Bangalore News: ನನ್ನ ಹತ್ತಿರಕ್ಕೆ ಬಂದು ಜೋರಾಗಿ ಕೂಗಾಡಿದ; ಓಲಾ ಆಟೋ ಚಾಲಕನ ಅನುಚಿತ ವರ್ತನೆಯನ್ನು ಹಂಚಿಕೊಂಡ ಮಹಿಳೆ
ರಾತ್ರಿ ಪ್ರಯಾಣದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ, ಕೊಡದಿದ್ದಾಗ ನನ್ನ ಹತ್ತಿರಕ್ಕೆ ಬಂದು ಜೋರಾಗಿ ಕೂಗಾಡಿದ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಮಹಿಳೆಯೂಬ್ಬರು ಬೆಂಗಳೂರಿನ ಓಲಾ ಆಟೋ ಚಾಲಕನ ಕೃತ್ಯವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಓಲಾ ಆಟೋ ಚಾಲಕರು ಪ್ರಯಾಣಿಕರ ಮೇಲೆ ಹಲ್ಲೆಗೆ ಮುಂದಾಗುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೆಚ್ಚಿನ ಹಣಕ್ಕೆ ಬೇಡಿಕೆ ಇಡುವಂತಹ ಪ್ರಕರಣಗಳು ಮುಂದುವರಿದಿದೆ. ಇತ್ತೀಚೆಗಷ್ಟ ನಗರದಲ್ಲಿ ಮಹಿಳೆಯೊಬ್ಬರಿಗೆ ಇಂತಹದ್ದೇ ಅನುಭವವಾಗಿದ್ದು, ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂತಿಮ ಬಿಲ್ ಮೊತ್ತಕ್ಕಿಂತ ಹೆಚ್ಚಿನ ಹಣಕ್ಕಾಗಿ ಆಟೋ ಚಾಲಕ ಬೇಡಿಕೆ ಇಟ್ಟಿದ್ದಾನೆ. ಹೆಚ್ಚುವರಿ ಮೊತ್ತವನ್ನು ಕೊಡದಿದ್ದಾಗ ನನ್ನ ಹತ್ತಿರಕ್ಕೆ ಬಂದ, ಕೂಗಾಡಿದ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ತನಿಷಾ ಮಲ್ಯ, "ಬೆಂಗಳೂರಿನಲ್ಲಿ ಇಂದು @Olacabs ಬುಕಿಂಗ್ ಮಾಡಿದಾಗ ನನಗೆ ಭಯಾನಕ ಮತ್ತು ಗೊಂದಲದ ಅನುಭವವಾಯಿತು. ನಾನು ಓಲಾ ಆಟೋವನ್ನು ಬುಕ್ ಮಾಡಿದ್ದೆ, ಅದು 25 ಕಿ.ಮೀ ಪ್ರಯಾಣಕ್ಕೆ 347-356 ರೂ.ಗಳ ಶುಲ್ಕವನ್ನು ತೋರಿಸಿತು. ನಾವು ನನ್ನ ನಿಗದಿತ ಸ್ಥಳವನ್ನು ತಲುಪಿದ ನಂತರ, ಚಾಲಕ 45 ಕಿಮೀ.ಗಿಂತ ಹೆಚ್ಚು ಓಡಿಸಿದ್ದಾಗಿ ಹೇಳಿ ಕನಿಷ್ಠ 470 ರೂ.ಗಳನ್ನು ಕೊಡಬೇಕೆಂದು ಪಟ್ಟು ಹಿಡಿದ.
