ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಬೆಂಗಳೂರಿಗೆ ಬಾರದ ಪ್ರಜ್ವಲ್‌ ರೇವಣ್ಣ, ಕಾದು ಕಾದು ಸುಸ್ತಾದ ಪೊಲೀಸರು

Hassan Scandal: ಬೆಂಗಳೂರಿಗೆ ಬಾರದ ಪ್ರಜ್ವಲ್‌ ರೇವಣ್ಣ, ಕಾದು ಕಾದು ಸುಸ್ತಾದ ಪೊಲೀಸರು

Prajwal Revanna ಹಾಸನದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ದೇಶಕ್ಕೆ ಮರಳಬಹುದು ಎಂದು ಪೊಲೀಸರು ಬೆಂಗಳೂರಿನಲ್ಲಿ ದಿನವಿಡೀ ಕಾಯ್ದರೂ ಬರಲಿಲ್ಲ.

ಹಾಸನ ಸಂಸದ ಪ್ರಜ್ವಲ್‌ ಸೆರೆಗೆ ಮುಂದುವರೆದ ಪ್ರಯತ್ನ.
ಹಾಸನ ಸಂಸದ ಪ್ರಜ್ವಲ್‌ ಸೆರೆಗೆ ಮುಂದುವರೆದ ಪ್ರಯತ್ನ.

ಬೆಂಗಳೂರು: ಹಾಸನದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ಬುಧವಾರ ದಿನವಿಡೀ ಪೊಲೀಸರಿಗೆ ಕಾಯುವ ಕೆಲಸ ಕೊಟ್ಟರು. ಹಾಸನ-ಹೊಳೆನರಸೀಪುರದ ಪ್ರಕರಣಗಳ ಕುರಿತು ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು. ಪ್ರಜ್ವಲ್‌ ರೇವಣ್ಣ ಬುಧವಾರ ಸಂಜೆ ಆಗಮಿಸಬಹುದು. ಆನಂತರ ಅವರನ್ನು ಬಂಧಿಸಬಹುದು ಎಂದು ವಿಶೇಷ ತನಿಖಾ ತಂಡದವರು ಯೋಜಿಸಿದ್ದರು. ಆದರೆ ಪ್ರಜ್ವಲ್‌ ರೇವಣ್ಣ ಬರಲೇ ಇಲ್ಲ. ಆದರೂ ಪ್ರಜ್ವಲ್‌ ಸೆರೆಗೆ ಇನ್ನೂ ವಿಶೇಷ ತಂಡದ ಪೊಲೀಸರು ಕಾಯುತ್ತಲೇ ಇದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಜಾಮೀನು ಪಡೆದು ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಪ್ರಜ್ವಲ್‌ ಭಾರತಕ್ಕೆ ಮರಳಬಹುದು ಎನ್ನುವ ಮಾಹಿತಿ ಇತ್ತು. ಪ್ರಜ್ವಲ್‌ ಜರ್ಮನಿಯ ಫ್ರಾಂಕ್‌ ಫರ್ಟ್‌ನಿಂದ ಬೆಂಗಳೂರಿಗೆ ಆಗಮಿಸುವ ವಿಮಾನದ ಟಿಕೆಟ್‌ ಕೂಡ ಬುಕ್‌ ಆಗಿತ್ತು. ಇದರಿಂದ ಸಂಜೆ ಹೊತ್ತಿಗೆ ಪ್ರಜ್ವಲ್‌ ಬರಬಹುದು ಎನ್ನುವ ನಿರೀಕ್ಷೆಯೂ ಇತ್ತು. ಇದರಿಂದ ವಿಶೇಷ ತನಿಖಾ ತಂಡದ ಜತೆಗೆ ಹೆಚ್ಚುವರಿ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಮಫ್ತಿಯಲ್ಲೂ ಸಾಕಷ್ಟು ಮಂದಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಪ್ರಜ್ವಲ್‌ ರೇವಣ್ಣ ಬಂದರೆ ಅವರಿಗೆ ಬಂಧನಕ್ಕೆ ಬಾಡಿ ವಾರೆಂಟ್‌ ಜಾರಿಗೊಳಿಸಲು ಸಿದ್ದತೆ ಮಾಡಿಕೊಂಡಿದ್ದರು. ಅವರನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ಯುವ ಲೆಕ್ಕಾಚಾರ ಪೊಲೀಸರದ್ದಾಗಿತ್ತು. ಎಸ್‌ಐಟಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸುವ ಸಾಧ್ಯತೆಯೂ ಇತ್ತು.

ಈ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಪ್ರಜ್ವಲ್‌ ಪ್ರಯಾಣವನ್ನು ರದ್ದು ಮಾಡಿರುವ ಮಾಹಿತಿ ಪೊಲೀಸರು ವಿಮಾನ ನಿಲ್ದಾಣ ಅಧಿಕಾರಿಗಳಿಂದ ದೊರೆಯಿತು. ಪ್ರಜ್ವಲ್‌ ಹೆಸರಲ್ಲಿ ಟಿಕೆಟ್‌ ಬುಕ್‌ ಆಗಿದ್ದರೂ ಬೋರ್ಡಿಂಗ್‌ ಮಾತ್ರ ಆಗಿರಲಿಲ್ಲ. ವಿಮಾನ ಹೊರಟ ನಂತರ ಅದರಲ್ಲಿ ಪ್ರಜ್ವಲ್‌ ಇರಲಿಲ್ಲ ಎನ್ನುವ ಮಾಹಿತಿಯೂ ದೊರೆಯಿತು.

