ಕನ್ನಡ ಸುದ್ದಿ  /  ಕರ್ನಾಟಕ  /  Prajwal Revanna: ಬೆಂಗಳೂರಲ್ಲಿ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಕ್ಷಣಗಣನೆ, ಹೇಗಿರಲಿದೆ ಎಸ್‌ಐಟಿ ವಿಚಾರಣೆ

Prajwal Revanna: ಬೆಂಗಳೂರಲ್ಲಿ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಕ್ಷಣಗಣನೆ, ಹೇಗಿರಲಿದೆ ಎಸ್‌ಐಟಿ ವಿಚಾರಣೆ

Hassan Scandal ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ, ಸಂಸದ ಪ್ರಜ್ವಲ್‌ ರೇವಣ್ಣ ಬೆಂಗಳೂರು ವಿಮಾನ ನಿಲ್ದಾಣ( Bangalore Airport) ಗೆ ಬಂದಿಳಿಯಲಿದ್ದು. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಪೊಲೀಸ್‌ ತಂಡ ಅಣಿಯಾಗಿದೆ.

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಸಿದ್ದವಾದ ಪೊಲೀಸರು.
ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಸಿದ್ದವಾದ ಪೊಲೀಸರು.

ಬೆಂಗಳೂರು: ಹಾಸನದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಿಲುಕು ಸತತ 33 ದಿನಗಳಿಂದ ಕಾಣೆಯಾಗಿದ್ದ ಹಾಸನ ಸಂಸದ ಪ್ರಜ್ವಲ್‌ ಬಂಧನಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ವಿಶೇಷ ತನಿಖಾ ತಂಡ, ಗುಪ್ತಚರ ವಿಭಾಗ ಹಾಗೂ ಬೆಂಗಳೂರು ಪೊಲೀಸರು ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆಯಲು ಸಿದ್ದತೆ ಮಾಡಿಕೊಂಡಿದ್ದಾರೆ. ಪ್ರಜ್ವಲ್‌ ವಿರುದ್ದ ಸದ್ಯ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಮೂರು ಪ್ರಕರಣಗಳಿದ್ದು ಒಂದೊಂದೇ ಪ್ರಕರಣದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಟ್ರೆಂಡಿಂಗ್​ ಸುದ್ದಿ

ಎಸ್‌ಐಟಿ ನೀಡಿದ್ದ ನೊಟೀಸ್‌ಗೆ ಒಂದು ವಾರದ ಸಮಯ ಕೇಳಿ ತಿಂಗಳಾದರೂ ವಾಪಾಸ್‌ ಬಾರದ ಪ್ರಜ್ವಲ್‌ ರೇವಣ್ಣ ಈಗ ವಾಪಾಸ್‌ ಬರುತ್ತಿದ್ದಾರೆ. ರಾತ್ರಿ 1 ಗಂಟೆ ಹೊತ್ತಿಗೆ ಲುಫ್ತಾನ್ಸ ವಿಮಾನದಲ್ಲಿ ಜರ್ಮನಿಯ ಮುನಿಚ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಆನಂತರ ಪ್ರಕ್ರಿಯೆಗಳು ಹೀಗಿರಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಚಾರಣೆ ಸ್ವರೂಪ, ಕಾನೂನು ಪ್ರಕ್ರಿಯೆ ಹೀಗಿರಲಿದೆ

 • ಪ್ರಜ್ವಲ್‌ ಅವರನ್ನು ಮೊದಲು ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧಿಸಿ ಎಸ್‌ಐಟಿಯ ಅಧಿಕಾರಿಗಳ ತಂಡ ಸುಧೀರ್ಘ ವಿಚಾರಣೆಗೆ ಒಳಪಡಿಸಲಾಗುತ್ತದೆ. ಶುಕ್ರವಾರ ದಿನವಿಡೀ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಬಹುದು.
 • ಅವರನ್ನು ಬಂಧಿಸಿದ 24 ಗಂಟೆ ಒಳಗೆ ನ್ಯಾಯಾಲಯ ಇಲ್ಲವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲೇಬೇಕು. ಏಕೆಂದರೆ ಯಾವುದೇ ವ್ಯಕ್ತಿ ಬಂಧನದ 24 ಗಂಟೆ ನಂತರ ಪೊಲೀಸ್‌ ಸುಪರ್ದಿಯಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯಬೇಕಾಗುತ್ತದೆ.
 • ಬಹುತೇಕ ಶುಕ್ರವಾರ ಸಂಜೆ ಇಲ್ಲವೇ ರಾತ್ರಿಯ ಹೊತ್ತಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಪ್ರಜ್ವಲ್‌ ಅವರನ್ನು ಹಾಜರುಪಡಿಸುವ ಸಾಧ್ಯತೆಯಿದೆ. ಸಂಜೆ ಒಳಗಾದರೆ ನ್ಯಾಯಾಲಯ ಸಂಜೆ ನಂತರವಾದರೆ ನ್ಯಾಯಾಧೀಶರ ನಿವಾಸದಲ್ಲಿಯೇ ಹಾಜರುಪಡಿಸಬಹುದು.

