Ipl2024 Betting: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್ ಪಂದ್ಯಗಳ ಇಬ್ಬರು ಬುಕ್ಕಿಗಳ ಬಂಧನ, ಇನ್ನಿಬ್ಬರು ಪರಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Ipl2024 Betting: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್ ಪಂದ್ಯಗಳ ಇಬ್ಬರು ಬುಕ್ಕಿಗಳ ಬಂಧನ, ಇನ್ನಿಬ್ಬರು ಪರಾರಿ

Ipl2024 Betting: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್ ಪಂದ್ಯಗಳ ಇಬ್ಬರು ಬುಕ್ಕಿಗಳ ಬಂಧನ, ಇನ್ನಿಬ್ಬರು ಪರಾರಿ

ಬೆಂಗಳೂರಿನ ಪೊಲೀಸರು ಐಪಿಎಲ್‌ ಪಂದ್ಯಗಳ ಬೆಟ್ಟಿಂಗ್‌ ಜಾಲವನ್ನು ಬೇಧಿಸಿದ್ದು ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಸ್ತೃತ ತನಿಖೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸುವುದಕ್ಕೆ ಕ್ರಮ ತೆಗೆದುಕೊಂಡಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಟ್ಟಿಂಗ್‌ ದಂಧೆಯನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.
ಬೆಟ್ಟಿಂಗ್‌ ದಂಧೆಯನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿರುವಾಗಲೇ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಇಬ್ಬರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮತ್ತಿಬ್ಬರು ಬುಕ್ಕಿಗಳು ತಪ್ಪಿಸಿಕೊಂಡಿದ್ದಾರೆ. ಸಂಜೀವ್ ಕುಮಾರ್ ಬೆಹರಾ ಹಾಗೂ ಪವನ್ ಬಂಧಿತ ಬುಕ್ಕಿಗಳು. ಇವರಿಂದ ರೂ. 1.17 ಲಕ್ಷ ನಗದು ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಐಪಿಎಲ್‌ ಟೂರ್ನಿ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್‌ ವ್ಯವಹಾರ ನಡೆಯುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಬಂಧಿಸಲ್ಪಟ್ಟಿರುವ ಆರೋಪಿಗಳ ಪೈಕಿ ಒಬ್ಬ ಆರ್‌ಸಿಬಿ ತಂಡದ ಜರ್ಸಿಯಲ್ಲೇ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಿಸಲು ಆಗಮಿಸಿದ್ದರೆ ಮತ್ತೊಬ್ಬ ಸಾಮಾನ್ಯ ಉಡುಪಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಿಗಳು, ಕೆಲವು ಆಪ್ ಗಳು ಮತ್ತು ಮೊಬೈಲ್ ಕರೆ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಸುತ್ತಿದ್ದರು. ಕ್ರೀಡಾಂಗಣದಲ್ಲಿ ಕುಳಿತು ನೇರವಾಗಿ ಕ್ರಿಕೆಟ್ ಪಂದ್ಯ ನೋಡುವುದಕ್ಕೂ ಮತ್ತು ಟಿ.ವಿ ಪರದೆಯಲ್ಲಿ ನೋಡುವುದಕ್ಕೂ ಕೆಲವು ಸೆಕೆಂಡ್‌ಗಳ ವ್ಯತ್ಯಾಸ ಇದ್ದೇ ಇರುತ್ತದೆ. ಹೀಗಾಗಿ ಸಾಮಾನ್ಯವಾಗಿ ಆರೋಪಿಗಳು ಪಂದ್ಯ ನಡೆಯುವ ಸ್ಟೇಡಿಯಂಗೆ ಆಗಮಿಸಿ ಅಲ್ಲಿಯೇ ಕುಳಿತು ಮೊಬೈಲ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಕ್ರೀಡಾಂಗಣದಿಂದ ಹೊರಗೆ ಇರುವ ಬುಕ್ಕಿಗಳಿಗೂ ವ್ಯಾಟ್ಸ್ಆ್ಯಪ್‌ ಮೂಲಕ ಕ್ಷಣ ಕ್ಷಣದ ಮಾಹಿತಿಯನ್ನು ಕಳುಹಿಸುತ್ತಿದ್ದರು, ಈ ಜಾಲದಲ್ಲಿ ಇನ್ನೂ ಹಲವರು ಇರುವ ಅನುಮಾನಗಳಿವೆ. ಈ ನಿಟ್ಟಿನಲ್ಲಿ ಬಂಧಿತರಿಂದ ಪಡೆದ ಮಾಹಿತಿ ಆಧರಿಸಿ ತನಿಖೆಯನ್ನು ಬಹು ಆಯಾಮಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೈಕ್‌ ಕದಿಯುತ್ತಿದ್ದ ನಾಲ್ವರು ಬಾಲಕರ ಬಂಧನ

ಪಾದಚಾರಿ ರಸ್ತೆ ಹಾಗೂ ಮನೆಗಳ ಎದುರು ನಿಲ್ಲಿಸಿರುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಬೆಂಗಳೂರಿನ ಅಮೃತಹಳ್ಳಿ ಹಾಗೂ ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ. ಇವರಿಂದ

22 ಲಕ್ಷ ರೂಪಾಯಿ ಮೌಲ್ಯದ 29 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದನ್‌ ಎಂಬ ಯುವ ಆರೋಪಿ ಮತ್ತು ಇಬ್ಬರು ಬಾಲಕರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ ಇವರಿಂದ 15 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಬೈಕ್‌ಗಳ ಕಳವು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಮೂವರು ಬೈಕ್ ಕಳ್ಳರ ಬಂಧನದಿಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ 1, ಕೊಡಿಗೇಹಳ್ಳಿಯ 2, ಯಲಹಂಕ ನ್ಯೂಟೌನ್‌, ವಿಜಯನಗರ, ಯಶವಂತಪುರ, ಬಸವೇಶ್ವರನಗರ, ಚಂದ್ರಾಲೇಔಟ್‌ ಪೊಲೀಸ್ ಠಾಣೆಗಳ ತಲಾ ಒಂದು ಬೈಕ್ ಕಳವು ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ 4, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವಲಹಳ್ಳಿ, ನೆಲಮಂಗಲ ಗ್ರಾಮಾಂತರ, ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆಗಳ ತಲಾ ಒಂದು ಸೇರಿದಂತೆ ಒಟ್ಟು 15 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಇವರಿಂದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ 15 ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎರಡು ಬೈಕ್ ಕಳವು ಪ್ರಕರಣಗಳಲ್ಲಿ ಇಬ್ಬರು ಬಾಲಕರನ್ನು ಅಮೃತಹಳ್ಳಿ ಪೊಲೀಸರ ತಂಡ ಬಂಧಿಸಿದೆ. ಅಮೃತಹಳ್ಳಿ, ಪೀಣ್ಯ, ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಕದ್ಧಿದ್ದ ರೂಪಾಯಿ 10 ಲಕ್ಷ ಮೌಲ್ಯದ 14 ಬೈಕ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner