ಬೆಂಗಳೂರಿನ ಹೃದಯಭಾಗದಲ್ಲಿ ಮನೆ ಬಾಡಿಗೆ ಹೆಚ್ಚಳ; ಹೊರವಲಯಗಳತ್ತ ಮುಖ ಮಾಡುತ್ತಿರುವ ಐಟಿ ಉದ್ಯೋಗಿಗಳು; ಆತಂಕದಲ್ಲಿ ಮನೆ ಮಾಲೀಕರು
ಐಟಿ ರಾಜಧಾನಿಯ ಹೃದಯಭಾಗದಲ್ಲಿ ಮನೆ ಬಾಡಿಗೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಐಟಿ ಉದ್ಯೋಗಿಗಳು ನಗರದ ಹೊರವಲಯಗಳತ್ತ ಮುಖ ಮಾಡುತ್ತಿದ್ದಾರೆ. ಇದು ಬೆಳವಣಿಗೆ ಮನೆ ಮಾಲೀಕರ ಆತಂಕವನ್ನು ಹೆಚ್ಚಿಸಿದೆ. ಇದಕ್ಕೆ ಕಾರಣವೇನು ಅನ್ನೋದನ್ನು ತಿಳಿಯೋಣ. (ವರದಿ: ಎಚ್ ಮಾರುತಿ)

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ದರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅದರಲ್ಲೂ ಕಳೆದ 2 ವರ್ಷಗಳಿಂದ ಬಾಡಿಗೆ ದರ ಗಗನಮುಖಿಯಾಗಿ ಏರುತ್ತಲೇ ಇದೆ. ಒಮ್ಮೆ ಮನೆ ಖಾಲಿಯಾದರೆ ಮಾಲೀಕರು ದಿಢೀರನೆ 2-3 ಸಾವಿರ ರೂಪಾಯಿ ಏರಿಸಿ ಬಿಡುತ್ತಿದ್ದಾರೆ. ಐಟಿ ಉದ್ಯೋಗಿಗಳಿಗೆ ಕೈತುಂಬಾ ಸಂಬಳ ಬರುತ್ತಿದ್ದು, ಕೇಳಿದಷ್ಟು ಬಾಡಿಗೆ ನೀಡುತ್ತಾರೆ ಎಂಬ ಇರಾದೆ ಮಾಲೀಕರದ್ದು. ಮನೆ ಮಾಲೀಕರ ಈ ವರ್ತನೆಯಿಂದ ಬೇಸತ್ತ ಐಟಿ ಮಂದಿ ಬೆಂಗಳೂರಿನ ಮನೆ ಮಾಲೀಕರ ಸಹವಾಸವೇ ಬೇಡ ಎಂದು ನಗರದ ಹೊರ ವಲಯಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಬೆಂಗಳೂರಿನ ಯಾವುದೇ ಹೊರ ವಲಯಕ್ಕೆ ಹೋದರೂ ಬಾಡಿಗೆ ಕೈಗೆಟಕುವ ರೀತಿಯಲ್ಲಿ ಇರುತ್ತದೆ, ಮನೆಗಳೂ ಹೊಸದಾಗಿದ್ದು, ಎಲ್ಲ ಸೌಕರ್ಯಗಳು ಇರುತ್ತವೆ. ಆದ್ದರಿಂದ ಹೊರವಲಯದಲ್ಲೇ ಮನೆ ಮಾಡಿಕೊಂಡಿದ್ದೇವೆ ಎಂದೂ ಐಟಿ ಉದ್ಯೋಗಿ ದಂಪತಿಗಳು ಹೇಳುತ್ತಾರೆ.
