ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಕೋಟಿ ಕೋಟಿ ಆಸ್ತಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಬೆಂಗಳೂರಿನ ಅಮ್ಮ ಮಗ !

Bangalore News: ಕೋಟಿ ಕೋಟಿ ಆಸ್ತಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಬೆಂಗಳೂರಿನ ಅಮ್ಮ ಮಗ !

ಜೈನ ಸನ್ಯಾಸತ್ವ ಸ್ವೀಕರಿಸಿದ ಬೆಂಗಳೂರಿನ ಉದ್ಯಮಿಯ ಪತ್ನಿ ಮತ್ತು ಆಕೆಯ 11 ವರ್ಷದ ಪುತ್ರ: 30 ನೇ ವಯಸ್ಸಿಗೆ ಸನ್ಯಾಸಿಯಾಗುವ ವ್ಯಾಮೋಹ ಬಂದದ್ದಾದರೂ ಹೇಗೆ? ̤ ಇಲ್ಲಿದೆ ವಿವರ.ವರದಿ: ಎಚ್.‌ ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ಅಮ್ಮ ಮಗ.
ಬೆಂಗಳೂರಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ಅಮ್ಮ ಮಗ.

ಬೆಂಗಳೂರು: ಅವರದ್ದು ಸುಖೀ ಕುಟುಂಬ. ಕೋಟಿಗಟ್ಟಲೇ ಆಸ್ತಿ, ಆಳು ಕಾಳುಗಳ ನಡುವೆ ಸಮೃದ್ದ ಜೀವನ. ಇದು ಈಗಿನವರು ಹಂಬಲಿಸುವ ಬದುಕಿನ ಪರಿಯೂ ಹೌದು. ಆದರೆ ಕೆಲವರದ್ದು ಇದ್ದುದನ್ನು ಬಿಟ್ಟು ಇಲ್ಲದ ಕಡೆಗೆ ತುಡಿಯುವುದೇ ಜೀವನ ಎನ್ನುವ ಮಾತಿನಂತೆ ಬೆಂಗಳೂರಿನ ಜೈನ ಕುಟುಂಬದ ಅಮ್ಮ ಹಾಗೂ ಮಗ ಈಗ ಸನ್ಯಾಸ ಸ್ವೀಕರಿಸಿದ್ದಾರೆ. ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಸಮಾಜಕ್ಕೆ ಧಾರೆ ಎರೆದು ಸನ್ಯಾಸತ್ವ ಸ್ವೀಕರಿಸುವುದು ಜೈನ ಸಮಾಜಕ್ಕೆ ಹೊಸದೇನಲ್ಲ. ದಶಕಗಳ ಕಾಲದಿಂದಲೂ ಅನೇಕ ಜೈನ ಉದ್ದಿಮೆದಾರರು ಮತ್ತು ವ್ಯಾಪಾರಿಗಳು ಸನ್ಯಾಸಿಗಳಾಗುತ್ತಾ ಬಂದಿದ್ದಾರೆ. ಇದೀಗ ಜೈನ ಸನ್ಯಾಸಿಗಳ ಪಾಲಿಗೆ ಹೊಸ ಸೇರ್ಪಡೆ ಕರ್ನಾಟಕದ ಸ್ವೀಟಿ ಮತ್ತು ಆಕೆಯ ಪುತ್ರ ಹೃಧನ್.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗಷ್ಟೇ 30 ವರ್ಷದ ಸ್ವೀಟಿ ಮತ್ತು ಆಕೆಯ 11 ವರ್ಷದ ಪುತ್ರ ಹೃಧನ್ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್ ನ ಸೂರತ್ ನಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ಇವರು ದೀಕ್ಷೆ ಪಡೆದಿದ್ದಾರೆ. ಸ್ವೀಟಿ ಅವರಿಗೆ ಭಾವಶುದ್ಧಿ ರೇಖಾಶ್ರೀ ಮತ್ತು ಹೃಧನ್ ಗೆ ಹಿತಾಶಯ್ ರತನ್ ವಿಜಯ್ ಜಿ ಎಂದು ನಾಮಕರಣ ಮಾಡಲಾಗಿದೆ.

ಇವರ ಕುಟುಂಬದ ಮೂಲಗಳ ಪ್ರಕಾರ ಭಾವಶುದ್ಧಿ ರೇಖಾ ಶ್ರೀ ಅವರಿಗೆ ಗರ್ಭಿಣಿಯಾಗಿದ್ದಾಗಲೇ ಸನ್ಯಾಸಿನಿಯಾಗಬೇಕೆಂಬ ಆಪೇಕ್ಷೆ ಉಂಟಾಗಿತ್ತು. ತನ್ನ ಮಗನೂ ತನ್ನಂತೆಯೇ ಸನ್ಯಾಸಿಯಾಗಬೇಕು ಎಂದು ಬಯಸಿದ್ದರಂತೆ. ತಾನು ಬೆಳೆದಂತೆಲ್ಲಾ ಮಗನಿಗೆ ಸನ್ಯಾಸಿಯ ಜೀವನ ಪ್ರವೇಶ ಮಾಡಬೇಕೆಂಬ ಅರಿವು ಇತ್ತು. ಇದೇ ವರ್ಷದ ಜನವರಿ ತಿಂಗಳಲ್ಲಿ ತಾಯಿ ಮಗ ಇಬ್ಬರೂ ಸೂರತ್ ನಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಿ ದೀಕ್ಷೆ ಪಡೆದುಕೊಂಡಿದ್ದಾರೆ. ತನ್ನ ಮಗನೊಂದಿಗೆ ಸನ್ಯಾಸತ್ವದ ಹೊಸ ಜೀವನ ಆರಂಭಿಸಬೇಕೆಂಬ ತಾಯಿಯ ನಿರ್ಧಾರಕ್ಕೆ ಆಕೆಯ ಪತಿ ಮನೀಷ್ ಮತ್ತು ಇತರ ಕುಟುಂಬದ ಸದಸ್ಯರು ಬೆಂಬಲ ನೀಡಿದ್ದಾರೆ. ಯಾವುದೇ ಬೇಸರ ಇಲ್ಲದೆ ಕುಟುಂಬದ ಸದಸ್ಯರು ಸಂತೋಷ ಮತ್ತು ಹೆಮ್ಮೆ ಪಟ್ಟಿದ್ದಾರೆ.

