BMTC News: ಬೆಂಗಳೂರಿಗರ ಸೇವೆಗೆ ರಸ್ತೆಗಿಳಿದವು ಹೊಸ 100 ಬಿಎಂಟಿಸಿ ಬಸ್‌; ಸದ್ಯವೇ 740 ಆಗಮನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka  /  Bmtc News: ಬೆಂಗಳೂರಿಗರ ಸೇವೆಗೆ ರಸ್ತೆಗಿಳಿದವು ಹೊಸ 100 ಬಿಎಂಟಿಸಿ ಬಸ್‌; ಸದ್ಯವೇ 740 ಆಗಮನ

BMTC News: ಬೆಂಗಳೂರಿಗರ ಸೇವೆಗೆ ರಸ್ತೆಗಿಳಿದವು ಹೊಸ 100 ಬಿಎಂಟಿಸಿ ಬಸ್‌; ಸದ್ಯವೇ 740 ಆಗಮನ

New BMTC Buses ಬೆಂಗಳೂರಿನ ಪ್ರಯಾಣಿಕರಿಗಾಗಿ ಬಿಎಂಟಿಸಿ( BMTC) ಹೊಸ ಬಸ್‌ಗಳನ್ನು ಒದಗಿಸಿದೆ. ಈಗಾಗಲೇ ಘೋಷಿಸಿದ್ದ 840 ನೂತನ‌ಬಸ್ ಗಳ ಪೈಕಿ ನೂರು ಬಸ್‌ಗಳ ಸೇವೆಗೆ ಸಿಎಂ ಸಿದ್ದರಾಮಯ್ಯ ( Karnataka CM Siddaramaiah) ಗುರುವಾರ ಚಾಲನೆ ನೀಡಿದ್ದಾರೆ

ಬೆಂಗಳೂರು ರಸ್ತೆಗೆ ಹೊಸ ಬಿಎಂಟಿಸಿ ಬಸ್‌ಗಳು ಸೇವೆಗೆ ಇಳಿದಿವೆ.
ಬೆಂಗಳೂರು ರಸ್ತೆಗೆ ಹೊಸ ಬಿಎಂಟಿಸಿ ಬಸ್‌ಗಳು ಸೇವೆಗೆ ಇಳಿದಿವೆ.

ಬೆಂಗಳೂರು: ಬೆಂಗಳೂರಿನಲ್ಲಿ ನಿತ್ಯ ಸಂಚರಿಸುವವರಿಗೆ ಸಿಹಿಸುದ್ದಿ.ಕರ್ನಾಟಕ ಸರ್ಕಾರದ ಸಾರಿಗೆ ಸಚಿವರು ಈಗಾಗಲೇ ಘೋಷಿಸಿದಂತೆ ಬೆಂಗಳೂರಿನಲ್ಲಿ ಬಿಎಂಟಿಸಿಗೆ ಹೊಸ ಬಸ್‌ಗಳ ಸೇರ್ಪಡೆಯಾಗಿದೆ. ಮೊದಲ ಹಂತದಲ್ಲಿ 100 ನೂತನ ಬಸ್‌ಗಳನ್ನು ಬಿಎಂಟಿಸಿಗೆ ಒದಗಿಸಲಾಗಿದೆ. ಉಳಿದ 740 ಬಸ್‌ಗಳು ಶೀಘ್ರವೇ ಬೆಂಗಳೂರು ರಸ್ತೆಗೆ ಇಳಿಯಲಿವೆ. ಈಗಾಗಲೇ ಬಿಎಂಟಿಸಿ ಕೆಲವು ಬಸ್‌ಗಳು ಹಳೆಯದಾಗಿವೆ. ಅವುಗಳ ಬಳಕೆ ಕಷ್ಟ ಎನ್ನುವ ಕಾರಣದಿಂದ ಹೊಸ ಬಸ್‌ ಖರೀದಿಗೆ ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಹೊಸ ಬಸ್‌ ಪ್ರಕ್ರಿಯೆ ಶುರುವಾಗಿ ಈಗ ಸೇವೆಗೆ ಬಂದಿವೆ. ಇದರಿಂದ ಬೆಂಗಳೂರಿಗರ ಸಂಚಾರಕ್ಕೆ ಅನುಕೂಲವಾಗಲಿದೆ. ಇದಲ್ಲದೇ ಬಿಎಂಟಿಸಿಗೆ ಇನ್ನಷ್ಟು ಸೌಲಭ್ಯ ವಿಸ್ತರಿಸುವುದಾಗಿಯೂ ಇದೇ ವೇಳೆ ಸರ್ಕಾರ ಹೇಳಿದೆ.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಬಳಿ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ನೂತನ BMTC ಬಸ್ ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ BMTC ಬಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನ‌ಬಸ್ ಗಳು BMTC ಸೇರಲಿವೆ ಎಂದು ನುಡಿದರು.

ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ‌ಬಸ್ ಗಳನ್ನು BMTC ಗೆ ಸೇರ್ಪಡೆಗೊಳಿಸುವ ಜೊತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದಲ್ಲದೆ ನೂತನವಾಗಿ ಇನ್ನಷ್ಟು ಕ್ಯಾಂಟೀನ್ ಗಳನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.

ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದರು.

ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಆಗಲಿವೆ ಎನ್ನುವುದು ಸಿಎಂ ಸಿದ್ದರಾಮಯ್ಯ ಅವರ ವಿಶ್ವಾಸದ ನುಡಿ.

ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ನಾನಾ ರೀತಿಯ ಅನುಕೂಲಗಳನ್ನು ಒದಗಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿದಿನ ಮಾಧ್ಯಮಗಳು ತೋರಿಸುತ್ತಿವೆ ಎಂದರು.

ನಾವು ಬಡವರಿಗೆ ಅಕ್ಕಿ ಕೊಡುವ ಯೋಜನೆಗೆ ಮುಂದಾದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡದೆ ತೊಂದರೆ ನೀಡಿತು. ಆದರೆ ನಾವು ಅಕ್ಕಿಯ ಬದಲಿಗೆ, ಅಕ್ಕಿಯ ಹಣವನ್ನು ಜನರಿಗೆ ನೀಡಿ ನುಡಿದಂತೆ ನಡೆದಿದ್ದೇವೆ ಎಂದು ಸಿಎಂ ತಿಳಿಸಿದರು.

ರಾಜ್ಯದ ಪ್ರತೀ ಕುಟುಂಬಗಳಿಗೆ ಪ್ರತೀ ತಿಂಗಳಿಗೆ 4-5 ಸಾವಿರ ರೂಪಾಯಿ ಅನುಕೂಲ ಆಗುತ್ತಿದೆ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ ಎಂದರು.

ನಮ್ಮ ಸರ್ಕಾರ ಬಂದ ಮೇಲೆ ನಾಲ್ಕು ಬಾರಿ ಹೊಸ ಬಸ್ ಗಳನ್ನು‌ ಖರೀದಿಸಿ ಸವಲತ್ತು ಒದಗಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಜಮೀರ್ ಅಹಮದ್, ಇಂಧನ ಸಚಿನ ಕೆ.ಜೆ.ಜಾರ್ಜ್, ಕೆಕೆಆರ್ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Whats_app_banner