ಬೆಂಗಳೂರು ಜನತೆಗೆ ದಸರಾ ಸಿಹಿ ಸುದ್ದಿ; ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆಗೆ ಅಕ್ಟೋಬರ್ 16 ರಂದು ಮಂಡ್ಯದ ಟಿಕೆಹಳ್ಳಿಯಲ್ಲಿ ಲೋಕಾರ್ಪಣೆ
Cauvery Water to Bangalore: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳು ಹಾಗೂ ಬೆಂಗಳೂರಿನ ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳ್ಳಲಿದೆ.

ಬೆಂಗಳೂರು: ದಸರಾ ಆಚರಿಸುತ್ತಿರುವ ಬೆಂಗಳೂರು ಜನತೆಗೆ ಇದು ಸಿಹಿ ಸುದ್ದಿ. ಹಲವಾರು ವರ್ಷಗಳಿಂದ ಬೆಂಗಳೂರಿನ ಕೆಲವು ಭಾಗಗಳ ಜನತೆ ಕಾವೇರಿ ನೀರಿಗಾಗಿ ಕಾಯುವುದು ನಿಂತಿರಲಿಲ್ಲ. ಹಲವಾರು ಸರ್ಕಾರಗಳು ಬದಲಾದರೂ ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿತ್ತು. ಈಗ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಡಿಸಿಎ ಡಿ.ಕೆ.ಶಿವಕುಮಾರ್ ಅವರ ಪ್ರಯತ್ನದ ಫಲವಾಗಿ ಕಾವೇರಿ 5ನೇ ಹಂತದ ಯೋಜನೆ ಜಾರಿಯಾಗುವ ಸಮಯ ಬಂದಿದೆ. ಏಷ್ಯಾದ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆ ಎಂದು ಗುರುತಿಸಿಕೊಂಡಿರುವ ಕಾವೇರಿ 5ನೇ ಹಂತದ ಯೋಜನೆಯಿದು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ. ಕೆ. ಹಳ್ಳಿ ) ಯಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆವರಣದಲ್ಲಿ ಅಕ್ಟೋಬರ್ 16 ರ ಬುಧವಾರ ದಂದು ಬೆಳಿಗ್ಗೆ 10.30 ಗಂಟೆಗೆ ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಏನಿದು ಯೋಜನೆ
775 ಎಂ. ಎಲ್. ಡಿ ಹೆಚ್ಚುವರಿ ನೀರು ಪೂರೈಕೆ, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ವಲಯದ ಮನೆ ಮನೆಗೂ ಕಾವೇರಿ ನೀರು ಪೂರೈಕೆಯಾಗಲಿದೆ.
ಮನೆ ಮನೆಗೂ ಕಾವೇರಿ ನೀರು ಇದು ಸಮೃದ್ಧ ಬೆಂಗಳೂರು ಎನ್ನುವ ಘೋಷಣೆಯೊಂದಿಗೆ ಕಾವೇರಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ 50 ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಲಿದೆ.
ಕಾವೇರಿ 5ನೇ ಹಂತದ ಯೋಜನೆಯಿಂದಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಬೆಂಗಳೂರಿನಲ್ಲಿ 4 ಲಕ್ಷ ನೀರಿನ ಸಂಪರ್ಕ ಗುರಿಯನ್ನು ಇಟ್ಟುಕೊಂಡಿದೆ. ಈ ಯೋಜನೆಗೆ 4336 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಗಣ್ಯರ ಭಾಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಜಲಸಂಪನ್ಮೂಲ ಸಚಿವರು, ಉಪಮುಖ್ಯಮಂತ್ರಿಗಳು ಆದಾ ಡಿ.ಕೆ ಶಿವಕುಮಾರ್ ಅವರು ಅಕ್ಟೋಬರ್ 16 ರಂದು ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್. ಡಿ. ಕುಮಾರಸ್ವಾಮಿ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ರವರು ಭಾಗವಹಿಸಲಿದ್ದಾರೆ. ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ
ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಸಾರಿಗೆ ಮತ್ತು ಮುಜರಾಯಿ ಸಚಿವ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ. ಜಾರ್ಜ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ವಸತಿ ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರು ಸುರೇಶ್ ಬಿ.ಎಸ್.(ಭೈರತಿ ) ಹಾಗೂ ಇನ್ನಿತರ ಸಚಿವರು ,ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.