ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಹಾಸನ ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣ: ಭವಾನಿಗೆ ಜಾಮೀನು, ಪ್ರಜ್ವಲ್‌ಗೆ ಜೈಲು

Hassan Scandal: ಹಾಸನ ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣ: ಭವಾನಿಗೆ ಜಾಮೀನು, ಪ್ರಜ್ವಲ್‌ಗೆ ಜೈಲು

Prajwal Revanna ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜೈಲು ಸೇರಿದ್ದರೆ, ಅವರ ತಾಯಿ ಭವಾನಿ ರೇವಣ್ಣ( Bhavani Revanna) ಅವರಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ನೀಡಿದೆ.ವರದಿ: ಎಚ್.ಮಾರುತಿ, ಬೆಂಗಳೂರು

ಹಾಸನ ಪ್ರಕರಣದಲ್ಲಿ ಪ್ರಜ್ವಲ್‌ ಜೈಲು ಸೇರಿದರೆ, ಭವಾನಿ ರೇವಣ್ಣಗೆ ಜಾಮೀನು ಸಿಕ್ಕಿದೆ.
ಹಾಸನ ಪ್ರಕರಣದಲ್ಲಿ ಪ್ರಜ್ವಲ್‌ ಜೈಲು ಸೇರಿದರೆ, ಭವಾನಿ ರೇವಣ್ಣಗೆ ಜಾಮೀನು ಸಿಕ್ಕಿದೆ.

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು 14 ದಿನಗಳ ಕಾಲ 42 ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ. ಇದೇ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿರುವ ಆರೋಪ ಹೊತ್ತಿರುವ ಪ್ರಜ್ವಲ್‌ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಒಂದೇ ಪ್ರಕರಣದಲ್ಲಿ ತಾಯಿಗೆ ಸಂತೋಷ ತರುವ ಸಂಗತಿಯಾಗಿದ್ದರೆ ಮಗನಿಗೆ ದುಃಖ ತರುವ ಸುದ್ದಿ ಇದಾಗಿದೆ. 33 ವರ್ಷದ ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಲಯದ ತೀರ್ಮಾನದಂತೆ ಪ್ರಜ್ವಲ್ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ. ‌

ಪ್ರಜ್ವಲ್‌ ಅವರ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಎಸ್‌ ಐಟಿ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ನ್ಯಾಯಾದೀಶರ ಎದುರು ಪ್ರಜ್ವಲ್‌ ಈಗಾಗಲೇ ಎರಡು ಬಾರಿ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದೇನೆ. ಮತ್ತೆ ಅದೇ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಎಸ್‌ ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆಗ ಈ ಬಗ್ಗೆ ಪರಿಶೀಲಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ಅವರನ್ನು ಜೂನ್‌ 10ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.ಜರ್ಮನಿಯಿಂದ ಹಿಂತಿರುಗಿದ ಇವರನ್ನು ಮೇ 31 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹಾಸನದಲ್ಲಿ ಮತದಾನ ನಡೆದ ಮರುದಿನ ಏಪ್ರಿಲ್‌ 27ರಂದು ಪ್ರಜ್ವಲ್‌ ಜರ್ಮನಿಗೆ ತೆರಳಿದ್ದರು. ಚುನಾವಣೆಯಲ್ಲೂ ಅವರು ಪರಾಭವಗೊಂಡಿದ್ದರು.

ಇತ್ತ ಹೈಕೋರ್ಟ್‌ ನಲ್ಲಿ ಭವಾನಿ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯಿತು. ಭವಾನಿ ರೇವಣ್ಣ ಪ್ರಕರಣದ ವಿಚಾರಣೆ ನಡೆಸಿದ ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕ ಸದಸ್ಯ ಪೀಠ ಇಂದು ತೀರ್ಪನ್ನು ಪ್ರಕಟಿಸಿದರು.

ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಭವಾನಿ ರೇವಣ್ಣ ಅವರನ್ನು ಅನಾವಶ್ಯಕವಾಗಿ ವಶಕ್ಕೆ ಪಡೆಯುವ ಅಗತ್ಯವಿಲ್ಲ. ಆದರೂ ಅವರನ್ನು ಮೈಸೂರು ಹಾಸನ ಸೇರಿದಂತೆ ಎಲ್ಲಿಗೆ ಬೇಕಾದರೂ ತನಿಖೆಗೆ ಕರೆದೊಯ್ಯಬಹುದು. ಸಹಕಾರ ನೀಡುವುದಾಗಿ ಅವರೂ ಈಗಾಗಲೇ ಭರವಸೆ ನೀಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಅವರಿಗೆ 87 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಹೀಗೆಯೇ ಉತ್ತರ ನೀಡಬೇಕು ಏಂದು ಹೇಳಲು ಸಾಧ್ಯವಿಲ್ಲ ಎಂದೂ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಶ್ರೀ ಸಾಮಾನ್ಯರು ಮಾಧ್ಯಮಗಳನ್ನು ವೀಕ್ಷಿಸಿ ಚರ್ಚೆ ನಡೆಸುತ್ತಾರೆ. ಆದರೆ ನ್ಯಾಯಾಲಯಗಳು ಮಾಧ್ಯಮಗಳ ವರದಿಗಳ ಆಧಾರದಲ್ಲಿ ಆದೇಶ ನೀಡಲು ಬರುವುದಿಲ್ಲ. ನಾಗರೀಕ ಸಮಾಜ ಸಂಯಮ ಹೊಂದಿರಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪೊಂದರ ಸಾಲುಗಳನ್ನು ಉಲ್ಲೇಖಿಸಿದರು.

ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಹೀಗೆ ದಾಖಲಾದ ಪ್ರಕರಣವೊಂದರ ಸಂತ್ರಸ್ತೆಯೊಬ್ಬರನ್ನು ಅಪಹರಿಸಿದ ಆರೋಪವನ್ನು ಭವಾನಿ ರೇವಣ್ಣ ಎದುರಿಸುತ್ತಿದ್ದಾರೆ. ಅಪಹರಣದ ಪ್ರಕರಣಕ್ಕೆ ಸಂಬಂಧಿಸದಂತೆ ಎಚ್.ಡಿ.ರೇವಣ್ಣ ಅವರು ಮೊದಲ ಆರೋಪಿಯಾಗಿದ್ದು, ಅವರನ್ನು ಬಂಧಿಸಲಾಗಿತ್ತು. ನಂತರ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಈ ಪ್ರಕರಣದಲ್ಲಿ ಭವಾನಿ ಅವರ ಹೆಸರೂ ಕೇಳಿ ಬಂದಿದ್ದು, ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೇ ತಿಂಗಳ 7 ರಂದು ಹೈಕೋರ್ಟ್‌ ನ ಜನಪ್ರತಿನಿಧಿಗಳ ವಿಶೇಷ ನ್ಯಾಯಪೀಠ ಮಧ್ಯಂತರ ಜಾಮೀನು ನೀಡಿತ್ತು.

(ವರದಿ: ಎಚ್.ಮಾರುತಿ, ಬೆಂಗಳೂರು)