ಕನ್ನಡ ಸುದ್ದಿ  /  ಕರ್ನಾಟಕ  /  Ifs Posting: ಇದೂ ಸಾಧ್ಯ, ಒಬ್ಬರೇ ಐಎಫ್‌ಎಸ್‌ ಅಧಿಕಾರಿ, ಎರಡು ಹುದ್ದೆ, ಒಂದು ಕಲಬುರಗಿ, ಮತ್ತೊಂದು ಮೈಸೂರು !

IFS Posting: ಇದೂ ಸಾಧ್ಯ, ಒಬ್ಬರೇ ಐಎಫ್‌ಎಸ್‌ ಅಧಿಕಾರಿ, ಎರಡು ಹುದ್ದೆ, ಒಂದು ಕಲಬುರಗಿ, ಮತ್ತೊಂದು ಮೈಸೂರು !

Karnataka Forest ಕರ್ನಾಟಕದ ಹಿರಿಯ ಐಎಫ್‌ ಎಸ್‌ ಅಧಿಕಾರಿಗೆ ಎರಡು ಹುದ್ದೆ. ಒಂದು ಮೈಸೂರಲ್ಲಿ. ಮತ್ತೊಂದು ಕಲಬುರಗಿಯಲ್ಲಿ. ಎರಡೂ ನ್ಯಾಯ ಒದಗಿಸುವ ಸವಾಲು.

ಕಲಬುರಗಿ- ಮೈಸೂರು ಕಡೆ ಕೆಲಸ ಮಾಡುವ ಐಎಫ್‌ಎಸ್‌ ಅಧಿಕಾರಿ ಸುನೀಲ್‌ ಪನ್ವಾರ್‌.
ಕಲಬುರಗಿ- ಮೈಸೂರು ಕಡೆ ಕೆಲಸ ಮಾಡುವ ಐಎಫ್‌ಎಸ್‌ ಅಧಿಕಾರಿ ಸುನೀಲ್‌ ಪನ್ವಾರ್‌.

ಬೆಂಗಳೂರು: ಕರ್ನಾಟಕದಲ್ಲಿ ಒಬ್ಬರೇ ಅಧಿಕಾರಿ ಎರಡು ಮೂರು ಹುದ್ದೆಗಳಲ್ಲಿ ಇರುವುದನ್ನು ಗಮನಿಸಿದ್ದೇವೆ. ಅದೂ ಒಂದೇ ಊರಿನಲ್ಲಿ ಇಲ್ಲವೇ ಸಮೀಪದ ಊರಿನಲ್ಲೂ ಇರಬಹುದು. ಆದರೆ ಕರ್ನಾಟಕ ಕೇಡರ್‌ನ ಹಿರಿಯ ಐಎಫ್‌ಎಸ್‌ ಅಧಿಕಾರಿಯೊಬ್ಬರಿಗೆ ರಾಜ್ಯ ಸರ್ಕಾರ ಎರಡು ಹುದ್ದೆಗಳನ್ನು ನೀಡಿದೆ. ಒಂದು ಕಲಬುರಗಿಯಲ್ಲಿ. ಮತ್ತೊಂದು ಮೈಸೂರಿನಲ್ಲಿ. ಇದೂ ಶಿಕ್ಷೆಯ ವರ್ಗವೂ ಅಲ್ಲ. ಬದಲಿಗೆ ದಕ್ಷ ಅಧಿಕಾರಿ ಎಂಬ ಕಾರಣಕ್ಕೆ ಖುದ್ದು ಅರಣ್ಯ ಸಚಿವರೇ ಆಸಕ್ತಿಯಿಂದ ವಹಿಸಿದ ಜವಾಬ್ದಾರಿಗಳು. ಆದರೆ ವಿರುದ್ದ ದಿಕ್ಕಿನಲ್ಲಿರುವ ಈ ನಗರಗಳ ನಡುವಿನ ಅಂತರವೇ ಬರೋಬ್ಬರಿ 700 ಕಿ.ಮಿ. ದೂರದಲ್ಲಿ ನಿಯೋಜನೆಯೇ ಹುಬ್ಬೇರುವಂತೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಈ ಊರುಗಳ ನಡುವೆ ಸಂಚಾರಕ್ಕೆ ಕನಿಷ್ಠ ಒಂದು ದಿನವಾದರೂ ಬೇಕು. ಹೋಗಿ ಬರಲು ಎರಡು ದಿನ ಬೇಕು. ಇರುವ ಆರು ದಿನಗಳಲ್ಲಿ ಎರಡು ದಿನ ಪ್ರಯಾಣಕ್ಕೆ ಹೋದರೆ ಕೆಲಸ ಮಾಡುವುದು ಯಾವಾಗ, ವಾರದಲ್ಲಿ ಒಂದು ಬಾರಿ ಬಂದು ಹೋದರೂ ಪ್ರಯಾಣ ಅಷ್ಟು ಸುಲಭವೇ. ಎರಡೂ ನಗರದ ನಡುವೆ ವಿಮಾನ ಸಂಚಾರವೂ ಇಲ್ಲ. ಬೆಂಗಳೂರನ್ನೇ ಆಶ್ರಯಿಸಬೇಕು. ಈ ರೀತಿಯ ನೇಮಕದಿಂದ ಪ್ರಯೋಜನವಾದರೂ ಏನು ಎನ್ನುವ ಪ್ರಶ್ನೆ ಎದುರಾಗಿದೆ.

