ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಎಸ್‌ಐಟಿ ನೊಟೀಸ್‌, ಸಮಯ ಕೇಳಿಕೊಂಡ ಪ್ರಜ್ವಲ್‌ ರೇವಣ್ಣ

Hassan Scandal: ಎಸ್‌ಐಟಿ ನೊಟೀಸ್‌, ಸಮಯ ಕೇಳಿಕೊಂಡ ಪ್ರಜ್ವಲ್‌ ರೇವಣ್ಣ

ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ನೀಡಿರುವ ನೊಟೀಸ್‌ ಗೆ ಪ್ರಜ್ವಲ್‌ ರೇವಣ್ಣ ಸಮಯ ಕೇಳಿಕೊಂಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ಬರೆದಿರುವ ಪತ್ರ
ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ಬರೆದಿರುವ ಪತ್ರ

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿಚಾರಣೆ ಶುರುವಾಗಿದ್ದು, ತಮಗೆ ಒಂದು ವಾರ ಸಮಯ ನೀಡುವಂತೆ ಪ್ರಜ್ವಲ್‌ ಕೋರಿಕೊಂಡಿದ್ದಾರೆ. ಅವರು ಬೆಂಗಳೂರಿನಿಂದ ಹೊರಗಡೆ ಇರುವ ಕಾರಣದಿಂದ ಸಮಯ ನೀಡುವಂತೆ ವಿಶೇಷ ತನಿಖಾ ತಂಡದ ಡಿವೈಎಸ್ಪಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಜ್ವಲ್‌ ಅವರ ಪರವಾಗಿ ವಕೀಲರ ಜಿ. ಅರುಣ್‌ ಅವರು ಪತ್ರವನ್ನು ಸಿಐಡಿ ವಿಶೇಷ ತನಿಖಾ ತಂಡದ ಪೊಲೀಸ್‌ ಉಪಾಧೀಕ್ಷಕರು ಹಾಗೂ ತನಿಖಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಕುರಿತು ಬರೆಯಲಾಗಿರುವ ಪತ್ರ ಲಗತ್ತಿಸಿ ಎಕ್ಸ್‌ನಲ್ಲಿ ಪ್ರಜ್ವಲ್‌ ಪೋಸ್ಟ್‌ ಕೂಡ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಕೀಲರ ಪತ್ರದಲ್ಲಿ ಏನಿದೆ?

ಕಲಂ ನಂಬರ್‌ 41ಎ ಸಿಆರ್‌ಪಿಸಿ ಅಡಿಯಲ್ಲಿ ನೀಡಿರುವ ನೊಟೀಸ್‌ಗೆ ಖುದ್ದಾಗಿ ಹಾಜರಾಗಲು ಕಾಲಾಕಾಶವನ್ನು ನೀಡಬೇಕು. ನನ್ನ ಕಕ್ಷಿದಾರರಾದ ಪ್ರಜ್ವಲ್‌ ಅವರ ಮನೆಯ ಮೇಲೆ ತಮ್ಮ ಕಛೇರಿಯಿಂದ ಕಳುಹಿಸಿರುವ ನೊಟೀಸ್‌ ಅನ್ನು ಅಂಟಿಸಿರುವ ಮಾಹಿತಿ ದೊರೆತಿದೆ. ಈ ಬಗ್ಗೆ ನನ್ನ ಕಕ್ಷಿದಾರರಾದ ಪ್ರಜ್ವಲರ್‌ ಅವರ ಕುಟುಂಬದವರಿಂದ ಬದಿರುವ ಮಾಹಿತಿಯಂತೆ ಮೇ 1ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿದ್ದೀರಿ. ಆದರೆ ಪ್ರಜ್ವಲ್‌ ವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿ ಇದ್ದಾರೆ. ಈ ಕಾರಣದಿಂದ ಅವರು ಬೆಂಗಳೂರಿಗೆ ಬಂದು ತಮ್ಮ ಮುಂದೆ ನೊಟೀಸ್‌ ಸೂಚನೆಯಂತ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು. ನನ್ನ ಕಕ್ಷಿದಾರರಿಗೆ ಸುಮಾರು ಏಳು ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗೆ ಹಾಜರಾಗಲು ಅವಕಾಶ ಮಾಡಿಕೊಡಬೇಕು ಎಂದು ಅರುಣ್‌ ಪತ್ರದಲ್ಲಿ ವಿವರಿಸಿದ್ದಾರೆ.

