Bangalore Mysuru Corridor: ಹೊಸೂರಿನಿಂದ ಮೈಸೂರು ರಸ್ತೆವರೆಗೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣ; ಇದು ಟೋಲ್ ಫ್ರೀ ರಸ್ತೆ ಏಕೆ
ಬೆಂಗಳೂರು ಹಾಗೂ ಮೈಸೂರು ನಗರಗಳ ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಹೊಸೂರು- ಬೆಂಗಳೂರು- ಮೈಸೂರು ಬ್ಯುಸಿನೆಸ್ ಕಾರಿಡಾರ್‌ಗೆ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಯೋಜನೆ ರೂಪಿಸಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆವರೆಗೆ ಪೆರಿಫೆರಲ್ ವರ್ತುಲ ರಸ್ತೆ–2 (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೀರ್ಮಾನಿಸಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಾರಿಡಾರ್ ನಿರ್ಮಾಣಗೊಳ್ಳಲಿದೆ. ಆದರೆ ಈ ರಸ್ತೆಗೆ ಟೋಲ್ ಇರುವುದಿಲ್ಲ ಎನ್ನುವುದು ವಿಶೇಷ.100 ಮೀಟರ್ ಅಗಲದಲ್ಲಿ 30 ಕಿ.ಮೀ ಉದ್ದ ಈ ರಸ್ತೆ ನಿರ್ಮಾಣವಾಗಲಿದೆ. ಈ ಕಾರಿಡಾರ್‌ನ ರಸ್ತೆಯ ಎರಡೂ ಬದಿಯಲ್ಲಿ ತಲಾ 24 ಮೀಟರ್ ವಾಣಿಜ್ಯ ನಿವೇಶನಗಳನ್ನು ರಚಿಸಲಾಗುತ್ತದೆ. ಈ ವಾಣಿಜ್ಯ ಪ್ರದೇಶವನ್ನು ಮಾರಾಟ ಮಾಡಿ ವ್ಯಾಪಾರ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಆದ್ದರಿಂದ ಈ ರಸ್ತೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಕರೆಯಲಾಗುತ್ತದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಮಾದರಿಯ ಕಾರಿಡಾರ್ ನಿರ್ಮಾಣಗೊಳ್ಳುತ್ತದೆ.
ಏನಿರದ ವಿಶೇಷ, ಮಾರ್ಗ ಹೇಗೆ
ಈ ಕಾರಿಡಾರ್ ಉದ್ದಕ್ಕೂ 43 ಅಂಡರ್ ಪಾಸ್, ಮೇಲ್ಸೇತುವೆ ಹಾಗ್ರೂ ಗ್ರೇಡ್ ಸೆಪರೇಟರ್‌ಗಳು ಈ ನಿರ್ಮಾಣವಾಗಲಿವೆ. ಇವುಗಳನ್ನು ಬಿಡಿಎ ನಿರ್ವಹಣೆ ಮಾಡಲಿದೆ ಎಂದು ತಿಳಿದು ಬಂದಿದೆ.
ಒಟ್ಟು 1,569 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಕಾರಿಡಾರ್ ಅನ್ನು ಕೇವಲ 30 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿ, ಟೆಂಡರ್ ಆಹ್ವಾನ, ಕಾರ್ಯಾದೇಶ ನೀಡುವುದು ಮತ್ತು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಬಿಡಿಎ ಯೋಜನೆ ರೂಪಿಸಿ, ಯೋಜನಾ ನಿರ್ವಹಣೆ ಸಲಹಾ (ಪಿಎಂಸಿ) ಸೇವೆಗೆ ಟೆಂಡರ್ ಆಹ್ವಾನಿಸಿದೆ.
ಬ್ಯುಸಿನೆಸ್ ಕಾರಿಡಾರ್ ರಸ್ತೆಯು ಹೊಸೂರು ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕದಿಂದ ಆರಂಭವಾಗಿ ಆನೇಕಲ್‌ನ ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಬನ್ನೇರುಘಟ್ಟ ರಸ್ತೆ ಹಾಗೂ ಕನಕಪುರ ರಸ್ತೆಗೂ ಟ್ರಕ್ ಟರ್ಮಿನಲ್‌ಗಳನ್ನು ಒದಗಿಸಲಿದ್ದು, ಅಲ್ಲಿನ ಉದ್ಯಮಗಳಿಗೂ ಅನುಕೂಲವಾಗಲಿದೆ. ಬೆಂಗಳೂರು ನಗರ ಕೇಂದ್ರ ಭಾಗದಲ್ಲಿ ಭಾರಿ ವಾಹನ ಮತ್ತು ಟ್ರಕ್ ಗಳ ಸಂಚಾರದಿಂದ ಉಂಟಾಗುತ್ತಿದ್ದ ದಟ್ಟಣೆ ಇದರಿಂದ ನಿವಾರಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದಕ್ಕಾಗಿ ಪ್ರತ್ಯೇಕ ಮಾರ್ಗವನ್ನೇ ರಚಿಸುವುದರ ಜೊತೆಗೆ ವಾಣಿಜ್ಯ ವ್ಯವಹಾರಗಳನ್ನೂ ಉತ್ತೇಜಿಸಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.
ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್)–2 ಯೋಜನೆ ಹೊಂದಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ನಿರ್ಮಾಣವಾಗುತ್ತಿರುವ 10 ಕಿಲೋ ಮೀಟರ್ ಪ್ರಮುಖ ರಸ್ತೆಯು (ಎಂಎಆರ್) ಈ ಪಿಆರ್‌ಆರ್ –2ನ ಒಂದು ಭಾಗವಾಗಿದೆ. ಹೊಸೂರು ರಸ್ತೆಯಿಂದ ಮೈಸೂರು ರಸ್ತೆವರೆಗಿನ ಬ್ಯುಸಿನೆಸ್ ಕಾರಿಡಾರ್ ಅನ್ನು ಎಂಎಆರ್‌ಗೆ ಸಂಪರ್ಕಿಸಲಾಗುತ್ತದೆ. ಈ ಎಂಎಆರ್ 9 ಕಿ.ಮೀ ಕಾಮಗಾರಿಯು ಅಂತಿಮ ಹಂತದಲ್ಲಿದೆ. ಒಂದು ಕಿ.ಮೀ ವ್ಯಾಪ್ತಿಯ ಪ್ರದೇಶದ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದು ಇತ್ಯರ್ಥವಾದ ಕೂಡಲೇ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ.
ತದನಂತರ ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಬ್ಯುಸಿನೆಸ್ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಲು ಎರಡನೇ ಹಂತದಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಬಿಡಿಎ ತಿಳಿಸಿದೆ.
ಟೋಲ್ ಫ್ರೀ ರಸ್ತೆ
100 ಮೀಟರ್ ಅಗಲದ ಕಾರಿಡಾರ್‌ನಲ್ಲಿ 3 ಮೀಟರ್ ಡಿವೈಡರ್ ಸೇರಿದಂತೆ 25 ಮೀಟರ್‌ನಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ತಲಾ 10 ಮೀಟರ್‌ಗಳ ಎರಡು ಸರ್ವೀಸ್ ರಸ್ತೆಯನ್ನೂ ನಿರ್ಮಿಸಲಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ 24 ಮೀಟರ್ ಅಗಲದಲ್ಲಿ ವಾಣಿಜ್ಯ ನಿವೇಶನಗಳನ್ನು ರಚಿಸಲಾಗುತ್ತದೆ. ಕಾರಿಡಾರ್ ನಿರ್ಮಾಣದ ಜೊತೆ ಜೊತೆಗೆ ಈ ನಿವೇಶನಗಳನ್ನು ರಚಿಸಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಸಂಪನ್ಮೂಲ ಸಂಗ್ರಹವಾಗಲಿದ್ದು, ಈ ರಸ್ತೆ ನಿರ್ಮಾಣಕ್ಕೆ ಯಾವುದೇ ರೀತಿಯ ಹಣದ ಕೊರತೆ ಉಂಟಾಗುವುದಿಲ್ಲ. ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಹೀಗಾಗಿ ರಸ್ತೆ ಬಳಕೆಗೆ ಶುಲ್ಕವನ್ನು ವಿಧಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಎಲಿಲ್ಲಿ ಭೂ ಸ್ವಾಧೀನ?
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿ: ಹೆಬ್ಬಗೋಡಿ, ವೀರಸಂದ್ರ, ಗೊಲ್ಲಹಳ್ಳಿಯಲ್ಲಿ ಭೂ ಸ್ವಾಧೀನ ಆಗಲಿದೆ. ಜಿಗಣಿ ಹೋಬಳಿಯ ಭೂತನಹಳ್ಳಿ, ಕನ್ನಿಕನ ಅಗ್ರಹಾರ, ಮಾರಗೊಂಡನಹಳ್ಳಿ, ಹುಲಿಮಂಗಲ, ಬಿಂಗಿಪುರ, ಹುಲ್ಲಹಳ್ಳಿ, ಬಿಲ್ವಾರದಹಳ್ಳಿಯಲ್ಲಿಯೂ ಭೂಸ್ವಾಧೀನ ನಡೆಯಲಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹೊಮ್ಮದೇವನಹಳ್ಳಿ, ಬಸವನಪುರ, ಉತ್ತರಹಳ್ಳಿ ಹೋಬಳಿಯ ಪಿಳ್ಳಗಾನಹಳ್ಳಿ, ಗುಳಕಮಲೆ, ಕಗ್ಗಲಿಪುರ, ಉತ್ತರಿ ಗೊಟ್ಟಿಗೆರೆ, ಕೆಂಗೇರಿ ಹೋಬಳಿಯ ಬಿ.ಎಂ. ಕಾವಲ್, ಅಗರ, ದೇವಗೆರೆ, ಗುಡಿಮಾವು, ಕಂಬೀಪುರ, ಚಲ್ಲಘಟ್ಟ, ಕೆ. ಕೃಷ್ಣಸಾಗರ, ಭೀಮನಕುಪ್ಪೆ, ಕೊಮ್ಮಘಟ್ಟ, ಸೂಲಿಕೆರೆ, ಕೆಂಚನಪುರದಲ್ಲಿ ಭೂಸ್ವಾಧೀನ ನಡೆಯಲಿದೆ.
ದಾಸನಪುರ ಹೋಬಳಿಯ ಮಾಚೋಹಳ್ಳಿ, ವಡ್ಡರಹಳ್ಳಿ, ಲಕ್ಷ್ಮಿಪುರ, ಕದರೇನಹಳ್ಳಿ, ಹಾರೊಕ್ಯಾತನಹಳ್ಳಿ, ದೊಂಬರಹಳ್ಳಿ, ಸಿದ್ದನಹೊಸಹಳ್ಳಿ, ಮಾದನಾಯಕನಹಳ್ಳಿ.ಯಶವಂತಪುರ ಹೋಬಳಿಯ ಕನ್ನಲ್ಲಿ, ಸೀಗೇಹಳ್ಳಿಯಲ್ಲಿ ಭೂಮಿ ಅವಶ್ಯಕತೆ ಇದ್ದು ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಬಿಡಿಎ ತಿಳಿಸಿದೆ.
(ವರದಿ: ಎಚ್.ಮಾರುತಿ, ಬೆಂಗಳೂರು)
ವಿಭಾಗ