Bangalore News: ಹೋಳಿ ಹಬ್ಬಕ್ಕೆ ಕಾವೇರಿ, ಕೊಳವೆ ಬಾವಿ ನೀರು ಬಳಕೆ, ಕಠಿಣ ಕ್ರಮಕ್ಕೆ ಮುಂದಾದ ಜಲಮಂಡಳಿ
ಬೇಸಿಗೆಯಲ್ಲಿಯೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವಾಗ ಹೋಳಿ ಹಬ್ಬದ ನೆಪದಲ್ಲಿ ಅನಗತ್ಯ ನೀರು ಪೋಲಿಗೆ ಬೆಂಗಳೂರು ಜಲಮಂಡಳಿ ಬ್ರೇಕ್ ಹಾಕಿದೆ.(ವರದಿ: ಎಚ್.ಮಾರುತಿ.ಬೆಂಗಳೂರು)
ಬೆಂಗಳೂರು: ಬೆಂಗಳೂರಿನಲ್ಲಿ ಎಚ್ಚರಿಕೆಯ ನಡುವೆಯೂ ಹೋಳಿ ಹಬ್ಬ ಆಚರಿಸಲು ಕಾವೇರಿ ಅಥವಾ ಕೊಳವೆಬಾವಿ ನೀರನ್ನು ಬಳಸಿ ರೈನ್ ಡ್ಯಾನ್ಸ್ ಆಯೋಜಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ( BWSSB) ಎಚ್ಚರಿಕೆ ನೀಡಿದೆ. ಇದೇ ಕಾರಣದಿಂದ ಹಬ್ಬದ ದಿನವಾದ ಸೋಮವಾರ ಬೆಂಗಳೂರಿನ ಬಹುತೇಕ ಎಲ್ಲ ಕಡೆ ಎಚ್ಚರಿಕೆಯನ್ನೂ ಮಂಡಳಿ ವಹಿಸಿದೆ. ಕೆಲವು ಕಡೆ ಮಂಗಳವಾರವೂ ಹೋಳಿ ಆಡುವುದರಿಂದ ಆ ದಿನವೂ ನೀರು ಪೋಲು ಮಾಡದಂತೆ ಕಣ್ಗಾವಲನ್ನು ಕೂಡ ಮಂಡಳಿ ಇರಿಸಿದೆ. ಈ ಮೂಲಕ ಬೇಸಿಗೆಯಲ್ಲಿ ನೀರಿನ ಬವಣೆಯಿಂದ ಜನ ತತ್ತರಿಸಿರುವಾಗ ತೊಂದರೆಯಾಗದಂತೆ ಹಲವಾರು ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಹೋಳಿ ಹಬ್ಬವೂ ಸೇರಿಕೊಂಡಿದೆ.
ಹೋಳಿ ಹಬ್ಬ ನಮ್ಮ ಧಾರ್ಮಿಕ ಹಾಗು ಸಾಂಸ್ಕೃತಿಕ ಹಬ್ಬವಾಗಿರುವ ಹೋಳಿ ಹಬ್ಬವನ್ನು ಆಚರಿಸುವುದು ತಪ್ಪಲ್ಲ. ಆದರೆ ಹಬ್ಬವನ್ನು ವಾಣಿಜ್ಯೀಕರಣಗೊಳಿಸಿ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸಿ ನೀರು ಪೋಲು ಮಾಡುವುದು ಸರಿಯಲ್ಲ. ಈಗಾಗಲೇ ಇಂತಹ ನೃತ್ಯ ಕಾರ್ಯಕ್ರಮಗಳಿಗೆ ಎರಡು ಹೋಟೆಲ್ ನವರು ಸಿದ್ಧತೆ ನಡೆಸಿದ್ದರು. ಜಲ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿದ ನಂತರ ಕೈಬಿಟ್ಟಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಹೋಳಿ ಹಬ್ಬದ ವೇಳೆ ಕೆಲವು ಕಡೆ ಯಥೇಚ್ಛ ನೀರು ಬಳಸುವುದು ಮೊದಲಿನಿಂದಲೂ ನಡೆದುಕೊಂಡಿದೆ. ಹಿಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಇದರಿಂದ ಯಾವುದೇ ಅಡಚಣೆಯೂ ಇರಲಿಲ್ಲ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಒಂದು ತಿಂಗಳಿನಿಂದಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನಿತ್ಯ ನೀರನ್ನು ಸರಬರಾಜು ಮಾಡುವುದೇ ನೀರು ಸರಬರಾಜು ಮಂಡಳಿಗೆ ಸವಾಲಾಗಿದೆ. ಈ ಕಾರಣದಿಂದ ಹೋಳಿ ಹಬ್ಬದ ವೇಳೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎನ್ನುವುದು ಅಧಿಕಾರಿಗಳ ಸ್ಪಷ್ಟನೆ.
ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರು, ಕುಡಿಯಲು ಬಳಸಬೇಡಿ
ನಗರದಲ್ಲಿ ಕುಸಿಯುತ್ತಿರುವ ಅಂತರ್ಜಲವನ್ನು ವೃದ್ಧಿಸುವ ಹಾಗೂ ಕೆರೆಗಳನ್ನು ರಕ್ಷಿಸುವ ದೃಷ್ಟಿಯಿಂದ ಬೆಂಗಳೂರಿನ ಕೆಂಗೇರಿ ಕೆರೆ ಸೇರಿದಂತೆ 14 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲಾಗುತ್ತಿದೆ. ಆದರೆ ಸಂಸ್ಕರಿಸಿದ ನೀರನ್ನು ಕುಡಿಯಲು ಹಾಗೂ ಗೃಹ ಬಳಕೆಗೆ ಉಪಯೋಗಿಸಬಾರದು ಎಂದು ಬೆಂಗಳೂರು ಜಲ ಮಂಡಳಿ ಮನವಿ ಮಾಡಿಕೊಂಡಿದೆ.
ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಎರಡನೇ ಹಂತದಲ್ಲಿ ಸಂಸ್ಕರಿಸಿ ನಗರದ ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಕೆರೆಗಳಿಗೆ ತುಂಬಿಸಲಾಗುತ್ತಿದೆ. ರಾಷ್ಟ್ರೀಯ ಹಸಿರು ಪ್ರಾಧಿಕರಣ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಮಾನದಂಡಗಳ ಆಧಾರದ ಮೇಲೆ ಈ ನೀರನ್ನು, ಸಂಸ್ಕರಿಸಲಾಗುತ್ತಿದೆ. ಈ ನೀರನ್ನ ನೇರವಾಗಿ ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಹಿತಾಸಕ್ತಿಯ ದೃಷ್ಟಿಯಿಂದ ಜಲಮಂಡಳಿ ಈ ಸೂಚನೆಯನ್ನು ನೀಡಿದೆ.
ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಿಸಲು ಜಲಮಂಡಳಿ ಮುಂದಾಗಿದೆ. ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣ ಮಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದೆ.
ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ನಾಯಂಡಹಳ್ಳಿ ಕೆರೆ, ಕೆಂಗೇರಿ ಎಸ್.ಟಿ.ಪಿ ಮಂಡಳಿಯಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಕರಿಸಿದ ನೀರನ್ನು ಹಲಗೇವಡೆರಹಳ್ಳಿ, ದುಬಾಸಿಪಾಳ್ಯ, ಹೊಸಕೆರೆಹಳ್ಳಿ ಕೆರೆಗಳಿಗೆ ತುಂಬಿಸಲಾಗುವುದು ಎಂದು ತಿಳಿದು ಬಂದಿದೆ.
(ವರದಿ: ಎಚ್.ಮಾರುತಿ.ಬೆಂಗಳೂರು)
ವಿಭಾಗ