Bhavani Revanna: ಭವಾನಿ ರೇವಣ್ಣಗೆ ಮೈಸೂರು, ಹಾಸನ, ಬೆಂಗಳೂರಲ್ಲಿ ಎಸ್‌ಐಟಿ ಹುಡುಕಾಟ
ಕನ್ನಡ ಸುದ್ದಿ  /  ಕರ್ನಾಟಕ  /  Bhavani Revanna: ಭವಾನಿ ರೇವಣ್ಣಗೆ ಮೈಸೂರು, ಹಾಸನ, ಬೆಂಗಳೂರಲ್ಲಿ ಎಸ್‌ಐಟಿ ಹುಡುಕಾಟ

Bhavani Revanna: ಭವಾನಿ ರೇವಣ್ಣಗೆ ಮೈಸೂರು, ಹಾಸನ, ಬೆಂಗಳೂರಲ್ಲಿ ಎಸ್‌ಐಟಿ ಹುಡುಕಾಟ

ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ಸಿಲುಕಿರುವ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಹುಡುಕಾಟವನ್ನು ವಿಶೇಷ ತನಿಖಾ ತಂಡ ಮುಂದುವರಿಸಿದೆ.

ಭವಾನಿ ರೇವಣ್ಣ ಅವರ ಹುಡುಕಾಟ ನಿಂತಿಲ್ಲ
ಭವಾನಿ ರೇವಣ್ಣ ಅವರ ಹುಡುಕಾಟ ನಿಂತಿಲ್ಲ

ಬೆಂಗಳೂರು: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಆನಂತರದ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಸಿಲುಕಿ ತಲೆ ಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರಿಗಾಗಿ ವಿಶೇಷ ತನಿಖಾ ತಂಡ ಹುಡುಕಾಟ ಮುಂದುವರೆಸಿದೆ. ಶನಿವಾರ ದಿನವಿಡೀ ಹಾಸನ ಜಿಲ್ಲೆ ಹೊಳೆ ನರಸೀಪುರದಲ್ಲಿರುವ ಚನ್ನಮ್ಮಾಂಬಿಕ ನಿವಾಸದಲ್ಲಿ ಕಾದಿದ್ದ ಎಸ್‌ಐಟಿ ತಂಡ ಬರಗೈಲಿ ವಾಪಾಸಾಗಿತ್ತು. ಭಾನುವಾರ ಕೂಡ ಅವರಿಗಾಗಿ ಹುಡುಕಾಟವನ್ನು ನಿಲ್ಲಿಸಲಿಲ್ಲ. ಭವಾನಿ ಅವರು ಹಾಸನ, ಮೈಸೂರು ಇಲ್ಲವೇ ಬೆಂಗಳೂರಿನ ಸಂಬಂಧಿಕರ ಮನೆಗಳಲ್ಲಿ ಇರಬಹುದು ಎಂದು ಎಸ್‌ಐಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರಳಿದ್ದಾರೆ. ಇದಕ್ಕಾಗಿ ರಚಿಸಿರುವ ಮೂರು ತಂಡಗಳು ಪ್ರತ್ಯೇಕವಾಗಿ ಭವಾನಿ ರೇವಣ್ಣ ಅವರ ಪತ್ತೆಗೆ ಮುಂದಾಗಿವೆ.

ಭವಾನಿ ರೇವಣ್ಣ ಅವರು ಈಗಾಗಲೇ ಬೆಂಗಳೂರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಿಣಾ ಜಾಮೀನು ಅರ್ಜಿಯೂ ವಜಾಗೊಂಡಿದೆ. ಹೈಕೋರ್ಟ್‌ ನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಅರ್ಜಿ ಸೋಮವಾರ ವಿಚಾರಣೆಗೆ ಬರಬಹುದು. ಈ ಕಾರಣದಿಂದಲೇ ಅವರು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಎರಡು ವಾರದಿಂದ ಪ್ರಯತ್ನಿಸಿದೆ. ಆದರೆ ಅವರು ಸಿಕ್ಕಿಲ್ಲ. ನೊಟೀಸ್‌ಗೆ ಉತ್ತರವನ್ನೂ ನೀಡಿಲ್ಲ. ಎಸ್‌ಐಟಿ ವಿಚಾರಣೆಗೆ ಹಾಜರಾಗದೇ ಇರುವುದರಿಂದ ತಂಡದ ಸದಸ್ಯರೇ ಹೊಳೆ ನರಸೀಪುರಕ್ಕೆ ಬಂದಿದ್ದರು. ಸುಮಾರು ಏಳು ಗಂಟೆಗಳ ಕಾಲ ಮನೆಯಲ್ಲಿ ಕಾಯ್ದರೂ ಭವಾನಿ ರೇವಣ್ಣ ವಿಚಾರಣೆಗೆ ಬಂದಿಲ್ಲ. ಇದರಿಂದ ಶನಿವಾರ ಸಂಜೆಯಿಂದಲೇ ಎಸ್‌ಐಟಿ ತಂಡಗಳು ಭವಾನಿ ಹುಡುಕಾಟದಲ್ಲಿ ತೊಡಗಿವೆ.

