ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಸಮಗ್ರ ತನಿಖೆಯಾಗಬೇಕಾದರೆ ಸಿಬಿಐಗೆ ಕೊಡಿ ಎಂದು ಪ್ರತಿಪಕ್ಷ ನಾಯಕ ಅಶೋಕ ಆಗ್ರಹಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಪ್ರತಿಪಕ್ಷ ನಾಯಕ ಅಶೋಕ ಶುಭಾಶಯ ಕೋರಿದರು.
ಭಾನುವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಪ್ರತಿಪಕ್ಷ ನಾಯಕ ಅಶೋಕ ಶುಭಾಶಯ ಕೋರಿದರು.

ಬೆಂಗಳೂರು: ಗೃಹ ಇಲಾಖೆಯು ಡಾ.ಜಿ.ಪರಮೇಶ್ವರ್‌ ಅವರ ಕೈಯಲ್ಲಿಲ್ಲ. ಇದನ್ನು ಬೇರೆ ಯಾರೋ ಹೈಜಾಕ್‌ ಮಾಡಿ ನಡೆಸುತ್ತಿದ್ದಾರೆ, ರಾಜ್ಯದಲ್ಲಿ ಕೊಲೆ, ಕಳ್ಳತನ, ದರೋಡೆ ಹೆಚ್ಚಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೌಡಿಗಳಿಗೆ, ಕೊಲೆಗಡುಕರಿಗೆ ಹಬ್ಬ. ಈ ಹಬ್ಬಕ್ಕೆ ಕಾಂಗ್ರೆಸ್ಸೇ ನೇರ ಕಾರಣ. ಇತ್ತೀಚೆಗೆ ಹತ್ಯೆಯಾದ ಅಂಜಲಿ ಕುಟುಂಬದವರು ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರವೇ ಅಪರಾಧಿ ಸ್ಥಾನದಲ್ಲಿದ್ದು, ಸರ್ಕಾರವನ್ನೇ ಗಲ್ಲಿಗೇರಿಸಬೇಕು. ಮಳೆ ಸುರಿಯುವುದಕ್ಕಿಂತ ಹೆಚ್ಚಾಗಿ ಕೊಲೆಗಳು ನಡೆಯುತ್ತಿವೆ ಎಂದು ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು, ಆನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಗೃಹ ಸಚಿವರು ಯಾರು ಎನ್ನುವ ಅನುಮಾನ ಮೂಡುತ್ತದೆ. ಯಾರು ಗೃಹ ಖಾತೆಯನ್ನು ನಿಭಾಯಿಸುತ್ತಿದ್ದಾರೆ ಎಂಬುದು ನಮಗೆ ಮಾತ್ರವಲ್ಲದೇ ಜನರನ್ನೂ ಕಾಡುತ್ತಿದೆ ಎಂದು ಆಪಾದಿಸಿದರು.

ಮುಚ್ಚಿ ಹಾಕಲು ಯತ್ನ

ಪ್ರಜ್ವಲ್‌ ರೇವಣ್ಣ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಆದರೆ ವೀಡಿಯೋ ಹಂಚಿದವರ ವಿರುದ್ಧ ಕ್ರಮ ವಹಿಸಿಲ್ಲ. ಹೀಗೆ ಕಾಂಗ್ರೆಸ್‌ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಪ್ರಕರಣವನ್ನು ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ ಮಾಡುತ್ತಿದೆ ಎಂದು ಆಪಾದಿಸಿದರು.

ಈಗಾಗಲೇ ವಕೀಲ ದೇವರಾಜೇಗೌಡ ಸ್ವತಃ ಹೇಳಿಕೆ ನೀಡಿ, ಡಿ.ಕೆ.ಶಿವಕುಮಾರ್‌ ಅವರ ಧ್ವನಿಮುದ್ರಣ ಬಿಡುಗಡೆ ಮಾಡಿದ್ದಾರೆ. ನಿಜ ಇರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದು, ಅದಕ್ಕಾಗಿ ಅವರ ಬಂಧನವಾಗಿದೆ. ಲೋಕಸಭೆ ಚುನಾವಣೆಯ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೀಗೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನೂ ತಡೆಯುವ ಉದ್ದೇಶ ಡಿ.ಕೆ.ಶಿವಕುಮಾರ್‌ ಅವರಿಗಿದೆ ಎಂದು ಅಶೋಕ ಆರೋಪಿಸಿದರು.

ಸಮಗ್ರ ತನಿಖೆಯಾಗಲಿ

ಕಾಂಗ್ರೆಸ್‌ ಕರ್ನಾಟಕ ಉಸ್ತುವಾರಿ ಸುರ್ಜೇವಾಲ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಸೇರಿ ಪ್ರಜ್ವಲ್‌ ರೇವಣ್ಣ ಸಿಡಿ ಪ್ರಕರಣದಲ್ಲಿ ಹಲವರನ್ನು ಸಿಲುಕಿಸಲು ಹಲವು ದಿನ ಕುಳಿತು ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್‌ ಮುಖಂಡರ ಕೈವಾಡ ಇರುವುದು ನಿಜ. ಈ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ ಈಗಾಗಲೇ ದಲಿತ ನಾಯಕರನ್ನು ಮುಗಿಸಿದ್ದಾರೆ. ಇದೇ ರೀತಿ ಒಕ್ಕಲಿಗರನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ. ಇಡೀ ಪ್ರಕರಣದ ಹೊಡೆತ ಕಾಂಗ್ರೆಸ್‌ನಲ್ಲಿಯೇ ಯಾರ ಮೇಲೆ ಆಗಲಿದೆ ಎನ್ನುವುದನ್ನು ಕಾದು ನೋಡಿ ಎಂದರು.

ಸಿಬಿಐಗೆ ಕೊಡಿ

ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿದೆ. ಆದರೆ ಸಿಬಿಐ ಬಳಿ ಹೋದರೆ ಸರ್ಕಾರದಲ್ಲಿ ಇರುವವರೇ ಕಂಬಿ ಎಣಿಸಬೇಕಾಗುತ್ತದೆ. ಇಡೀ ಗೃಹ ಇಲಾಖೆಯರನ್ನು ಬೇರೆ ಯಾರೋ ಹೈಜಾಕ್‌ ಮಾಡಿ ನಡೆಸುತ್ತಿದ್ದಾರೆ. ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದಂತೆ ಚಾಲಕನನ್ನು ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳುತ್ತಾರೆ ಎಂದರು.

ದೇವೇಗೌಡರ ಭೇಟಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭಾನುವಾರ ಭೇಟಿಯಾಗಿ ಜನ್ಮದಿನದ ಶುಭಾಶಯ ತಿಳಿಸಿದ್ದೇನೆ. ಇದೇ ವೇಳೆ ರಾಜ್ಯ ರಾಜಕೀಯದ ಕುರಿತಾಗಿ ಕೆಲವು ಮಾತನಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಅಶೋಕ ತಿಳಿಸಿದರು.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024