Hassan Scandal: ಹಾಸನ ಸಂತ್ರಸ್ತೆ ಅಪಹರಣ ಪ್ರಕರಣ, ಮಾಜಿ ಸಚಿವ ರೇವಣ್ಣಗೆ ಜಾಮೀನು ಮಂಜೂರು, ಬಿಡುಗಡೆ ಯಾವಾಗ?
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಅಪಹರಣ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ.
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಅಪಹರಣಕ್ಕೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಬೆಂಗಳೂರಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಈ ಕುರಿತು ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ನೀಡುವ ನಿರ್ಧಾರವನ್ನು ಸಂಜೆ ಪ್ರಕಟಿಸಿತು.ಇದರಿಂದ ಐದು ದಿನದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿಯೇ ಇದ್ದ ರೇವಣ್ಣ ಅವರು ಮಂಗಳವಾರ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ದ ಜಾಮೀನನ್ನು ಎಚ್.ಡಿ.ರೇವಣ್ಣ ಅವರಿಗೆ ಮಂಜೂರು ಮಾಡಲು ಆದೇಶಿಸಿತು. ಇದಕ್ಕಾಗಿ 5 ಲಕ್ಷ ರೂ. ಬಾಂಡ್ ನೀಡಬೇಕು. ಸಾಕ್ಷ್ಯಾಧಾರ ನಾಶಪಡಿಸಬಾರದು ಹಾಗೂ ಎಸ್ಐಟಿ ತನಿಖೆಗೆ ಸಹಕಾರ ನೀಡಬೇಕು.ರೇವಣ್ಣ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೇ ರಾಜ್ಯದ ಹೊರಹೋಗಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ರೇವಣ್ಣ ಅವರಿಗೆ ನ್ಯಾಯಾಲಯವು ನೀಡಿದೆ.
ಪ್ರಕರಣದ ಕುರಿತಂತೆ ಸೋಮವಾರ ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಂಡಾಗ ಎಸ್ಐಟಿ ಪರ ವಿಶೇಷ ಅಭಿಯೋಜಕರಾದ ಜಯ್ನಾ ಕೊಠಾರಿ ರೇವಣ್ಣ ಪರ ವಕೀಲರ ವಾದಕ್ಕೆ ಪ್ರತಿವಾದ ಮುಂದುವರೆಸಿದರು. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡುವುದು ಬೇಡ ಎನ್ನುವ ವಾದ ಅವರದ್ದಾಗಿತ್ತು. ಪ್ರತಿವಾದ ಮಂಡನೆ ಪೂರ್ಣಗೊಂಡ ಬಳಿಕ ಅಂತಿಮವಾಗಿ ಸಾಧ್ಯವಾದರೆ 5 ಗಂಟೆ ವೇಳೆಗೆ ಜಾಮೀನು ಅರ್ಜಿ ಬಗ್ಗೆ ಆದೇಶ ನೀಡುವುದಾಗಿ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಹೇಳಿದ್ದರು. ಸಂಜೆ ನಂತರ ಅಂತಿಮವಾಗಿ ನ್ಯಾ. ಸಂತೋಷ್ ಗಜಾನನ ಭಟ್ ಅವರು ರೇವಣ್ಣ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದರು.
ವಾದ ಹೀಗಿತ್ತು
ವಾದ ಮುಂದುವರೆಸಿದ ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ಅಪಹರಣ ಹಾಗೂ ಒತ್ತೆ ಇಡುವುದು ಅಪರಾಧ ನಿಜ. ಆದರೆ ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 364 ಎ ಅನ್ವಯಿಸಲು ಅಗತ್ಯ ಅಂಶಗಳು ಕಾಣುತ್ತಿಲ್ಲ. ಅಪಹರಣ ಮಾಡಿದಾಗ ಏನಾದರೂ ಬೇಡಿಕೆ ಇಟ್ಟಿರಬೇಕು. ಇಲ್ಲದೇ ಇದ್ದರೆ ಕೊಲ್ಲುವುದಾಗಿ ಬೆದರಿಕೆಯನ್ನಾದರೂ ಹಾಕಿರಬೇಕು. ಈ ಅಪಹರಣ ಪ್ರಕರಣದಲ್ಲಿ ಅಂತಹ ಯಾವುದೇ ಅಂಶಗಳು ಕಾಣುತ್ತಿಲ್ಲ. ಪೊಲೀಸರು ಈ ಪ್ರಕರಣ ದಾಖಲಿಸಿರುವುದೇ ಕಾನೂನುಬಾಹಿರ ಎನ್ನುವುದು ಸ್ಪಷ್ಟ. ರೇವಣ್ಣ ಅವರ ಮನೆಯಲ್ಲಿ10 ವರ್ಷಗಳಿಂದ ಮಹಿಳೆ ಕೆಲಸ ಮಾಡುತ್ತಿರುವುದರಲ್ಲಿ ಅನುಮಾನವಿಲ್ಲ.ಮಹಿಳೆ ಅಪಹರಣ ಪ್ರಕರಣದಲ್ಲಿ ಕಕ್ಷಿದಾರರ ಸಂಬಂಧಿಯೇನೂ ಅಲ್ಲ. ಮೊದಲು ದಾಖಲಿಸಿದ ಎಫ್ಐಆರ್ನ ಸಂತ್ರಸ್ತೆ ಮಾತ್ರ ಅವರ ಸಂಬಂಧಿ ಎನ್ನುವುದನ್ನು ಸಿ.ವಿ.ನಾಗೇಶ್ ನ್ಯಾಯಾಲಯದ ಗಮನಕ್ಕೆ ತಂದರು.
