ಕನ್ನಡ ಸುದ್ದಿ  /  Karnataka  /  Bangalore News Hanuman Chalisa Issue In Bangalore 3 Arrested Bjp Protest Lead By Suresh Kumar Shobha Karandlaje Mrt

Bangalore News: ಹನುಮಾನ್ ಚಾಲೀಸ ಪ್ರಕರಣ, ಬೆಂಗಳೂರಿನ ನಗರ್ತ ಪೇಟೆ ಉದ್ವಿಗ್ನ, ಮೂವರ ಬಂಧನ, ಪ್ರತಿಭಟನೆಗೆ ಮುಂದಾದ ಬಿಜೆಪಿ

ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ ಚಾಲೀಸ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಬಿಜೆಪಿ ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್‌ ಚಾಲೀಸ ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್‌ ಚಾಲೀಸ ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ಬೆಂಗಳೂರು: ಬೆಂಗಳೂರಿನ ನಗರ್ತಪೇಟೆ ಸಿದ್ದಣ್ಣ ಗಲ್ಲಿಯ ಜುಮ್ಮಾ ಮಸೀದಿ ರಸ್ತೆಯಲ್ಲಿ ಮೊಬೈಲ್ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸ ಭಕ್ತಿ ಗೀತೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಬಿಗಡಾಯಿಸಿದೆ. ಲೋಕಸಭೆ ಚುನಾವಣೆಯೂ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರದಲ್ಲಿ 144 ಸೆಕ್ಷೆನ್‌ ಅನ್ನು ಜಾರಿಗೊಳಿಸಿರುವುದಾಗಿ ತಿಳಿದು ಬಂದಿದೆ.

ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರುತ್ತಿದ್ದಾರೆ.

ಮತ್ತೊಂದು ಕಡೆ ಪೊಲೀಸರು ಮೊಬೈಲ್ ಅಂಗಡಿ ಮಾಲೀಕ ಮುಕೇಶ್ ಅವರನ್ನು ಕರೆದೊಯ್ಯಲು ಪ್ರಯತ್ನ ನಡೆಸಿದಾಗ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.

ಶಾಸಕ ಎಸ್.ಸುರೇಶ್ ಕುಮಾರ್ ಅವರು ಪೊಲೀಸರ ಜೀಪನ್ನು ಅಡ್ಡಗಟ್ಟಿದಾಗ ಮಾತಿನ ಚಕಮಕಿ ನಡೆದಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ವಿದ್ದು ಪೊಲೀಸರು ಬಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ನಗರ್ತಪೇಟೆಯಲ್ಲಿ ಬಹುತೇಕ ಅಂಗಡಿಗಳನ್ನು ಮುಚ್ಚಲಾಗಿದ್ದು, ಬಿಜೆಪಿ ನೇತೃತ್ವದಲ್ಲಿ ಸ್ಥಳೀಯ ವ್ಯಾಪಾರಿಗಳು ರ‍್ಯಾಲಿ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಘಟನೆಗೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಪಡಿಸಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಬೈಲ್ ಅಂಗಡಿ ಮಾಲೀಕ ಮುಕೇಶ್ ಜಿ ಸಿಂಗ್ ನೀಡಿದ ದೂರನ್ನು ಆಧರಿಸಿ ಪೊಲೀಸರು ಕಬ್ಬನ್ ಪೇಟೆ ನಿವಾಸಿಗಳಾದ ಸುಲೇಮಾನ್, ಶಹನವಾಜ್ ಮತ್ತು ರೋಹಿತ್ ಅವರನ್ನು ಬಂಧಿಸಿದ್ದಾರೆ. ಇವರ ವಿರುದ್ದ ಕೊಲೆ ಪ್ರಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ಯಾನಿಶ್, ತರುಣ್ ಎಂಬುವರು ಪರಾರಿಯಾಗಿದ್ದಾರೆ.

ಏನಿದು ಪ್ರಕರಣ?

ಹನುಮಾನ್ ಚಾಲೀಸ ಭಕ್ತಿಗೀತೆಯನ್ನು ತನ್ನ ಅಂಗಡಿಯಲ್ಲಿ ಹಾಕಿಕೊಂಡಿದ್ದಕ್ಕೆ ಅನ್ಯ ಕೋಮಿನ ಯುವಕರ ಗುಂಪೊಂದು ಅಂಗಡಿ ಮಾಲೀಕ ಮುಕೇಶ್ ಅವರ ಮೇಲೆ ಹಲ್ಲೆ ನಡೆಸಿತ್ತು. ನಮಾಜ್ ಸಂದರ್ಭದಲ್ಲಿ ಇಂತಹ ಹಾಡುಗಳನ್ನು ಏಕೆ ಪ್ಲೇ ಮಾಡುತ್ತೀರಿ ಎಂದು ಈ ಗುಂಪು ಪ್ರಶ್ನಿಸಿದೆ. ಮಾತಿನ ಚಕಮಕಿ ನಡೆದು ಹಿಂಸಾಚಾರಕ್ಕೆ ತಿರುಗಿದೆ. ಆಗ ಈ ಗುಂಪು ಮುಕೇಶ್ ಅವರ ತಲೆಗೆ ಸ್ಪೀಕರ್ ನಿಂದ ಹೊಡೆದಿದೆ.

ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ. ನಂತರ ಒತ್ತಡ ಹೆಚ್ಚಿದ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಬಿಜೆಪಿ ನಾಯಕರು ನಗರ್ತ ಪೇಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ ಕಾಂಗ್ರೆಸ್ ಹನುಮಾನ್ ಚಾಲೀಸ ಗೀತೆ ಹಾಕಿದ್ದಕ್ಕೂ ಈ ಘಟನೆಗೂ ಸಂಬಂಧ ಇಲ್ಲ ಎಂದು ಹೇಳುತ್ತಿದೆ.

(ವರದಿ: ಎಚ್ . ಮಾರುತಿ, ಬೆಂಗಳೂರು)