Bangalore News: ಬೆಂಗಳೂರಿನ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ; ಆತಂಕದ ವಾತಾವರಣ
ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಜೈನ್ ಹೆರಿಟೇಜ್ ಶಾಲೆಯಲ್ಲಿ ಆತಂಕದ ವಾತಾವರಣ ಕಂಡು ಬಂದಿತ್ತು.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ದೇಶಾದ್ಯಂತ ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆಗಳು ಬರುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ನಕಲಿ ಬೆದರಿಕೆ ಕರೆ ಎಂದು ತಿಳಿದಿದ್ದರೂ ಉದಾಸೀನ ಮಾಡುವಂತಿಲ್ಲ. ಇಂದು ಮತ್ತೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಇ -ಮೇಲ್ ಮೂಲಕ ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಸಂದೇಶ ಬಂದಿತ್ತು. ಇದರಿಂದ ಇಡೀ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ಹೆದರಿಕೊಂಡಿದ್ದರು.
ಕಿಡಿಗೇಡಿಗಳು ಸೋಮವಾರ ರಾತ್ರಿ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಕಳುಹಿಸಿದ್ದರು. ಮಂಗಳವಾರ ಬೆಳಿಗ್ಗೆ 7.30 ಸುಮಾರಿಗೆ ಶಾಲಾ ಸಿಬ್ಬಂದಿ ಇ-ಮೇಲ್ ಗಳನ್ನುಪರಿಶೀಲಿಸಿದಾಗ ಬೆದರಿಕೆ ಸಂದೇಶ ಬಂದಿರುವುದು ತಿಳಿದು ಬಂದಿತ್ತು.
ಶಾಲಾ ಆವರಣದಲ್ಲಿ ಬಾಂಬ್ ಇಡಲಾಗಿದೆ ಮತ್ತು ಅದು ಸ್ಫೋಟಗೊಳ್ಳಲಿದೆ ಎಂದು ಇ-ಮೇಲ್ನಲ್ಲಿ ತಿಳಿಸಲಾಗಿತ್ತು.
ಶಾಲೆಯ ಸಿಬ್ಬಂದಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಬಾಂಬ್ ನಿಷ್ಕ್ರಿಯ ದಳ, ಬಾಂಬ್ ಪತ್ತೆದಳ ಮತ್ತು ಶ್ವಾನದಳದೊಂದಿಗೆ ಶಾಲೆಯ ಆವರಣದಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ ಸ್ಫೋಟದ ಅಥವಾ ಬಾಂಬ್ ನ ಯಾವುದೇ ವಸ್ತು ಪತ್ತೆಯಾಗಿಲ್ಲ. ನಂತರಇದೊಂದು ಹುಸಿ ಇ-ಮೇಲ್ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಬೆಂಗಳೂರಿನ ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಇ-ಮೇಲ್ಗಳು ಬಂದಿದ್ದವು. ಒಂದೇ ಬಾರಿ 20-30 ಶಾಲೆಗಳಿಗೆ ಏಕ ಕಾಲಕ್ಕೆ ಬಾಂಬ್ ಇಡಲಾಗಿದೆ ಎಂಬ ಸಂದೇಶ ಇಡೀ ನಗರದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿತ್ತು.
ದೇಗುಲ ಕಳ್ಳತನ ಬೇಧಿಸಿದ ಪೊಲೀಸರು
ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾನಗರದ ದೇವಸ್ಥಾನದಲ್ಲಿ ಒಂದು ವರ್ಷದ ಹಿಂದೆ ಕಳವು ಮಾಡಲಾಗಿದ್ದ 38 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
21, ಫೆಬ್ರವರಿ 2023 ರಲ್ಲಿ ಕಳವು ನಡೆದಿದೆ ಎಂದು ಅರ್ಚಕರು ದೂರು ಸಲ್ಲಿಸಿದ್ದರು.
ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡರೂ ಸಹ ಆರೋಪಿಯ ಪತ್ತೆಯಾಗಿರಲಿಲ್ಲ. ಆದ್ದರಿಂದ ಜೂನ್ ನಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಿ ವರದಿ ಸಲ್ಲಿಸಿದ್ದರು.
