಕ ಮಂದಿ ದುರ್ಮರಣ, ಬೆಂಗಳೂರಿನ ಇಬ್ಬರು ಸೇರಿ ಕರ್ನಾಟಕದ ನಾಲ್ವರ ಸಾವು

Hajj Pilgrimage: ಹಜ್‌ ಯಾತ್ರೆ ವೇಳೆ ಸಾವಿರಕ್ಕೂ ಅಧಿಕ ಮಂದಿ ದುರ್ಮರಣ, ಬೆಂಗಳೂರಿನ ಇಬ್ಬರು ಸೇರಿ ಕರ್ನಾಟಕದ ನಾಲ್ವರ ಸಾವು

Hajj News ಈ ಬಾರಿಯ ಹಜ್‌ ಯಾತ್ರೆ ಭಾರೀ ಬಿಸಿಲಿನಿಂದ ಅಡ್ಡಿಯಾಗಿದೆ. ಈವರೆಗೂ ಒಂದು ಸಾವಿರಕ್ಕೂ ಅಧಿಕ ಮಂದಿ ಬಿಸಿಲಿನಿಂದ ಮೃತಪಟ್ಟಿದ್ದಾರೆ.

ಹಜ್‌ನಲ್ಲಿ ಪವಿತ್ರ ಸ್ಥಳ ಕ್ಕೆ ಭೇಟಿ ನೀಡಿರುವ ಜನಸ್ತೋಮ
ಹಜ್‌ನಲ್ಲಿ ಪವಿತ್ರ ಸ್ಥಳ ಕ್ಕೆ ಭೇಟಿ ನೀಡಿರುವ ಜನಸ್ತೋಮ

ಬೆಂಗಳೂರು: ಸೌದಿ ಅರೇಬಿಯಾಗೆ ಹಜ್‌ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ಇಬ್ಬರು ಸೇರಿದಂತೆ ರಾಜ್ಯದ ನಾಲ್ವರು ಬಿಸಿಗಾಳಿಯ ತೀವ್ರತೆಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮುಸಲ್ಮಾನರಪವಿತ್ರ ಯಾತ್ರಾಸ್ತಳ ಮೆಕ್ಕಾದಲ್ಲಿ ಉಷ್ಣತೆ 52 ಡಿಗ್ರಿ ಸೆಲ್ಷಿಯಸ್‌ ದಾಟಿದ್ದು, ಕನಿಷ್ಠ 992 ಹಜ್‌ ಯಾತ್ರಿಗಳು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಫ್ರೇಸರ್‌ ಟೌನ್‌ ನಿವಾಸಿ 50 ವರ್ಷದ ಮಹಮದ್‌ ಇಲ್ಯಾಸ್ ಮತ್ತು ಆರ್.ಟಿ.ನಗರದ 69 ವರ್ಷದ ಕೌಸರ್‌ ರುಕ್ಸಾನಾ ಮೆಕ್ಕಾದಿಂದ 8 ಕಿಮೀ ದೂರದಲ್ಲಿರುವ ಮೀನಾ ಎಂಬ ಪಟ್ಟಣದಲ್ಲಿ ಮೃತಪಟ್ಟಿರುವುದು ಖಚಿತವಾಗಿದೆ.