ಪ್ರಜ್ವಲ್‌ ಬರುವುದಿಲ್ಲ ಎನ್ನುವುದು ತಿಳಿದರೂ ಪೊಲೀಸರ ಕಾಯುವಿಕೆ ಮಾತ್ರ ನಿಂತಿರಲಿಲ್ಲ. ಬೇರೆ ಮಾರ್ಗದಲ್ಲಿ ಆಗಮಿಸಿ ಅಲ್ಲಿಂದ ಬೆಂಗಳೂರಿಗೆ ಬರಬಹುದಾ ಎನ್ನುವ ಲೆಕ್ಕಾಚಾರದೊಂದಿಗೆ ಪೊಲೀಸರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವುದು ಕಂಡು ಬಂದಿತು.

ಪ್ರಜ್ವಲ್‌ಗಾಗಿ ಹಿರಿಯ ಅಧಿಕಾರಿಗಳು ಸೇರಿದಂತೆ ದೊಡ್ಡ ತಂಡವೇ ವಿಮಾನ ನಿಲ್ದಾಣದಲ್ಲಿ ಕಾದಿತ್ತು. ವಶಕ್ಕೆ ಪಡೆಯಲು ಸಿದ್ದತೆಯೂ ಆಗಿತ್ತು.ಆ ವಿಮಾನದಲ್ಲಿ ಪ್ರಜ್ವಲ್‌ ಬಾರದೇ ಇರುವುದು ಖಚಿತವಾಗಿದೆ. ಈ ಕುರಿತು ಎಸ್‌ಐಟಿ ಮುಖ್ಯಸ್ಥರಿಗೆ ಮಾಹಿತಿ ರವಾನಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನವೀನ್‌ ನಿವಾಸಕ್ಕೆ ದಾಳಿ

ಈ ನಡುವೆ ಪೆನ್‌ಡ್ರೈವ್‌ ಹಂಚಿಕೆ ವಿಚಾರದಲ್ಲಿ ಯಾರ ಪಾತ್ರವಿದೆ ಎಂದು ಎಸ್‌ಐಟಿ ಅಧಿಕಾರಿಗಳ ತಂಡ ತನಿಖೆ ತೀವ್ರಗೊಳಿಸಿದೆ. ಹಾಸನದಲ್ಲಿಯೇ ಬೀಡು ಬಿಟ್ಟಿರುವ ತಂಡ ಈಗಾಗಲೇ ನವೀನ್‌ಗೌಡ, ಕಾರ್ತಿಕ್‌ ಗೌಡ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಿತ್ತು. ಬುಧವಾರವೂ ಹಲವು ಕಡೆಗೆ ಭೇಟಿ ನೀಡಿ ಮಾಹಿತಿಯನ್ನು ಸಿಬ್ಬಂದಿಗಳು ಸಂಗ್ರಹಿಸಿದರು.

ಬೇಲೂರು ತಾಲ್ಲೂಕಿನಲ್ಲಿರುವ ನವೀನ್‌ ನಿವಾಸದಲ್ಲಿ ಪೆನ್‌ಡ್ರೈವ್‌ ಸೇರಿದಂತೆ ಇತರೆ ವಿಡಿಯೋ ತುಣುಕುಗಳು ಇರಬಹುದೇ. ಯಾರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ ಎನ್ನುವುದು ಸೇರಿ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಬಾರದ ರೇವಣ್ಣ

ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಸನ ಹಾಗೂ ಹೊಳೆ ನರಸೀಪುರಕ್ಕೆ ತೆರಳುವ ಕಾರ್ಯಕ್ರಮವಿತ್ತು.ಆದರೆ ಕೊನೆ ಕ್ಷಣದಲ್ಲಿ ರದ್ದು ಮಾಡಿ ಬೆಂಗಳೂರಲ್ಲೇ ರೇವಣ್ಣ ಉಳಿದರು. ಕುಟುಂಬದವರು ಹಾಗೂ ಕಾನೂನು ತಜ್ಞರೊಂದಿಗೆ ಅವರು ಸಮಾಲೋಚನೆ ನಡೆಸಿದರು.

ಅಲ್ಲಿ ಹೋಗಿ ಸಂಭ್ರಮಾಚರಣೆ ಮಾಡುವುದು ಬೇಡ. ಕಾನೂನಿನ ತೊಡಕು ಕೂಡ ಆಗಬಹುದು.ಸದ್ಯಕ್ಕೆ ಕಾನೂನು ಸಂಕಷ್ಟದಿಂದ ಪಾರಾಗದೇ ಇರುವುದರಿಂದ ಇದು ಬೇಡ ಎನ್ನುವ ಸಲಹೆಯನ್ನು ಕಾನೂನು ಸಲಹೆಗಾರರು ನೀಡಿದ್ದರಿಂದ ಭೇಟಿಯಿಂದ ರೇವಣ್ಣ ಹಿಂದೆ ಸರಿದರು.

IPL_Entry_Point