ಇದನ್ನೂ ಓದಿರಿ: Prajwal Revanna: ಜರ್ಮನಿಯಿಂದ ಹೊರಡಲು ಅಣಿಯಾದ ಪ್ರಜ್ವಲ್‌ ರೇವಣ್ಣ, ಮಧ್ಯರಾತ್ರಿ ಬೆಂಗಳೂರಿಗೆ ಆಗಮನ ನಿರೀಕ್ಷೆ

 • ಬಳಿಕ ಹೆಚ್ಚಿನ ವಿಚಾರಣೆಗಾಗಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಪ್ರಜ್ವಲ್‌ ಅವರನ್ನು ತಮ್ಮ ವಶಕ್ಕೆ ಪಡೆಯಲು ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಬಹುದು.
 • ವಶಕ್ಕೆ ಪಡೆದರೆ ಹೇಳಿಕೆಗಳನ್ನು ದಾಖಲಿಸುವ ಜತೆಗೆ ಸ್ಥಳ ಮಹಜರಿಗೆ ಹಾಸನ, ಹೊಳೆನರಸೀಪುರ, ಪಡುವಲ ಹಿಪ್ಪೆಗೆ ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌ ಐಟಿ ತಂಡ ಕರೆದುಕೊಂಡು ಹೋಗಬಹುದು.
 • ಅಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಕೆಲಸವನ್ನು ಎಸ್‌ಐಟಿ ತನಿಖಾ ತಂಡ ಮಾಡಲಿದೆ. ಈಗಾಗಲೇ ಎಸ್‌ಐಟಿ ಸಂಗ್ರಹಿಸಿರುವ ಸಾಕ್ಷ್ಯಗಳು, ಜಪ್ತಿ ಮಾಡಿಕೊಂಡಿರುವ ವಸ್ತು ಗಳನ್ನಾಧರಿಸಿ ತನಿಖೆ ಮಾಡಬಹುದು.
 • ಮುಖ್ಯವಾಗಿ ಪ್ರಜ್ವಲ್‌ ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿದ ಸ್ಥಳ, ಸಮಯ, ವಿಡಿಯೋ ಚಿತ್ರೀಕರಣ ಮಾಡಿದ್ದು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಹೇಳಿಕೆ ಪಡೆಯಬಹುದು
 • ಇದೇ ವೇಳೆ ಜಾಮೀನು ಬಯಸಿ ನ್ಯಾಯಾಲಯಕ್ಕೆ ಪ್ರಜ್ವಲ್‌ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿರಿ: Prajwal Revanna: ಮೇ 31ಕ್ಕೆ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ಆಗಮನ; ಈವರೆಗೆ ತಿಳಿಯಬೇಕಾದ 5 ವಿಷಯಗಳಿವು

 • ಎಸ್‌ಐಟಿ ವಿಚಾರಣೆ ಅವಧಿ ಮುಗಿದ ಬಳಿಕ ಪ್ರಜ್ವಲ್‌ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು.
 • ಇದಾದ ನಂತರ ಇನ್ನೂ ಎರಡು ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ತಮ್ಮ ವಶಕ್ಕೆ ಎಸ್‌ಐಟಿ ಪೊಲೀಸರು ಪಡೆಯಲು ಅನುಮತಿಯನ್ನು ಕೇಳಬಹುದು.
 • ಇದೇ ವೇಳೆ ಜಾಮೀನು ಮಂಜೂರು ಆಗದೇ ಇದ್ದರೆ ಪ್ರಜ್ವಲ್‌ ರೇವಣ್ಣ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲಿಗೂ ಹೋಗಬಹುದು.

( ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024