ಸೆಕ್ಷನ್ 27ರ ಎವಿಡೆನ್ಸ್ ಕಾಯಿದೆ ಪ್ರಕೃ ಸಾಕ್ಷ್ಯಾಧಾರ ಸಂಗ್ರಹ ಮಾಡಬೇಕು. ಈ ಪ್ರಕರಣದಲ್ಲಿ ಅದ್ಯಾವುದನ್ನೂ ಮಾಡಿರುವುದು ಕಾಣಿಸುತ್ತಿಲ್ಲ. ಯಾವ ಆಯಾಮದಲ್ಲಿಯೂ ಆರೋಪ ಸಾಬೀತಾಗುವ ಅಂಶಗಳಿಲ್ಲ. ಈ ಪ್ರಕರಣದಲ್ಲಿ ರೇವಣ್ಣ ಮಾತ್ರ ಆರೋಪಿಯೇ ಹೊರತು ಪ್ರಜ್ವಲ್ ರೇವಣ್ಣ ಅಲ್ಲ. ಎರಡನ್ನೂ ಬೆಸೆಯಕೂಡದು. ಅಲ್ಲದೇ, ಕೆ.ಆರ್.ನಗರಕ್ಕೆ ರೇವಣ್ಣ ಪ್ರವೇಶ ಮಾಡಬಾರದು ಎಂಬುದು ಸೇರಿದಂತೆ ನ್ಯಾಯಾಲಯ ಷರತ್ತು ವಿಧಿಸಿದರೆ ಅದಕ್ಕೆ ಕಕ್ಷಿದಾರರು ಬದ್ಧರಾಗಿರುತ್ತಾರೆ. ಹೀಗಾಗಿ, ನನ್ನ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಪ್ರತಿವಾದ ಮಂಡನೆ
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಜಯ್ನಾ ಕೊಠಾರಿ ಪ್ರತಿವಾದ ಮಂಡನೆ ಮಾಡಿದರು. ಪ್ರಕರಣದಲ್ಲಿ ಆರೋಪಿಯಾಗಿರುವ ರೇವಣ್ಣ ಅವರ ಸಂಬಂಧಿ ಎಂದು ಈಗಾಗಲೇ ಹೇಳಿಕೆಯನ್ನು ಎಸ್‌ಐಟಿ ತನಿಖಾಧಿಕಾರಿಗಳು ದಾಖಲಿಸಿದ್ದಾರೆ. ಅವರಿಗೆ ಜಾಮೀನು ಮಂಜೂರು ಮಾಡುವುದು ಬೇಡ ಎಂದು ಹೇಳಿದರು.
ರಿಮ್ಯಾಂಡ್ ಅರ್ಜಿಯಲ್ಲಿ ಈ ಅಂಶ ಇಲ್ಲವಲ್ಲ. ಅಲ್ಲದೇ ಎರಡನೇ ರಿಮ್ಯಾಂಡ್ ಅರ್ಜಿಯಲ್ಲೂ ಇದನ್ನು ಉಲ್ಲೇಖಿಸವಲ್ಲ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು. ಈ ವೇಳೆ ಪಿಪಿ ಅವರು ತನಿಖಾಧಿಕಾರಿಯೊಂದಿಗೆ ಮಾತನಾಡಲು ಮುಂದಾಗಿ ಸಮಯಾವಾಕಾಶ ಕೋರಿದರು. ಇದಕ್ಕೆ ಸಿ.ವಿ.ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು.
ಕೊನೆಗೆ ಆದೇಶ ಕಾಯ್ದಿರಿಸಿದ್ದ ನ್ಯಾಯಾಧೀಶರು ಸಂಜೆ ಜಾಮೀನು ನೀಡುವುದಾಗಿ ಪ್ರಕಟಿಸಿದರು.
ಬಿಡುಗಡೆ ಯಾವಾಗ?
ಜಾಮೀನು ದೊರೆತಿದ್ದರೂ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳು ಇರುವುದರಿಂದ ಅವರನ್ನು ಕಾರಾಗೃಹಕ್ಕೆ ಕರೆದೊಯ್ಯಲಾಗುತ್ತದೆ. ಆನಂತರ ಬಿಡುಗಡೆ ಮಾಡಲಾಗುತ್ತದೆ. ಬೇರೆ ಪ್ರಕರಣವಿದ್ದರೆ ಅದರಡಿ ಬಂಧಿಸುವ ಸಾಧ್ಯತೆಯೂ ಇರುತ್ತದೆ. ರೇವಣ್ಣ ಅವರ ಇತರೆ ಪ್ರಕರಣ ಇಲ್ಲದೇ ಇರುವುದರಿಂದ ಬಿಡುಗಡೆಯಾಗಬಹುದು ಎಂದು ಮೂಲಗಳು ತಿಳಿಸಿವೆ.