ಬೆಂಗಳೂರಿನ ಇಬ್ಬರು ಮೀನಾ ಎಂಬಲ್ಲಿ ಕೆಲವು ಧಾರ್ಮಿಕ ಆಚರಣೆಗಳಲ್ಲಿ ತೊಡಗಿದ್ದಾಗ ಅತಿಯಾದ ಉಷ್ಣತೆಗೆ ಬಲಿಯಾಗಿದ್ದಾರೆ. ಅತಿಯಾದ ಉಷ್ಣತೆ ಇರುವಾಗ 3 ಕಿಮೀ ನಡೆಯುವುದು ಸುಲಭದ ಮಾತಲ್ಲ. ಈ ಹಜ್‌ ಯಾತ್ರಿಗಳು ತಾವು ಉಳಿದುಕೊಂಡಿದ್ದ ಹೋಟೆಲ್‌ ನಿಂದ ಮೀನಾಗೆ ತೆರಳಲು ಬಸ್‌ ಲಭ್ಯವಾಗಿರಲಿಲ್ಲ. ಆದಷ್ಟೂ ಬೇಗನೆ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಲು ನಡೆದುಕೊಂಡೇ ಹೋಗಲು ತೀರ್ಮಾನಿಸಿದ್ದರು. ಸೌದಿ ಆಡಳಿತವೂ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಕೊಠಡಿಗಳಿಂದ ಹೊರಗೆ ಬಾರದಂತೆ ಸಲಹೆ ನೀಡಿದೆ ಎಂದು ಕರ್ನಾಟಕ ರಾಜ್ಯ ಹಜ್‌ ಸಮಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸರ್ಫ್‌ ರಾಜ್‌ ಸರ್ದಾರ್‌ ಅವರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಜ್‌ ಸಮಿತಿ ಆಶ್ರಯದಲ್ಲಿ ಈ ವರ್ಷ ಬೆಂಗಳೂರಿನಿಂದ 7000 ಮಂದಿ ಸೇರಿದಂತೆ ರಾಜ್ಯದಿಂದ 10,300 ಮಂದಿ ಹಜ್‌ ಯಾತ್ರೆಗೆ ತೆರಳಿದ್ದಾರೆ. ಇವರಲ್ಲದೆ ತಮ್ಮದೇ ಸ್ವಂತ ವ್ಯವಸ್ಥೆಯಲ್ಲಿ ಖಾಸಗಿ ಆಯೋಜಕರ ಮೂಲಕ ಸಾವಿರಾರು ಮಂದಿ ಹಜ್‌ ಯಾತ್ರೆಗೆ ತೆರಳಿದ್ದಾರೆ.

ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳ ಒಪ್ಪಂದದ ಪ್ರಕಾರ ಜನಾತ್-ಬಖಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ ಎಂದು ಸರ್ದಾರ್‌ ತಿಳಿಸಿದ್ದಾರೆ. ರಾಜ್ಯದ ಉಳಿದ ಹಜ್‌ ಯಾತ್ರಿಗಳನ್ನು ಸುರಕ್ಷಿತವಾಗಿ ಕರೆ ತರಲು ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿಗಳಿಗೆ ಸಚಿವರಾದ ಜಮೀರ್‌ ಅಹಮದ್‌ ಖಾನ್‌ ಮತ್ತು ರಹೀಂ ಖಾನ್‌ ಅವರು ಮಾತನಾಡಲಿದ್ದಾರೆ ಎಂದೂ ತಿಳಿದು ಬಂದಿದೆ.

ಅತಿಯಾದ ಉಷ್ಣತೆ, ಹವಾಮಾನ ವೈಪರೀತ್ಯ ಮತ್ತು ಕಳಪೆ ವ್ಯವಸ್ಥೆಗಳ ಕಾರಣಕ್ಕೆ ಹಜ್‌ ಯಾತ್ರೆಯಲ್ಲಿ ಸಾವುಗಳು ಸಂಭವಿಸುವುದು ಸಾಮಾನ್ಯ. ಅತಿಯಾದ ಬಿಸಿಲಿನಲ್ಲಿ ನಡೆದಾಡುವುದು ಕಷ್ಟದ ಕೆಲಸ. ಅದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿರಬೇಕು. ಜತೆಯಲ್ಲಿ ಸಾಕಷ್ಟು ಕುಡಿಯುವ ನೀರು ಇಟ್ಟುಕೊಡಿರಬೇಕು. ಸೂರ್ಯನ ಶಾಖ ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ಈಗಾಗಲೇ ಹಜ್‌ ಯಾತ್ರೆ ಮುಗಿಸಿ ಬಂದಿರುವವರು ಅಭಿಪ್ರಾಯಪಡುತ್ಥಾರೆ.

