ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಪ್ರಜ್ವಲ್‌ ಬಂಧನಕ್ಕೆ ಲುಕ್‌ಔಟ್‌ ನೊಟೀಸ್‌ ಜಾರಿ ಮಾಡಿದ ಕರ್ನಾಟಕ ಎಸ್‌ಐಟಿ

Hassan Scandal: ಪ್ರಜ್ವಲ್‌ ಬಂಧನಕ್ಕೆ ಲುಕ್‌ಔಟ್‌ ನೊಟೀಸ್‌ ಜಾರಿ ಮಾಡಿದ ಕರ್ನಾಟಕ ಎಸ್‌ಐಟಿ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ( Prajwal Revanna) ಅವರಿಗೆ ಕರ್ನಾಟಕದ ಎಸ್‌ಐಟಿ ತಂಡವು ಲುಕ್‌ ಔಟ್‌ ನೊಟೀಸ್‌ ಅನ್ನು ಜಾರಿ ಮಾಡಿ ಬೇಗನೇ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ.

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಲುಕ್‌ ಔಟ್‌ ನೊಟೀಸ್‌ ಜಾರಿಯಾಗಿದೆ.
ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಲುಕ್‌ ಔಟ್‌ ನೊಟೀಸ್‌ ಜಾರಿಯಾಗಿದೆ.

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿರುವ ಹಾಸನದ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಅವರ ಬಂಧನಕ್ಕೆ ಲುಕ್‌ಔಟ್‌ ನೊಟೀಸ್‌ ಅನ್ನು ಜಾರಿಗೊಳಿಸಲಾಗಿದೆ. ಪ್ರಜ್ವಲ್‌ ರೇವಣ್ಣ ವಿರುದ್ದದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ( SIT) ಲುಕ್‌ ಔಟ್‌ ನೊಟೀಸ್‌ ಅನ್ನು ಜಾರಿ ಮಾಡಿದ್ದು, ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಈಗಾಗಲೇ ಭಾರತೀಯ ವಿದೇಶಾಂಗ ಸಚಿವಾಲಯ, ಪ್ರಮುಖ ವಿಮಾನ ನಿಲ್ದಾಣಗಳಿಗೂ ಪ್ರಕರಣದ ವಿವರಗಳನ್ನು ನೀಡಲಾಗಿದ್ದು. ಪ್ರಜ್ವಲ್‌ ರೇವಣ್ಣ ಕಂಡು ಬಂದರೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ರಚಿಸಲಾಗಿರುವ ವಿಶೇಷ ತನಿಖಾ ತಂಡವು ಮೇ 1ರಂದು ಹಾಜರಾಗುವಂತೆ ಪ್ರಜ್ವಲ್‌ ರೇವಣ್ಣ ಅವರಿಗೆ ನೊಟೀಸ್‌ ನೀಡಿತ್ತು. ಆದರೆ ವಿಚಾರಣೆಗೆ ಪ್ರಜ್ವಲ್‌ ರೇವಣ್ಣ ಹಾಜರಾಗಿರಲಿಲ್ಲ. ಪ್ರಜ್ವಲ್‌ ಸಮಯ ಕೇಳಿಕೊಂಡಿದ್ದರು. ಈ ನಡುವೆ ಪ್ರಜ್ವಲ್‌ ಬರುವುದು ವಿಳಂಬವಾಗಬಹುದು ಎನ್ನುವ ಕಾರಣದಿಂದ ಅವರ ಬಂಧನಕ್ಕೆ ಲುಕ್‌ ಔಟ್‌ ನೊಟೀಸ್‌ ಜಾರಿ ಮಾಡಲಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ವಿಶೇಷ ತನಿಖಾ ತಂಡ ಈಗಾಗಲೇ ಪ್ರಜ್ವಲ್‌ಗೆ ನೊಟೀಸ್‌ ನೀಡಿತ್ತು. ಅವರು ಏಳು ದಿನದ ಸಮಯ ಕೇಳಿಕೊಂಡಿದ್ದರು. ಈಗ ಲುಕ್‌ ಔಟ್‌ ನೊಟೀಸ್‌ ಅನ್ನು ಜಾರಿಗೊಳಿಸಲಾಗಿದೆ. ಅವರು ಎಸ್‌ಐಟಿ ತಂಡದ ಮುಂದೆ ಹಾಜರಾಗಿ ಮೊದಲು ಹೇಳಿಕೆ ನೀಡಬೇಕು. ಬಾರದೇ ಇದ್ದರೆ ಅನಿವಾರ್ಯವಾಗಿ ಬಂಧಿಸಲೇಬೇಕಾಗುತ್ತದೆ. ಇದರ ಮುಂದಿನ ಕ್ರಮವಾಗಿಯೇ ಲುಕ್‌ ಔಟ್‌ ನೊಟೀಸ್‌ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಪ್ರಕರಣ ಎದುರಿಸುತ್ತಿರುವ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣ ಅವರು ತನಿಖೆಗೆ ಹಾಜರಾಗಲೇಬೇಕು. ಇಲ್ಲದೇ ಇದ್ದರೆ ಕಾನೂನು ರೀತಿಯಲ್ಲಿ ಬಂಧನದಂತಹ ಕ್ರಮ ಖಂಡಿತ ಆಗಲಿದೆ ಎನ್ನುವುದು ಡಾ.ಪರಮೇಶ್ವರ್‌ ನೀಡಿದ ವಿವರಣೆ.

ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡ ನಂತರ ಐದು ದಿನದ ಹಿಂದೆ ದೇಶ ಬಿಟ್ಟು ಹೋಗಿರುವ ಆರೋಪಗಳು ಕೇಳಿ ಬಂದಿವೆ. ಸರ್ಕಾರವು ಎಸ್‌ಐಟಿ ತನಿಖೆಗೆ ಆದೇಶಿಸಿದ ನಂತರ ಪೊಲೀಸರ ತಂಡಗಳೂ ಹಾಸನ ಹಾಗೂ ಹೊಳೆನರಸೀಪುರದಲ್ಲಿ ತನಿಖೆ ಕೈಗೊಂಡಿವೆ. ಇದರ ನಡುವೆ ನೊಟೀಸ್‌ ಕೂಡ ಜಾರಿ ಮಾಡಲಾಗಿದೆ. ಆದರೆ ಪ್ರಜ್ವಲ್‌ ಪರ ವಕೀಲ ಅರುಣ್‌ ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಬರೆದು ಹಾಜರಾಗಲು ಸಮಯ ನೀಡುವಂತೆ ಕೋರಿಕೊಂಡಿದ್ದರು. ಪ್ರಜ್ವಲ್‌ ವಶಕ್ಕೆ ಪಡೆಯಲು ಸಹಕಾರ ನೀಡುವಂತೆ ಕೇಂದ್ರ ಸರ್ಕಾರಕ್ಕೂ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಇದರ ನಡುವೆ ಪ್ರಜ್ವಲ್‌ ಭಾರತಕ್ಕೆ ಮರಳುವುದು ಹದಿನೈದು ದಿನ ವಿಳಂಬವಾಗಬಹುದು ಎನ್ನುವ ಕಾರಣದಿಂದ ಎಸ್‌ಐಟಿ ತಂಡ ಲುಕ್‌ ಔಟ್‌ ನೊಟೀಸ್‌ ಕೂಡ ಜಾರಿಗೊಳಿಸಿದೆ. ಈಗಲೂ ಬಾರದೇ ಇದ್ದರೆ ಬಂಧಿಸಲಾಗುತ್ತದೆ ಎನ್ನುವುದು ಪೊಲೀಸ್‌ ಅಧಿಕಾರಿಗಳ ಸ್ಪಷ್ಟನೆ.

IPL_Entry_Point