ಅವರಿಗಾಗಿ ಹೊಳೆ ನರಸೀಪುರ, ಹಾಸನದಲ್ಲಿ ಹುಡುಕಾಟ ನಡೆಸಿವೆ. ಮೈಸೂರು ಜಿಲ್ಲೆ ಕೆಆರ್‌ನಗರ ಸಮೀಪದ ಸಾಲಿಗ್ರಾಮದಲ್ಲಿರುವ ತವರು ಮನೆಯಲ್ಲಿ ಇರಬಹುದು ಎಂದು ಅಲ್ಲಿಯೂ ಹುಡುಕಾಟ ನಡೆಸಿದೆ. ಮೈಸೂರು ನಗರದಲ್ಲಿರುವ ಭವಾನಿ ಅವರ ಸಹೋದರಿ ಮನೆ, ಸಂಬಂಧಿ ಹರೀಶ್‌ ಎಂಬುವವರಿಗೆ ಸೇರಿದ ತೋಟದ ಮನೆ, ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗಳಿಗೂ ಎಸ್‌ಐಟಿ ಸಿಬ್ಬಂದಿ ತೆರಳಿದ್ದಾರೆ. ಎಲ್ಲಿಯೂ ಭವಾನಿ ಇರುವಿಕೆ ಕಂಡು ಬಂದಿಲ್ಲ. ಮೊಬೈಲ್‌ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಸೋಮವಾರವೂ ಅವರ ಪತ್ತೆ ಕಾರ್ಯ ಇನ್ನಷ್ಟು ಸ್ಥಳಗಳಲ್ಲಿ ಮುಂದುವರೆಸುವ ಸಾಧ್ಯತೆಗಳಿವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ರೇವಣ್ಣ ಜಾಮೀನು ಅರ್ಜಿ

ಈ ನಡುವೆ ಎಚ್‌ಡಿ ರೇವಣ್ಣ ಅವರ ವಿರುದ್ದ ಪ್ರಕರಣದಲ್ಲಿ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಸೋಮವಾರ ಬರಲಿದೆ. ಅವರ ಜಾಮೀನು ರದ್ದುಗೊಳಿಸಬೇಕು ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಕಾರಣದಿಂದ ಸೋಮವಾರದ ವಿಚಾರಣೆ ಕುತೂಹಲ ಕೆರಳಿಸಿದೆ. ಈಗಾಗಲೇ ಎರಡು ಪ್ರಕರಣದಲ್ಲಿ ರೇವಣ್ಣ ಜಾಮೀನು ಪಡೆದಿದ್ಧಾರೆ. ಅಪಹರಣ ಯತ್ನ ಪ್ರಕರಣದಲ್ಲಿ ಬಂಧನಕ್ಕೂ ಒಳಗಾಗಿದ್ದರು. ಇನ್ನೊಂದು ಪ್ರಕರಣದಲ್ಲಿ ಜಾಮೀನು ದೊರೆತಿದೆ.

ಪ್ರಜ್ವಲ್‌ ಅಸಹಕಾರ

ಮೂರು ದಿನದ ಹಿಂದೆಯೇ ಎಸ್‌ಐಟಿ ಪೊಲೀಸರ ಎದುರು ಶರಣಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿಚಾರಣೆ ಮುಂದುವರಿದಿದೆ. ಅವರಿಂದ ಎಸ್‌ಐಟಿ ಅಧಿಕಾರಿಗಳೂ ಹಾಗೂ ಸಿಬ್ಬಂದಿಗಳ ತಂಡ ಮಾಹಿತಿ ಕಲೆ ಹಾಕುತ್ತಿದೆ. ಆದರೆ ಅವರು ಸೂಕ್ತ ಉತ್ತರವನ್ನು ನೀಡುತ್ತಿಲ್ಲ. ಇದರಿಂದ ವಿಚಾರಣೆ ವಿಳಂಬವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ದ ನೀಡಲಾಗಿರುವ ಹೇಳಿಕೆಗೆ ಉತ್ತರವನ್ನು ಪಡೆಯುವ ಪ್ರಯತ್ನ ನಡೆದಿದೆ. ಆದರೆ ಪ್ರಜ್ವಲ್‌ ಅವರೇ ನನ್ನ ವಿರುದ್ದ ದೂರು ಕೊಟ್ಟವರು ಯಾರು, ಅತ್ಯಾಚಾರ ಎಂದು ಹೇಳಿದವರು ಯಾರು ಎಂದು ಮರು ಪ್ರಶ್ನೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಜೂನ್‌ 6ವರೆಗೂ ಪ್ರಜ್ವಲ್‌ ರೇವಣ್ಣ ಅವರ ಕಸ್ಟಡಿ ಇದೆ. ಅಲ್ಲಿಯವರೆಗೂ ಎಸ್‌ ಐಟಿ ವಿಚಾರಣೆ ಮುಂದುವರೆಸಲಿದೆ.

Whats_app_banner