ಕನ್ನಡ ಸುದ್ದಿ  /  Karnataka  /  Bangalore News Indian Railway Proposed For Devanahalli Railway Terminal With 10 Platforms In 2,500 Crore Project Kub

Devanahalli Railway Terminal: ದೇವನಹಳ್ಳಿಯಲ್ಲಿ ಬರಲಿದೆ ಬೃಹತ್‌ ರೈಲ್ವೆ ಟರ್ಮಿನಲ್‌, 2,500 ಕೋಟಿ ರೂ. ವೆಚ್ಚದ ಯೋಜನೆ

ಬೆಂಗಳೂರು ರೈಲ್ವೆ ನಿಲ್ದಾಣಗಳ ಮೇಲಿನ ಒತ್ತಡ ತಗ್ಗಿಸಲು ದೇವನಹಳ್ಳಿಯಲ್ಲಿ ರೈಲ್ವೆ ಟರ್ಮಿನಲ್‌ ರೂಪಿಸಲು ಭಾರತೀಯ ರೈಲ್ವೆ ಬೆಂಗಳೂರು ವಿಭಾಗ ಮುಂದಾಗಿದೆ.

ದೇವನಹಳ್ಳಿಯಲ್ಲಿ ಬರಲಿದೆ ರೈಲ್ವೆ ಬೃಹತ್‌ ಟರ್ಮಿನಲ್
ದೇವನಹಳ್ಳಿಯಲ್ಲಿ ಬರಲಿದೆ ರೈಲ್ವೆ ಬೃಹತ್‌ ಟರ್ಮಿನಲ್

ಬೆಂಗಳೂರು: ಈಗಾಗಲೇ ಬೆಂಗಳೂರಿನ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಈ ಭಾಗದ ಇನ್ನಷ್ಟು ಅಭಿವೃದ್ದಿಗೆ ಪೂರಕವಾಗಿ ಬೃಹತ್‌ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ ಭಾರತೀಯ ರೈಲ್ವೆ ಇಲಾಖೆಯು ಮುಂದಾಗಿದೆ. ಸುಮಾರು 2,500 ಕೋಟಿ ರೂ.ಗಳ ಯೋಜನೆಗೆ ವಿಸ್ತೃತ ವರದಿಯನ್ನು ಬೆಂಗಳೂರು ರೈಲ್ವೆ ವಿಭಾಗವು ಸಿದ್ದಪಡಿಸಿದೆ. ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮೇಲಿನ ಒತ್ತಡ ತಗ್ಗಿಸುವ ಜತೆಗೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕ ರೈಲ್ವೆ ಇಲಾಖೆಯು ಮುಂದಾಗಿದೆ.

ಬೆಂಗಳೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಇದ್ದರೂ ಈಗ ಇರುವ ರೈಲುಗಳ ಸಂಖ್ಯೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ವಿಸ್ತರಣೆಗೆ ಅವಕಾಶವಿಲ್ಲ. ಇರುವ ನಿಲ್ದಾಣ ಅಭಿವೃದ್ದಿಗೆ ಮಾತ್ರ ಅವಕಾಶವಿದೆ. ಪ್ರತ್ಯೇಕ ವಿಶಾಲ ರೈಲ್ವೆ ನಿಲ್ದಾಣ ನಿರ್ಮಿಸಿರುವ ಮುಖ್ಯ ರೈಲ್ವೆ ನಿಲ್ದಾಣದ ಒತ್ತಡ ತಗ್ಗಿಸುವ ಕುರಿತು ಚಿಂತನೆಗಳು ನಡೆದಿದ್ದವು. ಅದು ಈಗ ರೂಪ ಪಡೆದುಕೊಳ್ಳುತ್ತಿದೆ.

