Bangalore News: ಗೂಡ್ಸ್‌ ವಾಹನ ಡಿಕ್ಕಿಯಾಗಿ ಹೆದ್ದಾರಿ ಗಸ್ತು ಅಧಿಕಾರಿ ಸಾವು, ಇದೇ ವಾರ ಮಗಳ ಮದುವೆ ನಿಶ್ಚಯ ಮಾಡಿದ್ದರು !-bangalore news highway patrolling officer died vehicle hit at bangalore family in sad mood before daughter marriage ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಗೂಡ್ಸ್‌ ವಾಹನ ಡಿಕ್ಕಿಯಾಗಿ ಹೆದ್ದಾರಿ ಗಸ್ತು ಅಧಿಕಾರಿ ಸಾವು, ಇದೇ ವಾರ ಮಗಳ ಮದುವೆ ನಿಶ್ಚಯ ಮಾಡಿದ್ದರು !

Bangalore News: ಗೂಡ್ಸ್‌ ವಾಹನ ಡಿಕ್ಕಿಯಾಗಿ ಹೆದ್ದಾರಿ ಗಸ್ತು ಅಧಿಕಾರಿ ಸಾವು, ಇದೇ ವಾರ ಮಗಳ ಮದುವೆ ನಿಶ್ಚಯ ಮಾಡಿದ್ದರು !

Bangalore crime ಬೆಂಗಳೂರಿನಲ್ಲಿ ಆಸ್ತಿಗಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದ್ದರೆ, ಅಪಘಾತದಲ್ಲಿ ಅಧಿಕಾರಿಯೊಬ್ಬರು ಮೃತಪಟ್ಟಿದ್ಧಾರೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನ ಅಪಘಾತದಲ್ಲಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಅಪಘಾತದಲ್ಲಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಬೆಂಗಳೂರು: ಆ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು.ಮುಂದಿನ ವಾರ ಮಗಳ ಮದುವೆ ನಿಗದಿಯಾಗಿದ್ದರಿಂದ ಮನೆಯವರೆಲ್ಲಾ ಅದಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಖುಷಿಯ ಕ್ಷಣದಲ್ಲಿ ಮುಳುಗಿದ್ದ ಕುಟುಂಬದಲ್ಲಿ ಈಗ ಸೂತಕದ ಛಾಯೆ.ಮನೆಯ ಯಜಮಾನರೇ ಅಪಘಾತಕ್ಕೀಡಾಗಿ ಮೃತಪಟ್ಟು ಕುಟುಂಬದವನ್ನು ಕಣ್ಣೀರಲ್ಲಿ ಮುಳುಗಿಸಿದೆ. ಇದು ನಡೆದಿರುವುದು ಬೆಂಗಳೂರು ನಗರದಲ್ಲಿ. ಮೃತಪಟ್ಟ ಅಧಿಕಾರಿ ತುಮಕೂರು ಜಿಲ್ಲೆಯವರು. ಎಲೆಕ್ಟ್ರಾನಿಕ್ಸ್‌ ಸಿಟಿ ಮೇಲ್ಸೇತುವೆ ಮೇಲೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೆದ್ದಾರಿ ಗಸ್ತು ತಂಡದ ಅಧಿಕಾರಿಯೊಬ್ಬರು ಮೃತಪಟ್ಟಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನ ಪಿ.ಮಂಜುನಾಥ್‌ ಮೃತ ಅಧಿಕಾರಿ. 52 ವರ್ಷದ ಇವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಸ್ತು ತಂಡದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮತ್ತೊಬ್ಬ ಸಿಬ್ಬಂದಿ ರಾಜಣ್ಣ ಮತ್ತು ಗೂಡ್ಸ್‌ ಚಾಲಕ ಸಂದೀಪ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೇಲ್ಸೇತುವೆ ಮೇಲೆ ಶನಿವಾರ ತಡರಾತ್ರಿ ಕಾರೊಂದು ಕೆಟ್ಟು ನಿಂತಿತ್ತು. ಮಂಜುನಾಥ್‌ ಅವರು ಟೋಯಿಂಗ್‌ ವಾಹನವನ್ನು ಕರೆಯಿಸಿ ಕಾರನ್ನು ತೆರವು ಮಾಡಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಗೂಡ್ಸ್‌ ವಾಹನವೊಂದು ಟೋಯಿಂಗ್‌ ವಾಹನಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಟೋಯಿಂಗ್‌ ವಾಹನ ಮತ್ತು ಕಾರು ನಜ್ಜುಗುಜ್ಜಾಗಿದೆ.