2024ರ ಏಪ್ರಿಲ್ 28 ರಂದು ಬಸವೇಶ್ವರನಗರ ಸಮೀಪದ ಶಂಕರ ಮಠ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಓಡಾಡುತ್ತಿರುವ ಬಗ್ಗೆ ಪೊಲೀಸ್ ಬಾತ್ಮೀದಾರರೊಬ್ಬರು ಮಾಹಿತಿ ನೀಡಿದ್ದರು. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತುಮಕೂರು ಮತ್ತು ಮೈಸೂರು ಮತ್ತಿತರ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆರೋಪಿ ವಾಸವಿರುವ ಮಂಡ್ಯದ ಗುತ್ತಲ್ ಮುಖ್ಯ ರಸ್ತೆಯಲ್ಲಿರುವ ಮನೆಯಿಂದ 480 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ತುಮಕೂರು ಹಾಗೂ ಬೆಂಗಳೂರಿನ ಗಿರವಿ ಅಂಗಡಿಗಳಲ್ಲಿ ಈತ ಅಡವಿಟ್ಟಿದ್ದ 152 ಗ್ರಾಂ ಚಿನ್ನದ ಆಭರಣ ಹಾಗೂ 1 ಕೆ.ಜಿ.ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನಿಂದ ಒಟ್ಟು 38 ಲಕ್ಷ ರೂ. ಮೌಲ್ಯದ 632 ಗ್ರಾಂ ತೂಕದ ಚಿನ್ನಾಭರಣ, 5 ಲಕ್ಷ ರೂ. ಮೌಲ್ಯದ 22.76 ಗ್ರಾಂ ವಜ್ರ ಹಾಗೂ ಸುಮಾರು ರೂ. 80 ಸಾವಿರ ಮೌಲ್ಯದ 1 ಕೆ.ಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಗಿರೀಶ್ ರವರ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿ 44 ವರ್ಷದ ಪ್ರಕಾಶ್ ಎಂಬಾತನನ್ನು ಬಂಧಿಸಿ ಆತನಿಂದ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡೇಪಾಳ್ಯದ ನಿವಾಸಿಯೊಬ್ಬರು ತಾವು ಮತ್ತು ತಮ್ಮ ಪತ್ನಿ ಸಿನಿಮಾ ನೋಡಿಕೊಂಡು ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ದೂರು ನೀಡಿದ್ದರು. ತಾವು ಮನೆಯಲ್ಲಿ ಇಲ್ಲದಿರುವುದನ್ನು ಅರಿತು ಕಳ್ಳರು ಸುಮಾರು 69 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಪ್ರಕರಣವನ್ನು ಸಿಸಿಬಿ ಯ ಸಂಘಟಿತ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಬಾತ್ಮೀದಾರರಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಕಲಿ ಕೀ ಬಳಸಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ.
ತನಿಖೆಯನ್ನು ಮುಂದುವರೆಸಿ, ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಬೇಗೂರು, ಚಂದ್ರಲೇಔಟ್, ಹೆಚ್.ಎಸ್.ಆರ್ ಲೇ ಔಟ್, ಹುಳಿಮಾವು, ಬಂಡೆಮಠ, ಕುಮಾರ ಸ್ವಾಮಿ ಲೇ ಔಟ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 6 ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯಿಂದ 27 ಲಕ್ಷ ರೂ. ಬೆಲೆ ಬಾಳುವ 422 ಗ್ರಾಂ ತೂಕದ ಚಿನ್ನಾಭರಣ ಹಾಗೂ ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳಲಾಗಿದೆ.
ಕಛೇರಿಯಲ್ಲೇ 25 ಲಕ್ಷ ರೂ. ಕಳವು ಮಾಡಿದ್ದ ಆರೋಪಿ ಸೆರೆ
ಕೆಲಸ ಮಾಡುತ್ತಿದ್ದ ಕಛೇರಿಯಲ್ಲೇ 25 ಲಕ್ಷ ರೂ. ಕಳವು ಮಾಡಿದ್ದ ಆರೋಪಿ ಮಹೇಶ್ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
34 ವರ್ಷದ ಮಹೇಶ್ ವಿಜಯನಗರದ ನಿವಾಸಿ. ಈತ ನಿವೃತ್ತ ಪಿ ಎಸ್ ಐ ಪುತ್ರ ಎಂದು ತಿಳಿದು ಬಂದಿದೆ.
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಪಿನಗರ ನಿವಾಸಿ ತಮ್ಮ ಮಾಲೀಕತ್ವದ ಕೆ ಎನ್ ಎಸ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಕಛೇರಿಯ ಕ್ಯಾಶ್ ಸೆಕ್ಷನ್ ನಲ್ಲಿಟ್ಟಿದ್ದ 25 ಲಕ್ಷ ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆಂದು ದೂರನ್ನು ಸಲ್ಲಿಸಿದ್ದರು.
ಕಳವು ಮಾಡಿದ ವ್ಯಕ್ತಿಯನ್ನು ಪೊಲೀಸರು ಮಡಿಕೇರಿ ಟೋಲ್ ಗೇಟ್ ಬಳಿ ಪತ್ತೆಮಾಡಿ ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ ನಗದು ಹಣವನ್ನು ಮೂಡಲಪಾಳ್ಯದಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದ. ಆತನ ಸ್ನೇಹಿತನ ಮನೆಯಿಂದ 25 ಲಕ್ಷ ರೂ. ನಗದು ಹಣವನ್ನು ಪಡಿಸಿಕೊಳ್ಳಲಾಗಿದೆ.
(ವರದಿ: ಎಚ್.ಮಾರುತಿ. ಬೆಂಗಳೂರು)