ಆಟೋ ಚಾಲಕ ತನ್ನ ಮೇಲೆ ಕೂಗಲು ಪ್ರಾರಂಭಿಸಿದನು ಮತ್ತು ಹೆಚ್ಚುವರಿ ಹಣವನ್ನು ಪಾವತಿಸದಿದ್ದಕ್ಕಾಗಿ ನಿಂದಿಸಲು ಪ್ರಾರಂಭಿಸಿದನು ಎಂದು ತನಿಷಾ ಮಲ್ಯ ಹೇಳಿಕೊಂಡಿದ್ದಾರೆ. ಆತ ಹೆಚ್ಚುವರಿ ಹಣವನ್ನು ತೆಗೆದುಕೊಳ್ಳಬಾರದು ಎಂದು ಹೇಳಿದಾಗ ಆತ ಆಟೋದಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ. ಒಂದು ವೇಳೆ ನೀವು 470 ರೂಪಾಯಿಗಳನ್ನು ಪಾವತಿಸಲು ಬಯಸದಿದ್ದರೆ ಕಸ್ಟಮರ್ ಕೇರ್‌ನಲ್ಲಿ ಸಮಸ್ಯೆಯನ್ನು ಎತ್ತಬೇಕು ಎಂದು ಹೇಳಿದರು. ಕೊನೆಗೆ ಆತನಿಗೆ 356 ಪಾವತಿಸಿ ನನ್ನ ಅಪಾರ್ಟ್ಮೆಂಟ್ ಗೇಟ್‌ಗೆ ಹೋಗಲು ಪ್ರಯತ್ನಿಸಿದ ನಂತರ, ಅವನು ನನ್ನ ಮೇಲೆ ಹೆಚ್ಚು ನಿಂದನಾತ್ಮಕ ಪದಗಳನ್ನು ಕೂಗಲು ಪ್ರಾರಂಭಿಸಿದನು ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ. ಈ ಘಟನೆ ಜುಲೈ 10ರ ಬುಧವಾರ ರಾತ್ರಿ ನಡೆದಿರುವುದಾಗಿ ಮಹಿಳೆ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನಂತರ ಈಕೆ ಪರಿಸ್ಥಿತಿಯಿಂದ ಪಾರಾಗಲು ತಮ್ಮ ತಂದೆ ಸಹಾಯ ಮಾಡಿದರು. ಸಹಾಯ ಬೇಕಾದಾಗ ಓಲಾವನ್ನು ತಲುಪಲು ಸಾಧ್ಯವಿಲ್ಲ ಎಂದು ದೂರಿದರು. "ನಾನು ನನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದುದು ನನ್ನ ಅದೃಷ್ಟ ಮತ್ತು ನನ್ನ ತಂದೆ ಮಧ್ಯಪ್ರವೇಶಿಸಲು ಸಾಧ್ಯವಾಯಿತು. ಆದರೂ ಅವರು ನನ್ನ ಮೇಲೆ ಶಾಪ ಹಾಕುತ್ತಿದ್ದಾರೆ ಎಂದು ನಾನು ಹೇಳಿದಾಗ, ಆತ ನನ್ನ ಹತ್ತಿರ ಬಂದು ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನನ್ನ ಮುಖದ ಸಮೀಪಕ್ಕೆ ಬಂದು ಕಿರುಚಲು ಪ್ರಾರಂಭಿಸಿದ. ಇದು ತೀವ್ರ ಆಘಾತಕಾರಿ ಪರಿಸ್ಥಿತಿ. ನಾನು ಇಲ್ಲಿಯವರೆಗೆ @Olacabs ಯಾವುದೇ ಬೆಂಬಲವನ್ನು ಪಡೆಯಲು ಸಾಧ್ಯವಾಗಲಿಲ್ಲ. ಗ್ರಾಹಕ ಸೇವಾ ಕೇಂದ್ರದೊಂದಿಗೂ ಮಾತನಾಡಲು ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಆದರೆ ಇವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಮುಂದಿನ ಕ್ರಮಕ್ಕಾಗಿ ಸಂಪರ್ಕಿಸುವಂತೆ ಕೋರಿದ್ದಾರೆ. ಪ್ರಯಾಣದ ಕೊನೆಯಲ್ಲಿ ಆಟೋ ಚಾಲಕರರು ಹೆಚ್ಚುವರಿ ಹಣಕ್ಕಾಗಿ ಒತ್ತಾಯಿಸುತ್ತಾರೆ ಎಂದು ಒಂದಷ್ಟು ಮಂದಿ ತನಿಷಾ ಮಲ್ಯ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಓಲಾ ಸಪೋರ್ಟ್ ತಂಡದವರು ಇಂದು (ಜುಲೈ 12, ಶುಕ್ರವಾರ) ಬೆಳಗ್ಗೆ ನನಗೆ ಕರೆ ಮಾಡಿದ್ದರು. ಘಟನೆ ಸಂಬಂಧ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. ವೈಟ್‌ಫೀಲ್ಡ್ ಟ್ರಾಫಿಕ್ ವಿಭಾಗದ ಎಸಿಪಿ ಅವರ ಬೆಂಬಲವೂ ಸಿಕ್ಕಿದೆ. ನಾನು ಈ ವಿಷಯವನ್ನು ಕಾನೂನುಬದ್ದವಾಗಿ ಮುಂದುವರಿಸದಿರಲು ನಿರ್ಧರಿಸಿದ್ದೇನೆ. ಈ ವಿಷಯವನ್ನು ಇಲ್ಲಿಗೆ ಬಿಡಲು ಬಯಸುತ್ತೇನೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಮತ್ತೊಂದು ಪೋಸ್ಟ್ ಹಾಕಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