ಐಟಿ ಹಬ್‌ಗಳಲ್ಲಿ ಒಂದಾದ ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಶೇ.15-20 ರಷ್ಟು ಕಡಿಮೆಯಾಗಿದೆ ಎಂದು ಮನೆ ಮಾಲೀಕರು ಹೇಳುತ್ತಾರೆ. ಇದನ್ನು ಬ್ರೋಕರ್‌ಗಳೂ ಒಪ್ಪಿಕೊಳ್ಳುತ್ತಾರೆ. ಮತ್ತೊಬ್ಬ ಐಟಿ ಉದ್ಯೋಗಿ ದಂಪತಿಗಳ ಭಾವನೆಯೂ ಇದೇ ಆಗಿದೆ. ಇವರು ಸರ್ಜಾಪುರದ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಆದರೆ ಸರ್ಜಾಪುರದಲ್ಲಿ ಬಾಡಿಗೆ ವಿಪರೀತ ಏರಿರುವುದು ಇವರಿಗೆ ಕಿರಿಕಿರಿ ಉಂಟು ಮಾಡಿದೆ. ಏಕಾಏಕಿ 20-25ರಷ್ಟು ಬಾಡಿಗೆ ಹೆಚ್ಚಳ ಮಾಡುವುದಾಗಿ ಅಪಾರ್ಟ್‌ಮೆಂಟ್ ಮಾಲೀಕರು ಹೇಳಿರುವುದು ಇವರಿಗೆ ಬೇಸರ ಉಂಟು ಮಾಡಿದೆ. ಆದ್ದರಿಂದ ಇವರು ಸರ್ಜಾಪುರದಿಂದ 5 ಕಿಮೀ ದೂರದ ಹೊರವಲಯಕ್ಕೆ ಸ್ಥಳಾಂತರಗೊಳ್ಳುವುದಾಗಿ ಹೇಳುತ್ತಾರೆ.
ಬೆಂಗಳೂರು ಹೊರವಲಯದಲ್ಲಿ ಕಡಿಮೆ ಬಾಡಿಗೆಗೆ 3 ಬಿಎಚ್‌ಕೆ ಮನೆ
ಹೊರ ವಲಯದಲ್ಲಿ 35 ಸಾವಿರ ರೂ.ಗೆ 3 ಬಿಎಚ್‌ಕೆ ಮನೆ ಬಾಡಿಗೆಗೆ ಸಿಕ್ಕಿದೆ. ಆದರೆ ಸರ್ಜಾಪುರದಲ್ಲಿ 2 ಬಿಎಚ್ ಕೆ ಮನೆಗೆ 38 ಸಾವಿರ ರೂ. ಬಾಡಿಗೆ ಹೇಳುತ್ತಿದ್ದರು. ಈಗ ಹಣ ಉಳಿತಾಯವಾಗುತ್ತಿದೆ ಎನ್ನುತ್ತಾರೆ. ನಗರದ ಪೂರ್ವ ಭಾಗದಲ್ಲೂ ಪರಿಸ್ಥಿತಿ ಭೀನ್ನವಾಗಿಲ್ಲ. ವೈಟ್‌ಫೀಲ್ಡ್, ಹೂಡಿ, ಹೊರ ವರ್ತುಲ ರಸ್ತೆ ಮತ್ತು ಸರ್ಜಾಪುರ ಮೊದಲಾದ ಪ್ರದೇಶಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ ಇದೇ ಪ್ರದೇಶಗಳಿಗೆ ಹತ್ತಿರದಲಿರುವ ವರ್ತೂರು ಚನ್ನಸಂದ್ರ, ಕುಂದಲಹಳ್ಳಿಯಲ್ಲಿ ಬಾಡಿಗೆ ಕೈಗೆಟಕುವ ದರದಲಿ ಸಿಗುತ್ತಿವೆ.
ಈ ವರ್ಷದ ಶೈಕ್ಷಣಿಕ ವರ್ಷ ಆಂಭವಾಗುತ್ತಿದ್ದಂತೆ ದಿಢೀರನೆ ಬಾಡಿಗೆ ದರ ಏರಿಕೆಯಾಗಿದೆ. ಸಮೀಕ್ಷೆಯೊಂದರ ಪ್ರಕಾರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸುಮಾರು 9 ಸಾವಿರ ಮನೆಗಳು ನಿರ್ಮಾಣವಾಗಿದ್ದು, ಇದರಲ್ಲಿ ಶೇ.35ರಷ್ಟು ಮನೆಗಳು ವೈಟ್‌ಫೀಲ್ಡ್ ಭಾಗದಲ್ಲಿ ನಿರ್ಮಾಣಗೊಂಡಿವೆ ಎಂದು ತಿಳಿದು ಬಂದಿದೆ. ವೈಟ್‌ಫೀಲ್ಡ್, ಹೂಡಿ ಮತ್ತು ಚನ್ನಸಂದ್ರದಲ್ಲಿ ಎರಡು ಬಿಎಚ್ ಕೆ ಮನೆ ಬಾಡಿಗೆ 40 ಸಾವಿರದಿಂದ 30-35 ಸಾವಿರಕ್ಕೆ ಇಳಿದಿದೆ ಎಂದು ಹೇಳಲಾಗುತ್ತಿದೆ. ಹೊರವಲಯಗಳಲ್ಲಿ ಕಡಿಮೆ ದರಕ್ಕೆ ಬಾಡಿಗೆ ಮನೆ ಸಿಗುತ್ತಿರುವುದರಿಂದ ಅನಿವಾರ್ಯವಾಗಿ ಬಾಡಿಗೆ ದರವನ್ನು ಇಳಿಸಿದ್ದೇವೆ ಎಂದು ಮನೆ ಮಾಲೀಕರೂ ಒಪ್ಪಿಕೊಳ್ಳುತ್ತಾರೆ.
