ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಪ್ರಜ್ವಲ್‌ ರೇವಣ್ಣ ಪಾಸ್‌ ಪೋರ್ಟ್‌ ರದ್ದುಪಡಿಸಿ, ವಿದೇಶದಿಂದ ಕರೆಸಿ: ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

Hassan Scandal: ಪ್ರಜ್ವಲ್‌ ರೇವಣ್ಣ ಪಾಸ್‌ ಪೋರ್ಟ್‌ ರದ್ದುಪಡಿಸಿ, ವಿದೇಶದಿಂದ ಕರೆಸಿ: ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಲೈಂಗಿಕ ದೌರ್ಜನ್ಯ ಪ್ರಕರಣದಡಿ ಸಿಲುಕಿ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಕರೆ ತರಲು ಸಹಕರಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ವಿದೇಶದಲ್ಲಿರುವ ಪ್ರಜ್ವಲ್‌  ಕರೆತರುವಂತೆ ಮೋದಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ವಿದೇಶದಲ್ಲಿರುವ ಪ್ರಜ್ವಲ್‌ ಕರೆತರುವಂತೆ ಮೋದಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಬೆಂಗಳೂರು: ಹಾಸನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಡಿ ಸಿಲುಕಿ ದೇಶ ಬಿಟ್ಟು ಪರಾರಿಯಾಗಿರುವ ಹಾಸನ ಸಂಸದ ಹಾಗೂ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್‌ ಅನ್ನು ಕೂಡಲೇ ರದ್ದುಪಡಿಸಿ. ಅವರನ್ನು ಕೂಡಲೇ ದೇಶಕ್ಕೆ ಕರೆತರಲು ಅಂತರಾಷ್ಟ್ರೀಯ ಪೊಲೀಸ್‌ ಸಹಕಾರವನ್ನೂ ಪಡೆಯಿರಿ. ಈಗಾಗಲೇ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ( SIT) ಕೂಡ ತನಿಖೆ ಕೈಗೊಂಡಿದ್ದು. ನಿಮಗೆ ತನಿಖೆಯ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪತ್ರದ ವಿವರ

ನರೇಂದ್ರ ಮೋದಿ ಅವರೇ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಅವರು ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಅವರು ಹಾಲಿ ಹಾಸನದ ಸಂಸದ ಹಾಗೂ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯೂ ಹೌದು. ಪ್ರಜ್ವಲ್‌ ರೇವಣ್ಣ ಅವರು ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ರೀತಿ ನಿಜಕ್ಕೂ ಭೀಕರ ಹಾಗೂ ಅಸಹ್ಯಕರವಾಗಿದೆ. ಇದು ಭಾರತದ ಆತ್ಮಸಾಕ್ಷಿಯನ್ನೇ ಪ್ರಶ್ನಿಸುವಂತಹ ಘಟನೆಯಾಗಿದೆ.

ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ಸಿಐಡಿ ಈಗಾಗಲೇ ತನಿಖೆಯನ್ನು ಆರಂಭ ಮಾಡಿದೆ. ಪ್ರಜ್ವಲ್‌ ವಿರುದ್ದ ದೂರು ಕೇಳಿ ಬರುತ್ತಿದ್ದಂತೆ ಪ್ರಕರಣದ ಗಂಭೀರತೆ ಅರಿತು ವಿಶೇಷ ತಂಡ ರಚಿಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಗೊಂಡಿದೆ. ಪ್ರಜ್ವಲ್‌ ಅವರಿಂದ ಅನ್ಯಾಯಕ್ಕೊಳಗಾದ ಮಹಿಳೆಯರು ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ಕೂಡ ದಾಖಲಾಗಿದೆ.

ಆದರೆ ಕೆಲವು ವರದಿಗಳ ಪ್ರಕಾರ, ಪೊಲೀಸರ ಬಂಧನ ಭೀತಿಯಿಂದ ಪ್ರಜ್ವಲ್‌ ರೇವಣ್ಣ ಭಾರತ ಬಿಟ್ಟು ವಿದೇಶಕ್ಕೆ ಪರಾರಿಯಾಗಿರುವ ಮಾಹಿತಿಯಿದೆ. ಪ್ರಜ್ವಲ್‌ ಡಿಪ್ಲೊಮೆಟಿಕ್‌ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ಪ್ರಯಾಣ ಬೆಳೆಸಿರುವ ಸಂಶಯವಿದೆ.

ಈಗಾಗಲೇ ಕರ್ನಾಟಕದ ವಿಶೇಷ ತನಿಖಾ ತಂಡವು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಅದರಲ್ಲೂ ಹಲವಾರು ಮಹಿಳೆಯರು ಪ್ರಜ್ವಲ್‌ ವಿರುದ್ದ ನೀಡಿರುವ ದೂರಿನಂತೆ ತನಿಖೆ ನಡೆಸುವ ಜತೆಗೆ ವಿದೇಶಕ್ಕೆ ಹೋಗಿರುವ ಪ್ರಜ್ವಲ್‌ ಕರೆತರಲು ಪ್ರಯತ್ನ ನಡೆಸಿದೆ. ಈ ದೇಶದ ಕಾನೂನಿನಂತೆ ಪ್ರಜ್ವಲ್‌ ತನಿಖೆಯನ್ನು ಎದುರಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ವಿದೇಶಾಂಗ ಮತ್ತು ಗೃಹ ಸಚಿವಾಲಯವು ತುರ್ತು ಕ್ರಮ ಕೈಗೊಂಡು ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ಅನ್ನು ಕೂಡಲೇ ರದ್ದುಪಡಿಸಬೇಕು. ಪೊಲೀಸ್‌ ಮಾರ್ಗಗಳು ಹಾಗೂ ದ್ವಿಪಕ್ಷಿಯ ಮಾರ್ಗಗಳ ಮೂಲಕ ಕೂಡಲೇ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನ ಕರೆ ತರಲು ಸೂಚೆ ನೀಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಎಸ್‌ಐಟಿ ಕೈಗೊಂಡಿರುವ ತನಿಖಾ ಕ್ರಮ ಹಾಗೂ ಕಾನೂನು ವಿಚಾರದ ಮಾಹಿತಿಯನ್ನು ತಮಗೆ ಒದಗಿಸಲು ಸಿದ್ದವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point