ಇದಕ್ಕಾಗಿ ಸುಮಾರು 2,500 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಸುಸಜ್ಜಿತ ರೈಲ್ವೆ ನಿಲ್ದಾಣ ರೂಪಿಸುವುದು ಈ ಯೋಜನೆ ಉದ್ದೇಶ. ರೈಲುಗಳ ನಿರ್ವಹಣೇ ಸೇರಿದಂತೆ ಎಲ್ಲಾ ಸೌಲಭ್ಯಗಳು ದೇವನಹಳ್ಳಿ ಬಳಿ ಬರುವ ರೈಲ್ವೆ ಟರ್ಮಿನಲ್‌ ನಲ್ಲಿ ಇರಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈಗಾಗಲೇ ವಿಕಸಿತ ಭಾರತ್‌ ಯೋಜನೆಯಡಿ ರೈಲ್ವೆಯ ಹಲವಾರು ಯೋಜನೆಗಳನ್ನುಕೈಗೆತ್ತಿಕೊಳ್ಳಲಾಗುತ್ತಿದೆ. ಈಗಿರುವ ನಿಲ್ದಾಣದ ಸಮೀಒಪದಲ್ಲಿಯೇ ಸುಮಾರು 200 ಜಾಗಕ್ಕಾಗಿ ಹುಡುಕಾಟ ನಡೆದಿದೆ. ಇಲ್ಲಿ ಹತ್ತು ಫ್ಲಾಟ್‌ಫಾರಂಗಳು ಬರಲಿವೆ. ದೇವನಹಳ್ಳಿ ಬಳಿ ಟರ್ಮಿನಲ್‌ ರೂಪುಗೊಂಡರೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ ಹಾಗೂ ಕಂಟೋನ್‌ಮೆಂಟ್‌ ನಿಲ್ದಾಣಗಳ ಒತ್ತಡ ತಗ್ಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಯೋಜನೆ ಜಾರಿಗೊಳಿಸುವ ಸಂಬಂಧ ಕಾರ್ಯಸಾಧ್ಯತೆ(feasibility) ಅಧ್ಯಯನ ನಡೆಸಿ ವರದಿಯನ್ನು ಸಿದ್ದಪಡಿಸಲಾಗಿದೆ. ಅದನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗುತ್ತದೆ. ಇದು ರೈಲ್ವೆ ಮಂಡಳಿ ಜತೆಗೆ ಕೇಂದ್ರ ಸರ್ಕಾರದ ಅನುಮತಿ ಬೇಡುವ ಯೋಜನೆ. ಇದರಲ್ಲಿ ದೊಡ್ಡ ಮೊತ್ತದ ಹೂಡಿಕೆ ಇರುವುದರಿಂದ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಈಗಾಗಲೇ ಬೆಂಗಳೂರು ನಗರಕ್ಕೆ ವೃತ್ತಾಕಾರದ ರೈಲ್ವೆ ಯೋಜನೆ(circular railway project )ಯ ಪ್ರಸ್ತಾವನೆಯಿದೆ. 287 ಕಿ. ಮಿ. ಉದ್ದದ ವೃತ್ತಾಕಾರದ ಯೋಜನೆಗೆ ಪೂರಕವಾಗಿ ದೇವನಹಳ್ಳಿ ರೈಲ್ವೆ ಟರ್ಮಿನಲ್‌ ರೂಪುಗೊಳ್ಳಲಿದೆ. ಸಮೀಪದ ರೈಲ್ವೆ ನಿಲ್ದಾಣಗಳಿಗೆ ಟರ್ಮಿನಲ್‌ ಮೂಲಕ ಸಂಪರ್ಕ ಕಲ್ಪಿಸುವುದು ಇದರಲ್ಲಿ ಸೇರಿದೆ. ಒಮ್ಮೆ ಸರ್ಕಾರದಿಂದ ಅನುಮತಿ ದೊರೆತರೆ ಕೆಲಸವೂ ಬೇಗನೇ ಶುರುವಾಗಲಿದೆ ಎನ್ನುವುದು ರೈಲ್ವೆ ಅಧಿಕಾರಿಗಳ ಸ್ಪಷ್ಟನೆ.

ಕಳೆದ ವರ್ಷ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ಶ್ರೀವೈಷ್ಣವ್‌ ಅವರು ಬೆಂಗಳೂರು ವೃತ್ತಾಕಾರದ ರೈಲ್ವೆ ಯೋಜನೆ ಪ್ರಕಟಿಸಿದ್ದರು.ಬೆಂಗಳೂರು ಸುತ್ತಮುತ್ತಲಿನ ನಿಡವಂದ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಸೋಲೂರು ಸಹಿತ ಸಣ್ಣಪುಟ್ಟ ರೈಲ್ವೆ ನಿಲ್ದಾಣಗಳ ಸಂಪರ್ಕ ಕಲ್ಪಿಸುವ ಉದ್ದೇಶವೂ ಇದರ ಹಿಂದೆ ಇದೆ. ವೃತ್ತಾಕಾರದ ರೈಲ್ವೆ ಯೋಜನೆ ಜಾರಿಯಾದರೆ ದೇವನಹಳ್ಳಿ ಟರ್ಮಿನಲ್‌ ಮೂಲಕವೂ ರೈಲು ಸಂಚಾರ ಸುಲಭವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಹೊಂದಲಾಗಿದೆ.‌