ಇಂದಿರಾನಗರದ ಸುತ್ತಮುತ್ತ ಬಾಡಿಗೆಗೆ ಮನೆ ಹುಡುಕುತ್ತಿದ್ದವರು ಈಗ ಸ್ವಲ್ಪ ಮುಂದಕ್ಕೆ ಹೋಗಿದ್ದಾರೆ. ಮೆಟ್ರೋ ರೈಲು ವ್ಯವಸ್ಥೆ ಇರುವ ಹಳೆ ಮದ್ರಾಸ್ ರಸ್ತೆ ಮತ್ತು ಕೆ.ಆರ್.ಪುರದತ್ತ ಶಿಫ್ಟ್ ಆಗುತ್ತಿದ್ದಾರೆ. ನಗರದ ಹೃದಯಭಾಗವೇ ಆಗಿರುವ ಕೋರಮಂಗಲದಲ್ಲಿ 3 ಬಿಎಚ್ ಕೆ ಮನೆಗೆ ಇದ್ದ ಬಾಡಿಗೆ 75 ಸಾವಿರ ರೂ.ಗಳಿಂದ 60-65 ಸಾವಿರ ರೂ.ಗಳಿಗೆ ಇಳಿಸಿದ್ದೇವೆ ಎಂದು ಮನೆ ಮಾಲೀಕರೊಬ್ಬರ ಆಂಬೋಣವಾಗಿದೆ. ಮೈಸೂರು ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಮನೆ ಖಾಲಿ ಇತ್ತು. ಈಗ ಬಾಡಿಗೆಯನ್ನು 10 ಸಾವಿರ ರೂ. ಕಡಿಮೆ ಮಾಡಿ 30 ಸಾವಿರ ರೂ.ಗೆ ಬಾಡಿಗೆಗೆ ನೀಡಿರುವುದಾಗಿ ಮನೆ ಮಾಲೀಕರೊಬ್ಬರು ಹೇಳುತ್ತಾರೆ.
ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ ಬೆಂಗಳೂರು ಬೆಳೆಯುತ್ತಿದ್ದು, ಬಾಡಿಗೆದಾರರಿಗೆ ಹೆಚ್ಚು ಹೆಚ್ಚು ಆಯ್ಕೆಗಳು ಲಭ್ಯವಾಗುತ್ತಿವೆ. ಎರಡು ವರ್ಷಗಳ ಹಿಂದೆ ಗ್ರಾಹಕೆರಿಗೆ ಹೆಚ್ಚು ಆಯ್ಕೆಗಳಿರಲಿಲ್ಲ. ಕೇಳಿದಷ್ಟು ಬಾಡಿಗೆ ನೀಡುವ ಪರಿಸ್ಥಿತಿ ಉಂಟಾಗಿತ್ತು. ಆದರೆ ಈ ಹಾಗಿಲ್ಲ. ಸ್ಪರ್ಧೆ ಹೆಚ್ಚಿದ್ದು, ಗ್ರಾಹಕರಿಗೆ ಆಯ್ಕೆಗಳ ಸ್ವಾತಂತ್ರ್ಯ ಹೆಚ್ಚಿದೆ. ಆದರೆ ಕೋಟಿಗಟ್ಟಲೆ ಬಂಡವಾಳ ಹೂಡಿ ಮನೆ ಕಟ್ಟಿರುವ ಮಾಲೀಕರ ಪರಿಸ್ಥಿತಿ ಚಿಂತಾಕ್ರಾಂತವಾಗಿರುವುದಂತೂ ಸುಳ್ಳಲ್ಲ. (ವರದಿ: ಎಚ್ ಮಾರುತಿ)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)