Hassan Scandal: 16 ದಿನದ ನಂತರವೂ ಪ್ರಜ್ವಲ್ ನಾಪತ್ತೆ. ರೆಡ್ ಕಾರ್ನರ್ ನೋಟಿಸ್ ಜಾರಿಗೆ ಸಿದ್ದತೆ, ಮಾಹಿತಿಗೆ 1 ಲಕ್ಷ ರೂ. ಬಹುಮಾನ
ಹಾಸನ ಸಂಸದ ಪ್ರಜ್ವಲ್ ರೇವಣ್ಣ( Prajwal Revanna) ಕಾಣೆಯಾಗಿ ಮೂರು ವಾರ ಕಳೆಯುತ್ತಾ ಬಂದಿರುವುದರಿಂದ ಬಂಧನಕ್ಕೆ ಬಲೆ ಬೀಸಿರುವ ಕರ್ನಾಟಕ ವಿಶೇಷ ತನಿಖಾ ತಂಡದ( SIT) ಪೊಲೀಸರು ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸುವ ಸಿದ್ದತೆ ಮಾಡಿಕೊಂಡಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ನಡುವೆ ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪತ್ತೆಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಕರ್ನಾಟಕ ವಿಶೇಷ ತನಿಖಾ ದಳ(ಎಸ್‌ಐಟಿ) ಸಿದ್ಧತೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದರೂ ಪ್ರಜ್ವಲ್ ಸುಳಿವು ಪತ್ತೆಯಾಗಿಲ್ಲ. ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿಲ್ಲ. ಆದ್ದರಿಂದ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವ ನಿಟ್ಟಿನಲ್ಲಿ ಎಸ್‌ಐಟಿ ಮುಖ್ಯಸ್ಥರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಸಿಬಿಐ ಅಧಿಕಾರಿಗಳ ಜೊತೆಗೆ ಪೂರ್ವಭಾವಿ ಚರ್ಚೆ ಆರಂಭಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕಾದರೆ, ಸಿಬಿಐ ಅಧಿಕಾರಿಗಳು ಇಂಟರ್‌ಪೋಲ್ ಜೊತೆ ಸಂಪರ್ಕ ಸಾಧಿಸಿ ಮನವಿ ಸಲ್ಲಿಸಬೇಕು. ಆದ್ದರಿಂದ ಸಿಬಿಐ ಒಪ್ಪಿಗೆ ಸೂಚಿಸಿದರೆ ಮಾತ್ರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಆರೋಪಿ ತಲೆಮರೆಸಿಕೊಂಡಿರುವ ರಾಷ್ಟ್ರದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಿದ್ದಾರೆ. ನಂತರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ ದೇಶಕ್ಕೆ ಹಸ್ತಾಂತರ ಮಾಡಲಾಗುತ್ತದೆ.
ಈ ಮಧ್ಯೆ ಮಾಧ್ಯಮಗಳಲ್ಲಿ ದಿನಕ್ಕೊಂದು ರೀತಿಯ ಮಾಹಿತಿ ಹೊರಬೀಳುತ್ತಿದೆ. ಯಾವುದು ನಿಜ ಯಾವುದು ಸುಳ್ಳು ಎನ್ನುವುದು ಗೊತ್ತಾಗುತ್ತಿಲ್ಲ. ರಾಜಕೀಯ ಮುಖಂಡರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಒಟ್ಟಾರೆ ಇಡೀ ಪ್ರಕರಣ ಗೊಂದಲ ಮೂಡಿಸುತ್ತಿದೆ. ನಿಜಕ್ಕೂ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆಯೇ ಎಂಬ ಸಂಶಯವೂ ಮೂಡಿದೆ.
ಆದ್ದರಿಂದ ಎಸ್ ಐ ಟಿ ಮುಖ್ಯಸ್ಥ ಬಿಕೆ. ಸಿಂಗ್ ಅವರು ಯಾವುದೇ ಮಾಹಿತಿಯನ್ನು ಸೋರಿಕೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಕರಣ ದಾಖಲಾಗಿ 16 ದಿನ ಕಳೆದರೂ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಜನತಾ ಪಕ್ಷದ ಮುಖಂಡರು ವಿಭಿನ್ನ ರೀತಿಯ ಪೋಸ್ಟರ್ ಅಭಿಯಾನ ನಡೆಸಿ ಗಮನ ಸೆಳೆದಿದ್ದಾರೆ.
ಶಿವಾನಂದ ಸರ್ಕಲ್ ಸೇರಿದಂತೆ ಹಲವು ಕಡೆ ಪೋಸ್ಟರ್ ಅಂಟಿಸಿ ಪ್ರಜ್ವಲ್ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಪಕ್ಷದ ಮುಖಂಡ ನಾಗೇಶ್ ಈ ಪೋಸ್ಟರ್ ಅಂಟಿಸಿ ಗಮನ ಸೆಳೆದಿದ್ದಾರೆ. ಹೈ ಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ನಾಗೇಶ್ ಮತ್ತಿತರರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರದ ದೃಶ್ಯಗಳಿರುವ ಪೆನ್ ಡ್ರೈವ್ ಬಿಡುಗಡೆ ಆರೋಪ ಎದುರಿಸುತ್ತಿರುವ ದೇವರಾಜೇ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಎಸ್ ಐ ಟಿ ಯನ್ನು ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿರುವ ದಾಖಲೆಗಳನ್ನು ದೇವರಾಜೇ ಗೌಡ ಸಿಬಿಐ ಗೆ ನೀಡುವುದಾಗಿ ಹೇಳಿದ್ದರು. ಆದ್ದರಿಂದ ಪ್ರಕರಣದ ದಿಕ್ಕು ತಪ್ಪಿಸಲು ಇವರನ್ನು ಬಂಧಿಸಲಾಗಿದೆ ಎಂದು ದೂರಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)