ಬೀಡು ಬಿಟ್ಟ ತಂಡ

ಪ್ರಜ್ವಲ್‌ ರೇವಣ್ಣ ವಿರುದ್ದ ನಾಲ್ಕು ದಿನಗಳ ಹಿಂದೆಯೇ ಹೊಳೆನರಸೀಪುರ ನಗರ ಠಾಣೆಯಲ್ಲ ಮೊಕದ್ದಮೆ ದಾಖಲಾಗಿದೆ. ಪೆನ್‌ಡ್ರೈವ್‌ ವಿಚಾರ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ತನಿಖೆಗೆ ವಿಶೇಷ ತನಿಖಾ ತಂಡವನ್ನೂ ಈಗಾಗಲೇ ರಚಿಸಲಾಗಿದೆ. ತನಿಖಾ ತಂಡಕ್ಕೆ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್‌, ಎಸ್ಪಿಗಳಾದ ಸೀಮಾ ಲಾಟ್ಕರ್‌, ಡಾ. ಸುಮನ್‌ ಪನ್ನೇಕರ್‌ ಅವರನ್ನು ನೇಮಿಸಲಾಗಿದೆ. ಅಲ್ಲದೇ ತಜ್ಞ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ.

ಮಹಜರು ಆರಂಭ

ತಂಡವು ಈಗಾಗಲೇ ಹೊಳೆನರಸೀಪುರ, ಹಾಸನ ಸೇರಿದಂತೆ ಹಲವು ಕಡೆಗಳಲ್ಲಿ ತನಿಖೆ ಶುರು ಮಾಡಿದೆ. ಲೈಂಗಿಕ ದೌರ್ಜನ್ಯ ಎಸಗಿರುವ ಸ್ಥಳಗಳ ಮಹಜರು ಕಾರ್ಯವನ್ನೂ ಆರಂಭಿಸಲಾಗಿದೆ. ದೂರು ನೀಡಿದವರಿಂದ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗುತ್ತಿದೆ.

ಹಾಜರಿಗೆ ನೊಟೀಸ್‌ ಜಾರಿ

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರಿಗೂ ಮಂಗಳವಾರವೇ ನೊಟೀಸ್‌ ಅನ್ನು ನೀಡಲಾಗಿದೆ. ಅವರು ಮನೆಯಲ್ಲಿ ಇಲ್ಲದೇ ಇದ್ದುದರಿಂದ ಗೋಡೆಗೆ ನೊಟೀಸ್‌ ಅಂಟಿಸಲಾಗಿದೆ. ಬುಧವಾರ ವಿಚಾರಣೆಗೆ ಹಾಜರಾಗುವಂತೆ ನೊಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಪ್ರಜ್ವಲ್‌ ಭಾರತದಲ್ಲಿ ಇಲ್ಲ. ಅವರು ಜರ್ಮನಿಯಲ್ಲಿ ಇದ್ದಾರೆ ಎನ್ನುವ ಮಾಹಿತಿ ತನಿಖಾ ತಂಡಕ್ಕೆ ದೊರೆತಿದೆ. ಇದರ ನಡುವೆ ಪ್ರಜ್ವಲ್‌ ವಕೀಲರು ಸಮಯ ಕೇಳಿರುವುದರಿಂದ ಅವರು ದೇಶದಲ್ಲಿ ಇಲ್ಲ ಎನ್ನುವುದು ಖಚಿತವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point