ಎಲ್ಲಾ ಕಡೆ ವ್ಯವಸ್ಥೆಗಳು ಸರಿಯಾಗಿ ಇರುವುದಿಲ್ಲ. ಟೆಂಟ್‌ ಗಳು ಸಾಕಾಗುವುದಿಲ್ಲ.ಇಲ್ಲವೇ ಚಿಕ್ಕದಾಗಿರುತ್ತವೆ. ಶೌಚಾಲಯಗಳನ್ನು ಹಲವು ದಿನಗಳ ಕಾಲ ಸ್ವಚ್ಛಗೊಳಿಸುವುದೇ ಇಲ್ಲ. ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುತ್ತದೆ ಎಂದೂ ಅವರು ಹೇಳುತ್ತಾರೆ.

ಶೇ.ನೂರರಷ್ಟು ವ್ಯವಸ್ಥೆಗಳನ್ನು ಕಲ್ಪಿಸುವುದು ಅಸಾಧ್ಯ. ವಿಶ್ವದಾದ್ಯಂತ ಹಜ್‌ ಯಾತ್ರೆಗಾಗಿ ಮುಸಲ್ಮಾನ ಬಾಂಧವರು ಆಗಮಿಸುತ್ತಾರೆ. ಅತಿಯಾದ ಜನಸಂದಣಿ ಉಂಟಾಗುತ್ತದೆ. ಬಸ್‌ ಮತ್ತು ರೈಲುಗಳಿಗಾಗಿ ಲಕ್ಷಾಂತರ ಮಂದಿ ಕಾಯುತ್ತಿರುವ ದೃಶ್ಯಗಳನ್ನು ಮೀನಾ ಮೊದಲಾದ ಪಟ್ಟಣಗಳಲ್ಲಿ ಕಾಣಬಹುದಾಗಿದೆ. ಅನೇಕ ಯಾತ್ರಿಗಳು ರಸ್ತೆಗಳಲ್ಲೇ ಕುಸಿದು ಬಿದ್ದು ಮೃತಪಡುತ್ತಿರುವುದು ನಿಜ ಎಂದೂ ಅವರು ಹೇಳುತ್ತಾರೆ.

ಈ ವರ್ಷ 1.8 ದಶಲಕ್ಷ ಮುಸಲ್ಮಾನರು ಹಜ್‌ ಯಾತ್ರೆ ಕೈಗೊಂಡಿದ್ದಾರೆ. ಇವರಲ್ಲಿ 1.6 ದಶಲಕ್ಷ ಯಾತ್ರಿಗಳು ವಿದೇಶಿಯರು ಎಂದು ತಿಳಿದು ಬಂದಿದೆ. ಆಂಬುಲೆನ್ಸ್‌ ಸೇರಿದಂತೆ ಎಲ್ಲ ಆರೋಗ್ಯ ರಕ್ಷಣೆಯ ಕ್ರಮಗಳನ್ನು ಕೈಗೊಂಡಿದ್ದರೂ ಈ ಪ್ರಮಾಣದ ಜನಸಂಖ್ಯೆಗೆ ಆರೋಗ್ಯ ಸೇವೆಗಳನ್ನು ಒದಗಿಸುವುದು ಸುಲಭದ ಮಾತಲ್ಲ. ಎಲ್ಲ ಹೋಟೆಲ್‌ ಗಳಲ್ಲೂ ಹವಾನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಯಾತ್ರಿಗಳು ಆಗಾಗ್ಗೆ ತಲೆಯ ಮೇಲೆ ನೀರು ಸುರಿದುಕೊಳ್ಳುತ್ತಿರಬೇಕು. ಸ್ವಯಂಸೇವಕರು ಐಸ್‌ ಕ್ರೀಂ ಒದಗಿಸುತ್ತಾರೆ. ಆದರೂ ಇದರಿಂದ ಬಿಸಿಲಿನ ಬೇಗೆಯಿಂದ ಪಾರಾಗುವುದು ಸುಲಭವಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

(ವರದಿ: ಎಚ್.ಮಾರುತಿ, ಬೆಂಗಳೂರು)