ಯಾರು ಆ ಅಧಿಕಾರಿ

ಅವರ ಹೆಸರು ಸುನೀಲ್‌ ಪನ್ವಾರ್‌( Sunil panwar). ಉತ್ತರ ಭಾರತದವರಾದರೂ ಐಎಫ್‌ಎಸ್‌ ಅಧಿಕಾರಿಯಾಗಿ ಕರ್ನಾಟಕ ಕೇಡರ್‌ಗೆ 2005ರಲ್ಲಿ ಆಯ್ಕೆಯಾಗಿ ಎರಡು ದಶಕದಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಉತ್ತರ ಕನ್ನಡ ಸಹಿತ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ಧಾರೆ. ಈ ಹಿಂದೆ ಕರ್ನಾಟಕ ಸರ್ಕಾರದ ಈ ಆಡಳಿತ ವಿಭಾಗದಲ್ಲೂಹಲವಾರು ಬದಲಾವಣೆಗೆ ಕಾರಣವಾದವರು. ಬೆಂಗಳೂರು ಬನ್ನೇರಘಟ್ಟ ಮೃಗಾಲಯದ ನಿರ್ದೇಶಕರೂ ಆಗಿದ್ದರು. ವರ್ಷದ ಹಿಂದೆಯಷ್ಟೇ ಅವರನ್ನು ಖುದ್ದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸುನೀಲ್‌ ಪನ್ವಾರ್‌ ಅವರನ್ನು ನಿಯೋಜಿಸಿದ್ದರು.

ವರ್ಗ ಏಕೆ?

ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆ ಒಳಗೊಂಡ ವೃತ್ತದಲ್ಲಿ ಸುನೀಲ್‌ ಪನ್ವಾರ್‌ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಪನ್ವಾರ್‌ ಅವರಿಗೆ ಹೊಸ ಜವಾಬ್ದಾರಿ ನೀಡಿದ ಆದೇಶ ಹೊರ ಬಿದ್ದಿತು. ಅದು ಮೈಸೂರಿನಲ್ಲಿ ಕಚೇರಿ ಇರುವ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹುದ್ದೆ. ಈ ಹುದ್ದೆಯ ವ್ಯಾಪ್ತಿ ಇಡೀ ಕರ್ನಾಟಕಕ್ಕೆ ಬರುತ್ತದೆ. ಅದರಲ್ಲೂ ಬೆಂಗಳೂರು, ಮೈಸೂರು, ಶಿವಮೊಗ್ಗ, ಹಂಪಿ, ಗದಗ, ಬೆಳಗಾವಿ, ಕಲಬುರಗಿ, ದಾವಣಗೆರೆ ವ್ಯಾಪ್ತಿಯ ಎಂಟು ಮೃಗಾಲಯಗಳ ಉಸ್ತುವಾರಿ ಅಧಿಕಾರಿ ಇವರೇ. ಕಲಬುರಗಿ ಎಲ್ಲಿ. ಮೈಸೂರು ಹಾಗೂ ಇತರೆ ಮೃಗಾಲಯಗಳು ಎಲ್ಲಿ. ಆದೇಶ ಹೊರ ಬಿದ್ದ ಮರುದಿನವೇ ಸುನೀಲ್‌ ಪನ್ವಾರ್‌ ಅವರು ಕರ್ನಾಟಕ ಮೃಗಾಲಯಗಳ ಸದಸ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.