ಇವರು ಜೈನ ಸಂಪ್ರದಾಯದ ಶಿಸ್ತು ಮತ್ತು ಧಾರ್ಮಿಕ ವಿಧಿ ವಿಧಾನ ಮತ್ತು ಆಚರಣೆಗಳನ್ನು ಒಪ್ಪಿಯೇ ಸನ್ಯಾಸಿಗಳಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ದೀಕ್ಷಾ ಸಮಾರಂಭದ ವಿಡಿಯೋ ವೈರಲ್ ಆಗುತ್ತಿದ್ದಂತೆ ವೀಕ್ಷಕರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಂತಹ ನಿರ್ಧಾರಕ್ಕೆ ಸಾಕಷ್ಟು ಧೈರ್ಯ ಬೇಕೆಂದು ಕೆಲವರು ಪ್ರತಿಕ್ರಿಯಿಸಿದ್ದರೆ ಇನ್ನೂ ಕೆಲವರು ಇಂತಹ ನಿರ್ಧಾರದ ಅಗತ್ಯವೇ ಇರಲಿಲ್ಲ ಎಂದಿದ್ದಾರೆ. ಮಗನಿಗೆ ತನ್ನನ್ನು ಎಲ್ಲಿಗೆ ಕಳುಹಿಸುತ್ತಾರೆ ಎಂಬ ಅರಿವೇ ಇರುವುದಿಲ್ಲ. ತನ್ನನ್ನು ತಾಯಿಯಿಂದ ದೂರ ಮಾಡುತ್ತಾರೆ ಎಂಬ ತಿಳವಳಿಕೆಯೂ ಇರುವುದಿಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಇರುವುದಿಲ್ಲ. ಆ ಬಾಲಕ ತನ್ನ ಪೋಷಕರಿಗಾಗಿ ತ್ಯಾಗ ಮಾಡಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಗುಜರಾತ್ ನ ಭವೇಶ್ ಭಾಯಿ ಭಂಡಾರಿ ದಂಪತಿಗಳು ತಮ್ಮ 200 ಕೋಟಿ ರೂ.ಗಳ ಆಸ್ತಿಯನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದರು. ಇವರು ರಥದ ಮಾದರಿಯ ವಾಹನದಲ್ಲಿ ತೆರಳುತ್ತಾ ಈ ದಂಪತಿಗಳು ನೋಟುಗಳನ್ನು ಜನಜಂಗುಳಿಯತ್ತ ಎರಚಿ ಗಮನ ಸೆಳೆದಿದ್ದರು. 2022ರಲ್ಲೇ ಇವರ 16 ವರ್ಷದ ಪುತ್ರ ಮತ್ತು 19 ವರ್ಷದ ಪುತ್ರಿ ಸನ್ಯಾಸತ್ವ ಸ್ವೀಕರಿಸಿದ್ದರು. ಇದೀಗ ಇವರೂ ತಮ್ಮ ಮಕ್ಕಳ ಹಾದಿಯನ್ನೇ ಹಿಡಿದಿದ್ದಾರೆ. 2023 ರಲ್ಲಿ ಡೈಮಂಡ್ ಉದ್ಯಮಿಯೊಬ್ಬರ ಪುತ್ರಿ 9 ವರ್ಷದ ದೇವಾಂಶಿ ಸಂಘ್ವಿ ಸನ್ಯಾಸತ್ವ ಸ್ವೀಕರಿಸಿದ್ದರು.

2015ರಲ್ಲಿ ಪ್ರಖ್ಯಾತ ಉದ್ಯಮಿ ಭನ್ವರಿಲಾಲ್ ದೋಷಿ ಸುಮಾರು 650 ಕೋಟಿ. ರೂ.ವರೆಗಿನ ಆಸ್ತಿಯನ್ನು ತ್ಯಾಗ ಮಾಡಿ ಸನ್ಯಾಸಿಯಾಗಿ ಗಮನ ಸೆಳೆದಿದ್ದರು. ದೋಷಿ ಭಾರತದ ಪ್ಲಾಸ್ಟಿಕ್ ದೊರೆ ಎಂದೇ ಖ್ಯಾತಿ ಗಳಿಸಿದ್ದರು. ತಳ್ಳುವ ಗಾಡಿಯಲ್ಲಿ ಪ್ಯಾರಾಫಿನ್ ಮಾರಾಟ ಮಾಡುತ್ತಾ ಹಂತ ಹಂತವಾಗಿ ಬೆಳೆದು ಡಾಕ್ಟರ್ ಇಂಟರ್ ನ್ಯಾಶನಲ್ ಎಂಬ ಬೃಹತ್ ಕಂಪನಿಯನ್ನು ಸ್ಥಾಪಿಸಿದ್ದರು.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