ಮಂಜುನಾಥ್‌ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗಲೇ ಅವರು ಮೃತಪಟ್ಟಿದ್ದರು. ಗೂಡ್ಸ್‌ ಚಾಲಕ ಸಂದೀಪ್‌ ಕಾಲು ಮುರಿದಿದ್ದರೆ ರಾಜಣ್ಣ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಗಸ್ಟ್‌ 10 ರಂದು ಮಂಜುನಾಥ್‌ ಅವರ ಮಗಳ ವಿವಾಹ ನಿಶ್ಚಯವಾಗಿತ್ತು. ಮಗಳ ಮದುವೆಗೆ ಈಗಾಗಲೇ ಆಹ್ವಾನಪತ್ರಿಕೆಗಳನ್ನು ಹಂಚುತ್ತಿದ್ದರು. ಹಗಲು ಮದುವೆ ಕೆಲಸಗಳನ್ನು ನೋಡಿಕೊಂಡು ರಾತ್ರಿ ಪಾಳಿ ಕೆಲಸಕ್ಕೆ ಹಾಜರಾಗುತ್ತಿದ್ದರು. ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿಗಾಗಿ ವ್ಯಕ್ತಿ ಕೊಲೆ

ಆಸ್ತಿಗಾಗಿ ಬಾಬುರೆಡ್ಡಿ ಎಂಬುವರನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿ ನಗರ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಬುರೆಡ್ಡಿ ಅವರ ಸಹೋದರಿಯ ಪತಿ ಗೋಪಾಲ್‌ ರೆಡ್ಡಿ ಮತ್ತು ಅಣ್ಣನ ಮಗ ಭರತ್‌ ಅವರೇ ಬಂಧಿತ ಆರೋಪಿಗಳು. ಬಾಬುರೆಡ್ಡಿ ಪಿತ್ರಾರ್ಜಿತ ಆಸ್ತಿಯಲ್ಲಿ ತನ್ನ ಅಣ್ಣ ಮತ್ತು ಸಹೋದರಿಗೆ ಪಾಲು ನೀಡಿರಲಿಲ್ಲ. ಇದರಿಂದ ಎರಡೂ ಕಡೆಯವರಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಆಸ್ತಿ ಹಂಚಿಕೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.

ಆಸಿ ಹಂಚಿಕೆ ಕುರಿತು ಮಾತುಕತೆ ನಡೆಸಲು ಎಲ್ಲರೂ ವಿಜಿನಾಪುರದಲ್ಲಿ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಗೋಪಾಲ್‌ ರೆಡ್ಡಿ ಮತ್ತು ಭರತ್‌ ಇಬ್ಬರೂ ಬಾಬು ರೆಡ್ಡಿ ಅವರಿಗೆ ಚಾಕುವಿನಿಂದ ಇರಿದಿದ್ದರು. ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಬಾಬು ರೆಡ್ಡಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬ್ರಿಟನ್‌ ಪ್ರಜೆ ಬೆಂಗಳೂರಿನಲ್ಲಿ ಆತ್ಮಹತ್ಯೆ

ಪ್ರವಾಸಿ ವೀಸಾದ ಮೇಲೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್‌ ದೇಶದ ಪ್ರಜೆ ಜೇಮ್ಸ್‌ ಯಂಗ್‌ ಎಂಬುವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರಮಂಗಲದ 7 ನೇ ಹಂತದ ಮನೆಯೊಂದರಲ್ಲಿ ಜೇಮ್ಸ್‌ ಯಂಗ್ ಅವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನಾರೋಗ್ಯದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಮರಣಪತ್ರದಿಂದ ತಿಳಿದು ಬಂದಿದೆ.

ದೇಹ ಕೊಳೆತ ಸ್ಥಿತಿಯನ್ನು ನೋಡಿದರೆ ಅವು ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಜೇಮ್ಸ್‌ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು. ಇವರು ಆನ್‌ ಲೈನ್‌ ಮೂಲಕ ಕೋರಮಂಗಲದಲ್ಲಿ ಬಾಡಿಗೆಗೆ ಮನೆ ಪಡೆದುಕೊಂಡಿದ್ದರು. ಜುಲೈ 27 ರಂದು ಮನೆ ಮಾಲೀಕರಿಗೆ ಕರೆ ಮಾಡಿ ಆಗಸ್ಟ್‌ 1 ರವರೆಗೆ ಫೋನ್‌ ಮಾಡಿ ತೊಂದರೆ ನೀಡದಂತೆ ವಿನಂತಿ ಮಾಡಿಕೊಂಡಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡುವುದಾಗಲೀ ಅಥವಾ ಫೋನ್‌ ಮಾಡುವುದಾಗಲೀ ಮಾಡಿರಲಿಲ್ಲ.

ಶನಿವಾರ ಕರೆ ಮಾಡಿದಾಗ ಜೇಮ್ಸ್‌ ಸ್ಪಂದಿಸಿರಲಿಲ್ಲ. ಮನೆಯ ಬಳಿ ಬಂದು ನೋಡಿದಾಗ ಮನೆಯಿಂದ ದುರ್ನಾತ ಬರುತ್ತಿತ್ತು. ಕೂಡಲೇ ಮನೆ ಮಾಲೀಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮನೆಯೊಳಗೆ ಜೇಮ್ಸ್‌ ಮೃತದೇಹ ಪತ್ತೆಯಾಗಿದೆ. ಇವರು ಅತಿಯಾದ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್.ಮಾರುತಿ,ಬೆಂಗಳೂರು)