ಮೃಗಾಲಯ ಪ್ರಾಧಿಕಾರ

ಕರ್ನಾಟಕ ಮೃಗಾಲಯಗಳಿಗೆ ದಶಕಗಳ ಹಿಂದೆ ಆರ್‌ಎಂಎನ್‌ ಸಹಾಯ್‌ ನಂತರ ಪುನಶ್ಚೇತನ ಕೊಟ್ಟವರು ಕನ್ನಡಿಗರೇ ಆದ ಹಿರಿಯ ಐಎಫ್ಎಸ್‌ ಅಧಿಕಾರಿ ಬಿ.ಪಿ. ರವಿ. ಐದು ತಿಂಗಳ ಹಿಂದೆ ಅವರಿಗೆ ಬಡ್ತಿ ನೀಡಿ ಸರ್ಕಾರ ಬೆಂಗಳೂರಿನಲ್ಲಿ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿತ್ತು. ಮೃಗಾಲಯ ಸದಸ್ಯ ಕಾರ್ಯದರ್ಶಿ ಹುದ್ದೆಗೆ ಮತ್ತೊಬ್ಬ ಹಿರಿಯ ಅಧಿಕಾರಿ ಎ.ಕೆ.ಸಿಂಗ್‌ ಅವರನ್ನು ನಿಯೋಜಿಸಲಾಗಿತ್ತು. ಕಡತ ವಿಲೇವಾರಿ ಸೇರಿದಂತೆ ಹಲವು ವಿಚಾರಗಳಲ್ಲಿ ವಿಳಂಬವಾಗುತ್ತಿದೆ ಎನ್ನುವ ದೂರುಗಳು ಎಕೆ ಸಿಂಗ್‌ ಅವರ ಮೇಲಿದ್ದವು. ಅವರೂ ಸಹಾ ಬೆಂಗಳೂರಿನ ಹುದ್ದೆ ಕೇಳಿಕೊಂಡಿದ್ದರಿಂದ ಅವರನ್ನು ಐದೇ ತಿಂಗಳಲ್ಲಿ ಬದಲಾಯಿಸಲಾಯಿತು. ಕಲಬುರಗಿಯಲ್ಲಿದ್ದ ಸುನೀಲ್‌ ಪೊನ್ವಾರ್‌ ಅವರಿಗೆ ಹೆಚ್ಚುವರಿ ಹುದ್ದೆಯನ್ನು ಸರ್ಕಾರ ನೀಡಿತು. ಆದರೆ ಅದೂ ವಿರುದ್ದ ದಿಕ್ಕಿನ ಎರಡು ಮಹಾನಗರಗಳಲ್ಲಿರುವ ಕಚೇರಿಗಳಲ್ಲಿ ಕೆಲಸ ಮಾಡುವಂತಹ ಸ್ಥಿತಿ.

ದೂರದಲ್ಲಿ ಕೆಲಸ ಮಾಡಲು ಸಾಧ್ಯವೇ?

ಅರಣ್ಯ ಸಚಿವರ ಕಳಕಳಿ ಚೆನ್ನಾಗಿದೆ. ಆದರೆ ಬೆಂಗಳೂರಿನಲ್ಲಿಯೇ ಎಪಿಸಿಸಿಎಫ್‌ ಹಂತದ ಅಧಿಕಾರಿಗಳು ಹಲವರು ಇದ್ದಾರೆ. ಅವರಲ್ಲಿಯೇ ಒಬ್ಬರನ್ನು ಇಲ್ಲಿಗೆ ನಿಯೋಜಿಸಬಹುದಿತ್ತು. ಇಲ್ಲವೇ ಸುನೀಲ್‌ ಪನ್ವಾರ್‌ ಅವರಿಗೆ ಮೃಗಾಲಯ ಪ್ರಾಧಿಕಾರದ ಹುದ್ದೆ ನೀಡಿ ಕಲಬುರಗಿಗೆ ಇನ್ನೊಬ್ಬ ಅಧಿಕಾರಿ ನೇಮಿಸಬೇಕಿತ್ತು. ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸುತ್ತಾರೆ ಎನ್ನುವ ಕಾರಣಕ್ಕೆ ಹೀಗೆ ಭಿನ್ನ ಜಾಗಗಳ ಮಹತ್ವದ ಹುದ್ದೆಗಳಿಗೆ ನಿಯೋಜಿಸುವುದು ಸರಿಯಲ್ಲ. ಇದರಿಂದ ಕೆಲಸ ಮಾಡುವ ಉತ್ಸಾಹವೂ ಹೋಗುತ್ತದೆ. ದಕ್ಷ ಅಧಿಕಾರಿಗಳಿಗೆ ಹೀಗೆ ಆರು ತಿಂಗಳಿಗೊಮ್ಮೆ ವರ್ಗ ಮಾಡಿದರೆ ಕೆಲಸ ಮಾಡುವವರೇ ಸಿಗುವುದಿಲ್ಲ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇ ಆಡಳಿತಕ್ಕೆ ಒತ್ತು

ಈ ಕುರಿತು ಪ್ರತಿಕ್ರಿಯಿಸಿದ ಸುನೀಲ್‌ ಪನ್ವಾರ್‌, ಸರ್ಕಾರ ಕಲಬುರಗಿ ಜತೆಗೆ ಮೈಸೂರಿನಲ್ಲಿಯೂ ಹುದ್ದೆ ನೀಡಿದೆ. ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದೇನೆ. ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ ಕೆಲಸ ಮಾಡುವ ತೀರ್ಮಾನ ಮಾಡಿದ್ದೇನೆ. ಈಗ ಇ ಆಫೀಸ್‌ನಂತಹ ವ್ಯವಸ್ಥೆಗಳು ಬಂದಿವೆ. ಒಂದು ಕಡೆ ಕುಳಿತು ಎರಡೂ ಕಡೆಯ ಜವಾಬ್ದಾರಿಯನ್ನು ನಿಭಾಯಿಸಬಹುದು. ಈಗಾಗಲೇ ಕರ್ನಾಟಕ ಮೃಗಾಲಯ ಪ್ರಾಧಿಕಾರದಲ್ಲಿದ್ದ ಕಡತಗಳನ್ನೂ ವಿಲೇವಾರಿ ಮಾಡಿದ್ದೇನೆ. ವಿಳಂಬಕ್ಕೆ ಅವಕಾಶವೇ ಇಲ್ಲ. ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಹೇಳುತ್ತಾರೆ.

ಟಿ20 ವರ್ಲ್ಡ್‌ಕಪ್ 2024