Bangalore Crime: ಬೆಂಗಳೂರು ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ: ಮಗಳನ್ನು ಕೊಂದು ಠಾಣೆಗೆ ಬಂದ ತಂದೆ
Devanahalli Honor killing ದೇವನಹಳ್ಳಿ ತಾಲ್ಲೂಕಿನಲ್ಲಿ ತಂದೆಯೇ ಮಗಳನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ಧಾನೆ. ಅನ್ಯಜಾತಿ ಯುವಕನನ್ನು ಮಗಳನ್ನು ಪ್ರೀತಿಸುತ್ತಿದ್ದುದನ್ನು ವಿರೋಧಿಸಿ ತಂದೆ ಈ ಕೃತ್ಯ ಎಸಗಿರುವ ಕುರಿತು ತನಿಖೆ ನಡೆಯುತ್ತಿದೆ.
ಬೆಂಗಳೂರು: ಮನೆಯವರ ವಿರೋಧದ ನಡುವೆಯೂ ಅನ್ಯಜಾತಿ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆ ಮಾಡಿರುವ ಮರ್ಯಾದೆ ಹತ್ಯೆ ಪ್ರಕರಣವಿದು. ಮಂಜುನಾಥ್ ಪೊಲೀಸರಿಗೆ ಶರಣಾದ ಆರೋಪಿ.
ಇದು ನಡೆದಿರುವುದು ಬೆಂಗಳೂರು ಜಿಲ್ಲೆಯಲ್ಲಿ. ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಬರುವ ದೇವನಹಳ್ಳಿ ತಾಲ್ಲೂಕಿನ ಬಿದಲೂರಿನಲ್ಲಿ ಘಟನೆ ನಡೆದಿದೆ. ಆದರೆ ಹತ್ಯೆ ಮಾಡಿದ ತಂದೆಯೇ ಠಾಣೆಗೆ ಶರಣಾಗಿದ್ದಾನೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿದಲೂರು ಗ್ರಾಮದಲ್ಲಿ ವ್ಯಾಪಾರ ಮಾಡಿಕೊಂಡಿರುವ ಮಂಜುನಾಥ್ ಅವರ ಪುತ್ರಿ ಕವನಾಗೆ ಈಗಿನ್ನೂ 20 ವರ್ಷ. ಆಕೆ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವಕನೊಬ್ಬನೊಂದಿಗೆ ಪರಿಚಯ ಸಲುಗೆಗೆ ಬೆಳೆದು ನಂತರ ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದರು. ಮಗಳ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ಆಕೆ ಮದುವೆ ಪ್ರಸ್ತಾವ ಇಟ್ಟಾಗ ತಿಳಿದು ಬಂದ ವಿಚಾರದಿಂದ ಮಂಜುನಾಥ್ ಸಿಟ್ಟುಕೊಂಡು ಸಂಬಂಧ ಕಡಿದುಕೊಳ್ಳುವಂತೆ ಸೂಚಿಸಿದ್ದ. ಆದರೆ ಮಗಳು ಇದಕ್ಕೆ ಒಪ್ಪದೇ ಪ್ರೀತಿ ಮುಂದುವರೆಸಿದ್ದಳು. ಮನೆಯವರು ಮನ ಒಲಿಸಿದರೂ ಆತನನ್ನೇ ಮದುವೆಯಾಗುವುದಾಗಿಯೂ ಹೇಳಿದ್ದರು. ಬುಧವಾರವೂ ಇದೇ ವಿಚಾರವಾಗಿ ಮನೆಯಲ್ಲಿ ಜಗಳವೂ ಆಗಿತ್ತು. ಅನ್ಯಕೋಮಿನ ಯುವಕನನ್ನು ಮದುವೆಯಾಗಲು ಬಿಡುವುದಿಲ್ಲ ಎಂದು ತಂದೆ ಹೇಳಿದರೆ ಮಗಳೂ ಒಪ್ಪಲೇ ಇಲ್ಲ. ಬುಧವಾರ ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದಾಗ ಮಂಜುನಾಥ್ ಕತ್ತಿಯಿಂದ ಮಗಳ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾನೆ. ಭಯಗೊಂಡ ಮಂಜುನಾಥ್ ಕೊನೆಗೆ ಠಾಣೆಗೆ ಶರಣಾಗಿದ್ದಾನೆ. ಗುರುವಾರ ಬೆಳಿಗ್ಗೆ ವಿಚಾರ ತಿಳಿದು ಗ್ರಾಮದಲ್ಲಿ ಬೇಸರದ ವಾತಾವರಣ ಕಂಡು ಬಂದರೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಈ ಕುರಿತು ದೇವನಹಳ್ಳಿ ತಾಲ್ಲೂಕು ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ದಂಡಿ ಸಹಿತ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಮಾಹಿತಿ ಪಡೆದರು.
ಪ್ರಕರಣದ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಎಲ್ಲಾ ಆಯಾಮದಲ್ಲೂ ವಿಚಾರಣೆ ನಡೆದಿದೆ. ಕವನ ಕುಟುಂಬದವರು ಹಾಗೂ ಪ್ರೀತಿಸುತ್ತಿದ್ದ ಯುವಕನ ಹೇಳಿಕೆ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ಕೋಲಾರ ಜಿಲ್ಲೆಯಲ್ಲಿ ಇದೇ ರೀತಿ ಮರ್ಯಾದೆ ಹತ್ಯೆ ಪ್ರಕರಣ ದಾಖಲಾಗಿತ್ತು.