Suraj Revanna: ಡಾ.ಸೂರಜ್ ರೇವಣ್ಣಗೆ ಇನ್ನು 2 ದಿನ ಪೊಲೀಸ್ ಕಸ್ಟಡಿ, ಬೆಂಗಳೂರು ನ್ಯಾಯಾಲಯ ಆದೇಶ
Hassan News ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರನ್ನು ಇನ್ನೂ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲು ಬೆಂಗಳೂರು ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ( Holenarasipura police) ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ( MLC Suraj Revanna) ಅವರು ಇನ್ನೂ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿಯೇ( Karnataka CID Police Custody) ಇರಬೇಕು. ಈ ಬಗ್ಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು (Bangalore court) ಸೋಮವಾರ ಆದೇಶ ಹೊರಡಿಸಿದೆ. ಸಿಐಡಿ ಪೊಲೀಸರು ಡಾ.ಸೂರಜ್ ರೇವಣ್ಣ ಅವರನ್ನು ವಿಚಾರಣೆಗೆ ಇನ್ನೂ ಕೆಲವು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದರು. ಇದನ್ನು ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೂರಜ್ ರೇವಣ್ಣ ಅವರನ್ನು ಸಿಐಡಿ ಪೊಲೀಸರ ಕಸ್ಟಡಿಗೆ ನೀಡಿತು.
ಸೂರಜ್ ರೇವಣ್ಣ ವಿರುದ್ದ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ. ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಒತ್ತಾಯಿಸಿದರು ಎಂದು ಸೂರಜ್ ವಿರುದ್ದ ಇಬ್ಬರು ದೂರು ನೀಡಿದ್ದಾರೆ. ಈ ಕುರಿತು ಹೊಳೆನರಸೀಪುರ ಠಾಣೆ ಪೊಲೀಸರು ಕಳೆದ ತಿಂಗಳೇ ಸೂರಜ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಆನಂತರ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಪೊಲೀಸರು ಸೂರಜ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ನ್ಯಾಯಾಲಯವು ಸೂರಜ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದರಿಂದ ಸಿಐಡಿ ತಂಡವು ಹಾಸನ ಹಾಗೂ ಹೊಳೆ ನರಸೀಪುರಕ್ಕೆ ಕರೆದು ತಂದು ಹೇಳಿಕೆ ದಾಖಲಿಸಿಕೊಂಡಿದೆ. ಸಾಕ್ಷ್ಯಗಳನ್ನೂ ಕೂಡ ಸಂಗ್ರಹಿಸಿದೆ. ಈ ಪ್ರಕರಣದಲ್ಲಿ ಸೂರಜ್ ಅವರ ಪೊಲೀಸ್ ಕಸ್ಟಡಿ ಸೋಮವಾರ ಮುಗಿದಿತ್ತು. ಈ ಕಾರಣದಿಂದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಸೂರಜ್ ರೇವಣ್ಣ ಅವರ ವಿಚಾರಣೆ ಇನ್ನೂ ಬಾಕಿಯಿದೆ. ಅವರನ್ನು ಐದು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಐಡಿ ಪೊಲೀಸರ ಪರವಾಗಿ ಸರ್ಕಾರಿ ವಕೀಲರು ಕೋರಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಐದು ದಿನದ ಬದಲು ಎರಡು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡುವ ಆದೇಶ ನೀಡಿದರು.
ವಿಶೇಷ ಜನಪ್ರತಿನಿಧಿಗಳ ಆದೇಶದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಸೂರಜ್ ರೇವಣ್ಣ ಅವರನ್ನು ಕರೆದೊಯ್ದು ವಿಚಾರಣೆ ಮುಂದುವರೆಸಿದರು.
ಬುಧವಾರದಂದು ಅವರನ್ನು ಮತ್ತೆ ನಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.